Advertisement

ಮಾಸುತ್ತಿದೆ ಮೇದಿನಿಯ ಸಣ್ಣಕ್ಕಿ ಸುವಾಸನೆ!

12:50 PM May 04, 2022 | Team Udayavani |

ಕುಮಟಾ: ಭತ್ತದ ತೆನೆ ಬರುವಾಗಲೇ ಗದ್ದೆಯ ತುಂಬ ತನ್ನ ಪರಿಮಳವನ್ನು ಪಸರಿಸುತ್ತಾ ಎಲ್ಲೆಡೆ ಪ್ರಸಿದ್ದಿ ಪಡೆದ ಅಕ್ಕಿ ಅದು.ಬೆಳೆಯುವುದು ಕುಗ್ರಾಮದಲ್ಲಾದರೂ ಇದರ ಬೇಡಿಕೆ ಮಾತ್ರ ರಾಜ್ಯದೆಲ್ಲಡೆ ಇದೆ. ಅದುವೇ ತಾಲೂಕಿನ ಅತೀ ಎತ್ತರದ ಪ್ರದೇಶ ಹಾಗೂ ಕುಗ್ರಾಮ ಮೇದಿನಿಯ ಸಣ್ಣಕ್ಕಿ.

Advertisement

ಅಕ್ಕಿಯ ಡಬ್ಬ ತೆರೆದರೆ ಸಾಕು ಇಡೀ ಮನೆಯ ತುಂಬ ಪರಿಮಳ ಹರಡುವ, ಇದು ಭತ್ತ ಬೆಳೆಯುವಾಗಲೇ ಊರಿನ ತುಂಬಾ ಸುವಾಸನೆ ಬೀರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಗ್ರಾಮ ಮೇದಿನಿ. ಸಮುದ್ರ ಮಟ್ಟದಿಂದ 2 ಸಾವಿರ ಮೀಟರ್‌ಗೂ ಹೆಚ್ಚು ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಶತಮಾನಗಳಿಂದ ಬೆಳೆಯುವ ವಿಶಿಷ್ಟ ತಳಿಯ ಭತ್ತವೇ ಮೇದಿನಿ ಸಣ್ಣಕ್ಕಿ ಎಂದು ಪ್ರಸಿದ್ಧವಾಗಿದೆ.

ಕುಮಟಾದಿಂದ ಸಿದ್ದಾಪುರಕ್ಕೆ ತೆರಳುವ ಮಾರ್ಗದಲ್ಲಿ 38 ಕಿಮೀ ತೆರಳಿದ ನಂತರ ಸೊಪ್ಪಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಿಗುವ ಹುಲಿದೇವರ ಕೊಡ್ಲಿನ ಸಮೀಪ ಮೇದಿನಿ ಗ್ರಾಮವಿದೆ. ಇಲ್ಲಿಗೆ ತೆರಳಲು ಮುಖ್ಯ ರಸ್ತೆಯಿಂದ ಕಾಡಿನಲ್ಲಿ 8 ಕಿಮೀ ಘಟ್ಟ ಹತ್ತಿ ಸಾಗಬೇಕು. ಘಟ್ಟದ ಕೊನೆಯಲ್ಲಿ ಸಿಗುವ ಕುಗ್ರಾಮವೇ ಮೇದಿನಿ.

ಹಿಂದಿನ ಕಾಲದಲ್ಲಿ ರಾಜರಿಗೋಸ್ಕರ ಇಲ್ಲಿ ಈ ಸಣ್ಣಕ್ಕಿ ಬೆಳೆಯಲಾಗುತ್ತಿದ್ದು, ಸಾಂಪ್ರದಾಯಿಕ ಪದ್ಧತಿಯಿಂದ ಸಂರಕ್ಷಿಸಿ ಸಾವಯವ ಪದ್ಧತಿಯಲ್ಲಿ ಈಗಲೂ ಬೆಳೆಯುತ್ತಾರೆ. ಈ ಹಿಂದೆ ಇಲ್ಲಿರುವ ಸುಮಾರು 56 ಕುಟುಂಬಗಳು 40 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಭತ್ತವನ್ನು ಬೆಳೆಸುತ್ತಿದ್ದು, ಇತ್ತೀಚಿನ ಐದಾರು ವರ್ಷಗಳಲ್ಲಿ 8 ರಿಂದ 10 ಕುಟುಂಬಗಳು ಮಾತ್ರ ಸುಮಾರು 6 ಎಕರೆ ಪ್ರದೇಶಕ್ಕೆ ಸೀಮಿತವಾಗಿದೆ. ಈ ಭತ್ತದ ಇಳುವರಿ ಕಡಿಮೆಯಿದ್ದು ಎಕರೆಗೆ ಹೆಚ್ಚೆಂದರೆ 8 ರಿಂದ 10 ಕ್ವಿಂಟಾಲ್‌ ಸಣ್ಣಕ್ಕಿ ಬೆಳೆಯಬಹುದಾಗಿದೆ.

ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಇದರ ಪರಿಮಳಕ್ಕೆ ಗದ್ದೆಗಳಿಗೆ ಲಗ್ಗೆಯಿಟ್ಟು ಭತ್ತವನ್ನು ತಿಂದು ಹಾಳು ಮಾಡುತ್ತದೆ. ಸಾಕಷ್ಟು ಬೆಳೆದರೆ ತಲೆ ಹೊರೆಯ ಮೇಲೆ ಮೈಲುಗಟ್ಟಲೆ ನಡೆದು ಮಾರಾಟಕ್ಕೆ ತೆರಳಬೇಕು. ಮಾರಾಟಕ್ಕೆ ಸರಿಯಾದ ವಾಹನ ವ್ಯವಸ್ಥೆಯೂ ಇಲ್ಲದ ಕಾರಣದಿಂದ ಗ್ರಾಮಸ್ಥರು ಸಣ್ಣಕ್ಕಿ ಬದಲು ತಮಗೆ ಊಟಕ್ಕೆ ಬೇಕಾದ ಭತ್ತ ಬೆಳೆಯುತ್ತಿದ್ದಾರೆ. ಇನ್ನು ಕೆಲವರು ಹೆಚ್ಚು ಇಳುವರಿ ಕೊಡುವ ತಳಿಯ ಬೈಬ್ರಿàಡ್‌ ಭತ್ತಗಳನ್ನು ಬೆಳೆಯಲಾರಂಭಿಸಿದ್ದಾರೆ.

Advertisement

ಇದರಿಂದ ನಿಧಾನವಾಗಿ ಸಣ್ಣಕ್ಕಿಯ ತಳಿ ಮಾಸುವ ಆತಂಕವಿದೆ. ಮುಂದೊಂದು ದಿನ ಈ ತಳಿಯೇ ಕಣ್ಮರೆಯಾದೀತೇನೋ ಎಂಬ ಚಿಂತೆಗೂ ಕಾರಣವಾಗಿದೆ.

ವಿಶೇಷ ತಳಿಯ ಸಣ್ಣಕ್ಕಿ: ಹೆಸರೇ ಹೇಳುವಂತೆ ಅತಿ ಸಣ್ಣದಾದ ಗುಂಡಾದ ಕಾಳುಗಳ ಅಕ್ಕಿ ಇದು. ಭತ್ತವೂ ಇತರ ತಳಿ ಭತ್ತಕ್ಕಿಂತ ಚಿಕ್ಕದಾಗಿರುತ್ತದೆ. ಇದರ ಹುಲ್ಲು ಹುಲುಸಾಗಿ ಬೆಳೆಯುತ್ತದೆ. ಹೈಬ್ರಿಡ್‌ ಅಕ್ಕಿಗಳಂತೆ ತುಂಬ ತೆನೆ ಬಾರದೆ, ತೆನೆಯಲ್ಲಿ ಭತ್ತದ ಕಾಳುಗಳು ವಿರಳವಾಗಿರುತ್ತವೆ. ತೆನೆ ಮಾಗುವ ಹೊತ್ತಿಗೆ ಪರಿಮಳ ಬರಲಾರಂಭಿಸುತ್ತದೆ. ಬಾಸುಮತಿ ಅಕ್ಕಿಯಂತೆ ಕೆ.ಜಿ.ಗೆ ಸಾವಿರ ರೂಪಾಯಿಗೋ, ಐದು ನೂರಕ್ಕೋ ಮಾರಾಟವಾಗುವ ಪ್ಯಾಕೆಟ್‌ ಅಕ್ಕಿ ಇದಲ್ಲ. ಸದ್ಯ ಇಲ್ಲಿನ ಜನ ಕೆಜಿಗೆ 150, 200 ರಿಂದ 250, 300 ರೂ.ಗಳ ವರೆಗೆ ಮಾರಾಟ ಮಾಡುತ್ತಾರೆ. ಇನ್ನು ಇದರ ಅನ್ನ ಮಾಡಿದ ನಂತರ ಬರುವ ಘಮ ಘಮ ಪರಿಮಳ ಭೋಜನಾಸಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ಈ ಅಕ್ಕಿ ಪಾಯಸ ಕೇಸರಿ ಬಾತ್‌ ಬಿರ್ಯಾನಿ ಮಾಡಲು ಒಳ್ಳೆಯದು.

ಬೆಟ್ಟದ ಮೇಲೆ ಕಾಡಿನ ನಡುವೆ ಇರುವ ಊರು ಶೀತದ ವಾತಾವರಣ ಹೊಂದಿದೆ. ಇಲ್ಲಿನ ಮಣ್ಣು ಮತ್ತು ಹವಾ ಗುಣವೇ ಇಲ್ಲಿನ ಅಕ್ಕಿ ಅಷ್ಟು ವಿಶಿಷ್ಟವಾಗಿರಲು ಕಾರಣ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಇಲ್ಲಿನ ಸಣ್ಣಕ್ಕಿ ಭತ್ತವನ್ನು ಬೇರೆಡೆ ಕೊಂಡೊಯ್ದು ಬೆಳೆಯುವ ಯತ್ನ ನಡೆಸಿದ್ದಾರೆ. ಆದರೆ ಹೊರಗಿನ ಬೆಳೆಗೆ ಇಷ್ಟು ಪರಿಮಳ ಬಾರದು ಎಂಬುದು ನಮ್ಮ ಅಭಿಪ್ರಾಯ. ಈ ಅಕ್ಕಿಗೆ ಹೊರ ದೇಶಗಳಲ್ಲಿಯೂ ಬೇಡಿಕೆ ಇದ್ದು, ಇಲ್ಲಿನ ಮೂಲ ನಿವಾಸಿಗಳು ಹೊರ ದೇಶಗಳಲ್ಲಿ ಉಳಿದುಕೊಂಡಿರುವವರು ಪ್ರತಿಬಾರಿ ಬಂದಾಗ ಇಲ್ಲಿಂದ ಅಕ್ಕಿಯನ್ನು ತೆಗೆದುಕೊಂಡು ಹೋಗುತ್ತಾರೆ. -ಹನುಮಂತ ಗೌಡ. ಸ್ಥಳೀಯ ರೈತ                

ಮಂಜುನಾಥ ದೀವಗಿ

Advertisement

Udayavani is now on Telegram. Click here to join our channel and stay updated with the latest news.

Next