Advertisement

ಮಾಸುತ್ತಿದೆ ಸುಣಗಾರರ ಬದುಕಿನ ಬಣ್ಣ 

04:40 PM Aug 09, 2018 | |

ನರೇಗಲ: ಕಲ್ಲು ಸುಟ್ಟು ಸುಣ್ಣ ತಯಾರಿಸುವ ಸುಣಗಾರರ ಬದುಕು ಇತ್ತೀಚಿನ ದಿನಗಳಲ್ಲಿ ತೀರಾ ಮೂರಾಬಟ್ಟೆಯಂತಾಗಿದೆ. ಆಧುನಿಕ ಕಾಲದ ರಾಸಾಯನಿಕ ಮಿಶ್ರಿತ ಸಿದ್ಧ ಸುಣ್ಣ ಹಾಗೂ ಬಣ್ಣಕ್ಕೆ ಜನ ಮಾರು ಹೋಗುತ್ತಿರುವುದರಿಂದ ಸಾಂಪ್ರದಾಯಿಕ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯೇ ಇಲ್ಲದಂತಾಗಿದೆ. ರಾಸಾಯನಿಕ ಮಿಶ್ರಿತ ಸಿದ್ಧ ಸುಣ್ಣ ಮತ್ತು ಬಣ್ಣ ಇಲ್ಲಿನ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸುಲಭವಾಗಿ ಸಿಗುತ್ತಿದ್ದು, ಸಮಯವೂ ಉಳಿತಾಯವಾಗುತ್ತಿದೆ. ಈ ಕಾರಣಕ್ಕೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂತಹ ಉತ್ಪನ್ನಗಳಿಂದ ಕಾಲಾಂತರದಿಂದ ಬಂದ ಸಾಂಪ್ರದಾಯಿಕ ಉದ್ಯೋಗಕ್ಕೆ ಕುತ್ತು ಬಂದಿದೆ. ಇದರಿಂದ ಸುಣಗಾರರು ಸುಣ್ಣದ ಭಟ್ಟಿಯನ್ನು ಮುಂದುವರಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ.

Advertisement

ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಸುಣ್ಣಗಳು ತ್ವರಿತವಾಗಿ ಸಿಗುವುದರಿಂದ ಸುಣಗಾರರು ಕಷ್ಟಪಟ್ಟು ಸಿದ್ಧಗೊಳಿಸಿದ ಸುಣ್ಣ ಯಾರೂ ಕೇಳುವವರು ಇಲ್ಲದಂತಾಗಿದೆ. ಇಂದಲ್ಲ ನಾಳೆ ಸುಣ್ಣಕ್ಕೆ ಹೆಚ್ಚಿನ ಬೆಲೆ ಬಂದೀತು ಎಂದು ಸುಣಗಾರರು ಹಲವಾರು ಕಡೆ ಸುಣ್ಣದ ಭಟ್ಟಿಯನ್ನು ತೆಗೆದಿದ್ದರಾದರೂ ಅದು ಉಪಯೋಗವಾಗುತ್ತಿಲ್ಲ. ಈ ವೃತ್ತಿ ಮಾಡುತ್ತಿರುವವರು ಇತ್ತ ನಂಬಿಕೊಂಡ ವೃತ್ತಿ ಬಿಡಲಾಗದೇ, ಮುಂದುವರೆಸಲೂ ಆಗದೇ ಸಂಕಟಪಡುತ್ತಿದ್ದಾರೆ.

ಸುಣ್ಣದ ಕಲ್ಲು ಹಳ್ಳ ಮತ್ತು ಜಮೀನಿನಲ್ಲಿ ದೊರೆಯುವುದರಿಂದ ಇವರಿಗೆ ದೊಡ್ಡ ಸಮಸ್ಯೆ. ಸಮೀಪದ ಬದಾಮಿ ತಾಲೂಕಿನ ಚೋಳಚಗುಡ್ಡದ ಹಳ್ಳಕ್ಕೆ ಹೋಗಿ ಕಲ್ಲು ತರುತ್ತಾರೆ. ಇದಕ್ಕೆ ಸುಮಾರು ಒಂದು ಗಾಡಿಗೆ 4ರಿಂದ 5 ಸಾವಿರ ರೂ. ನೀಡಬೇಕಿದೆ. ಸುಣ್ಣದ ಹರಳನ್ನು ಸುಡಲು ಇದ್ದಿಲು ಬೇಕೆಬೇಕು. ಆದರೆ, ಈಗ ಇದ್ದಿಲು ಸಿಗುವುದೇ ದೊಡ್ಡ ಸಮಸ್ಯೆಯಾಗಿದೆ. ಕಾರಣ ಈಗ ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಬಳಸುವುದರಿಂದ ಹಣ ಕೊಟ್ಟರೂ ಇದ್ದಿಲು ಸಿಗುತ್ತಿಲ್ಲ ಎಂಬ ಕೊರಗು ಇವರದ್ದಾಗಿದೆ.

