Advertisement

ಕೃಷಿ ಚಟುವಟಿಕೆಯಿಂದ ಕೈದಿಗಳ ಶಿಕ್ಷೆ ಕಡಿಮೆ.!

10:16 AM Oct 25, 2019 | Suhan S |

ಬೆಂಗಳೂರು: ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುವ ಕೈದಿಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಶಿಕ್ಷೆ ಪ್ರಮಾಣ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

Advertisement

ದೇವನಹಳ್ಳಿ ಬಯಲು ಕಾರಾಗೃಹದಲ್ಲಿ 32 ಮಂದಿ ಕೈದಿಗಳಿದ್ದು, ಕಾರಾಗೃಹ ವ್ಯಾಪ್ತಿಯ 113.25 ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಬಂದಿಯಾಗಿರುವ ಕೈದಿಗಳು ತರಕಾರಿ, ಹಣ್ಣು ಬೆಳೆಯುತ್ತಿದ್ದು, ನಿಯಮಗಳ ಪ್ರಕಾರ ಉತ್ತಮವಾಗಿ ಕೆಲಸ ಮಾಡಿದರೆ ಅವರಿಗೆ ವರ್ಷದಲ್ಲಿ 4 ತಿಂಗಳು ಶಿಕ್ಷೆ ಕಡಿಮೆಯಾಗುತ್ತದೆ.

ಉದಾಹರಣೆಗೆ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವ್ಯಕ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿದರೆ ಅವಧಿ ಪೂರ್ವ ಬಿಡುಗಡೆಗೆ ಅಲ್ಲಿನ ಪೊಲೀಸರು ಶಿಫಾರಸು ಮಾಡುತ್ತಾರೆ. ಸನ್ನಡತೆ ಆಧಾರದ ಮೇಲೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಿಡುಗಡೆ ಹೊಂದುವ ಕೈದಿಗಳ ಪಟ್ಟಿಯಲ್ಲಿ ಮೊದಲ ಆದ್ಯತೆ ಇವರಿಗೆ ಸಿಗಲಿದ್ದು, 2019ರ ಸ್ವಾತಂತ್ರೊತ್ಸವ ದಿನಾಚರಣೆಯಲ್ಲಿ ಮನು, ರಾಮ ಸೇರಿ ನಾಲ್ವರು ಬಿಡುಗಡೆಯಾಗಿದ್ದಾರೆ.

ಕೈದಿಗಳೇ ಬೆಳೆದ ತರಕಾರಿ ಪರಪ್ಪನ ಅಗ್ರಹಾರ ಸೇರಿದಂತೆ ಸುತ್ತಲಿನ ಎಲ್ಲಾ ಜೈಲುಗಳು, ಹಾಪ್‌ ಕಾಮ್ಸ್‌ ಮತ್ತು ಮಾರುಕಟ್ಟೆಗೆ ಸರಬರಾಜಾಗುತ್ತಿವೆ. ಬಯಲು ಕಾರಾಗೃಹದ 113.25 ಎಕರೆ ಜಾಗದಲ್ಲಿ ಕೈದಿಗಳು ರಾಗಿ, ತೊಗರಿ, ಹುರುಳಿ, ಸಿರಿಧಾನ್ಯಗಳು, ಮಾವು, ಸೀಬೆ, ಹಲಸು, ಹೀರೆಕಾಯಿ, ಸೋರೆಕಾಯಿ, ಪಡವಲಕಾಯಿ, ಬದನೆಕಾಯಿ, ನುಗ್ಗೆಕಾಯಿ, ಮೂಲಂಗಿ, ಮೆಣಸಿನಕಾಯಿ, ಮಂತ್ಯೆ, ದಂಟು ಸೇರಿ ಒಟ್ಟಾರೆ 22 ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದ ಕೈದಿಗೆ ಊಟ ಜತೆಗೆ ಪ್ರತಿದಿನ 100 ರೂ. ದಿನಗೂಲಿ ಸಿಗಲಿದ್ದು, ತರಕಾರಿಗಳುಮತ್ತು ಹಣ್ಣುಗಳನ್ನು ವಾಹನ ಮೂಲಕವೂ ಪ್ರತಿದಿನ ಸಂಜೆ 4ರಿಂದ 5.30ರ ವರೆಗೆ ವ್ಯಾಪಾರ ನಡೆಯಲಿದೆ.

ಬಂದಿಗಳಿಗೆ ಆಧುನಿಕ ಕೃಷಿ ಯಂತ್ರೋಪಕರಣಗಳಾದ ಟ್ರಾಕ್ಟರ್‌, ಪವರ್‌ ಟಿಲ್ಲರ್‌, ವೀಡರ್‌, ರೋಟವೇಟರ್‌, ಪವರ್‌ ಸ್ಪ್ರೆಯರ್‌ ಯಂತ್ರಗಳ ಚಾಲನೆ, ಹನಿ ನೀರಾವರಿ ಪದ್ಧತಿಯಲ್ಲಿ ಹೆಚ್ಚಿನ ಇಳುವರಿ ನೀಡುವ ಕೃಷಿ ಪದ್ಧತಿ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎನ್ನುತ್ತಾರೆ ಬಯಲು ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಶಿ ಮಾಳಿ.