ಸುಣ್ಣದ ಕಲ್ಲು, ಇದ್ದಿಲಿಗೆ ಹಣ ತೆತ್ತು ಕಷ್ಟಪಟ್ಟು ತಯಾರಿಸಿದ ಸುಣ್ಣಕ್ಕೆ ಮಾರುಕಟ್ಟೆಯಲ್ಲಿ ಒಂದು ಸೇರಿಗೆ 12ರಿಂದ 15 ರೂ. ಇದೆ. ಬರುವ ಈ ಅಲ್ಪ ಹಣದಲ್ಲೇ ತನ್ನ ಹಾಗೂ ಕುಟುಂಬ¨ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಸುಣಗಾರರದಾಗಿದೆ. ಹಿಂದೆ ಮಣ್ಣಿನ ಮನೆಗಳು ಜಾಸ್ತಿ ಇದ್ದು, ಮನೆಗೆ ಹಬ್ಬ ಹರಿದಿನಗಳಲ್ಲಿ ಜನರು ಹೆಚ್ಚಾಗಿ ಸುಣ್ಣ ಹಚ್ಚುತ್ತಿದ್ದರು. ಆದರೆ, ಈಗ ಆರ್‌ಸಿಸಿ ಮನೆಗಳ ನಿರ್ಮಾಣವಾಗಿದಕ್ಕೆ ಸಿದ್ಧ ಸುಣ್ಣವನ್ನೇ ಬಳಸುತ್ತಾರೆ. ಜನರು ಕೂಡ ಜಗಮಗಿಸುವ ಹೊಸ ಸುಣ್ಣಕ್ಕೆ ಮಾರು ಹೋಗಿದ್ದರಿಂದ ಸುಣ್ಣವನ್ನು ಕೇಳುವರು ಇಲ್ಲದಾಗಿ ಸುಣ್ಣಸುಡುವ ಸುಣಗಾರನ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಈ ಹಿಂದೆ ಸುಣಗಾರರು ಹಬ್ಬ ಹರಿದಿನಗಳಲ್ಲಿ ಸುಣ್ಣವನ್ನು ಮನೆಮನೆಗೆ ಕೊಟ್ಟು ಹೋಗುತ್ತಿದ್ದರು. ಇದರಿಂದ ಬರುವ ಹಣ ಮತ್ತು ದವಸ ಧಾನ್ಯಗಳಿಂದ ಸುಖಜೀವನ ನಡೆಸುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಇಲ್ಲಿನ ಜಕ್ಕಲಿ ಗ್ರಾಮದಲ್ಲಿ ಈ ವೃತ್ತಿಯನ್ನೇ ನಂಬಿ ಜೀವನ ಸಾಗಿಸುವ ಹಲವಾರು
ಕುಟುಂಬಗಳಿಗೆ ವೃತ್ತಿ ಭದ್ರತೆ ಮತ್ತು ಆದಾಯವಿಲ್ಲದಾಗಿದೆ. ಸರ್ಕಾರ ಇಂತಹ ಕುಟುಂಬಗಳಿಗೆ ನೆರವಾಗಬೇಕಿದೆ. 

Advertisement

ಮಳೆ-ಚಳಿ ಎನ್ನದೇ ನಮ್ಮ ಕೆಲಸದಲ್ಲಿ ನಾವು ತೊಡಗುತ್ತೇವೆ. ಕಲ್ಲುಗಳಿಗೆ ಬಹಳ ಬೇಡಿಕೆ ಇದೆ. ಆದರೂ ಬೇರೆ ಕಡೆಯಿಂದ ತಂದು ಸುಣ್ಣ ತಯಾರು ಮಾಡಲಾಗುತ್ತಿದೆ. ನಂತರ ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಸೇರಿಗೆ 12ರಿಂದ 15 ರೂ. ಸಿಗುತ್ತದೆ. ಸಿದ್ಧ ಬಣ್ಣ ಹಚ್ಚುವವರ ಸಂಖ್ಯೆ ಜಾಸ್ತಿ ಇರುವುದರಿಂದ ಬೇಡಿಕೆ ಕುಗ್ಗಿದೆ.
ಸಂಗಪ್ಪ ತುರಾಯದ
ಜಕ್ಕಲಿ ಗ್ರಾಮದ ಸುಣಗಾರ

ಕಳೆದ 45 ವರ್ಷಗಳಿಂದ ಸುಣ್ಣ ತಯಾರಿಸುತ್ತಿದ್ದೇವೆ. ಆದರೆ ನಾವು ಯಾವುದೇ ಅಭಿವೃದ್ಧಿಯಾಗಿಲ್ಲ. ನಮ್ಮಗೆ ಯಾವುದೇ ಆಸ್ತಿಯಿಲ್ಲ. ಸುಣ್ಣದ ಭಟ್ಟಿಯೇ ನಮ್ಮ ಆಸ್ತಿ.
ಲಕ್ಷ್ಮವ್ವ ತುರಾಯದ

ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next