Advertisement

ಪರಪ್ಪನ ಅಗ್ರಹಾರಕ್ಕೆ ತರಕಾರಿ ರವಾನೆ: ಬೆಂಗಳೂರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಎರಡು ದಿನಗಳಿಗೆ ಒಂದು ಟನ್‌ ತರಕಾರಿಯ ಬಯಲು ಕಾರಾಗೃಹದಿಂದ ರವಾನೆಯಾಗುತ್ತದೆ. ಚಿಕ್ಕಬಳ್ಳಾಪುರ ಕಾರಾಗೃಹ, ಜಿಲ್ಲಾ ಕಾರಾಗೃಹಗಳಿಗೂ ಇಲ್ಲಿ ಬೆಳೆದ ತರಕಾರಿ, ಹಣ್ಣು, ಸೊಪ್ಪು   ಸರಬರಾಜು ಆಗುತ್ತಿದ್ದು, ಉಳಿದ ತರಕಾರಿ ಮತ್ತು ಸೊಪ್ಪನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಕೃಷಿ ಚಟುವಟಿಕೆ ಮಾತ್ರವಲ್ಲದೇ ಹೈನುಗಾರಿಕೆಯೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

 ಪ್ರತ್ಯೇಕ ಆ್ಯಪ್‌ ತರಲು ಚಿಂತನೆ :  ಬಯಲು ಕಾರಾಗೃಹದಲ್ಲಿ ಏನೆಲ್ಲಾ ಬೆಳೆ ಬೆಳೆಯಲಾಗುತ್ತಿದೆ. ಎಷ್ಟು ಎಕರೆ ಪ್ರದೇಶದಲ್ಲಿ ಬೆಳೆ ಇದೆ. ಪ್ರತಿದಿನ ಎಷ್ಟು ಪ್ರಮಾಣದ ತರಕಾರಿ, ಹಣ್ಣು, ಸೊಪ್ಪು ಸರಬರಾಜು ಆಗಲಿದೆ. ಎಷ್ಟು ಹಸುಗಳಿವೆ, ಯಾವ್ಯಾವು ಎಷ್ಟು ಹಾಲು ನೀಡುತ್ತವೆ. ಶಿಕ್ಷಾ ಬಂಧಿಗಳು ಕಾರಾಗೃಹದಿಂದ ಬಿಡುಗಡೆಯಾದ ನಂತರ ತಾವು ಪಡೆದಿರುವತರಬೇತಿಯಲ್ಲಿ ಉದ್ಯೋಗ ಕೈಗೊಂಡಿರುವ ಸಮಗ್ರ ಮಾಹಿತಿ ನೀಡುವ ಆ್ಯಪನ್ನು ಜಾರಿ ತರಲು ಚಿಂತನೆ ನಡೆಸಲಾಗಿದೆ ಎಂದು ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಶಿ ಮಾಳಿ ತಿಳಿಸಿದರು.

ಬಯಲು ಕಾರಾಗೃಹದಲ್ಲಿ ಬೆಳೆಯುವತರಕಾರಿಗಳು ಕೇಂದ್ರ, ಜಿಲ್ಲಾ ಕಾರಾಗೃಹಕ್ಕೆ ನೀಡಲಾಗುತ್ತಿದ್ದು, ಉಳಿದ ತರಕಾರಿ ಮಾರಾಟ ಮಾಡಲಾಗುತ್ತಿದೆ. 113 ಎಕರೆಯಲ್ಲಿ ಕೃಷಿಹೊಂಡ, ಕೋಳಿ ಫಾರಂ, ಗಿರ್‌ ತಳಿ ಹಸುಗಳನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತಿಸಲಾಗಿದೆ. ಮಲ್ಲಿಕಾರ್ಜುನ ಶಿ ಮಾಳಿ, ಅಧೀಕ್ಷಕ.

ಕೃಷಿಮೇಳಕ್ಕೆ ಮೂರನೇ ಬಾರಿ ಬರುತ್ತಿದ್ದೇನೆ. ತೋಟಗಾರಿಕೆಗೆ ಸಂಬಂಧಿಸಿ ಹೊಸ- ಹೊಸ ಯಂತ್ರೋಪಕರಣಗಳು ಇದ್ದು, ಅವುಗಳ ಬಳಕೆ, ಸಬ್ಸಿಡಿ ಬಗ್ಗೆ ಮಾಹಿತಿ   ಪಡೆದಿದ್ದೇನೆ. ಅಚ್ಚುಕಟ್ಟಾಗಿ ಮೇಳ ಆಯೋಜಿಸಿದ್ದು, ಒಂದೇ ಸೂರಿನಡಿ ಬೆಳೆಗಳ ಬಗ್ಗೆ ತಿಳಿಯಲಿದೆ. ಬಸವೇಗೌಡ, ಹಾಸನ

 

-ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next