Advertisement

ಹೆಲ್ಮೆಟ್‌ ಧರಿಸಿ ಸಾವಿನ ಸಂಖ್ಯೆ ಇಳಿಸಿ

09:24 PM Jul 16, 2019 | Lakshmi GovindaRaj |

ಕೊಳ್ಳೇಗಾಲ: ಬೈಕ್‌ ಅಪಘಾತದಲ್ಲಿ ಸಾಯುವವರ ಸಂಖ್ಯೆ ಕಡಿಮೆ ಮಾಡುವ ಸಲುವಾಗಿ ಸುಪ್ರಿಂಕೋರ್ಟ್‌ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವಂತೆ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶವನ್ನು ಬೈಕ್‌ ಸವಾ ರರು ಕಡ್ಡಾಯವಾಗಿ ಪಾಲಿಸಿ ಪ್ರಾಣ ರಕ್ಷಣೆ ಮಾಡಿಕೊಳ್ಳಿ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಜೆ.ಕೃಷ್ಣ ಹೇಳಿದರು.

Advertisement

ಪಟ್ಟಣದ ನ್ಯಾಯಾಲಯದಲ್ಲಿ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಏರ್ಪಡಿಸಿದ್ದ ಹೆಲ್ಮೆಟ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಮುಖ ರಸ್ತೆಗಳಲ್ಲಿ ಜಾಥಾ: ಪಟ್ಟಣದ ವಿವಿಧ ಕಾಲೇಜು ವಿದ್ಯಾರ್ಥಿಗಳ ಬೃಹತ್‌ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತೆರಳಿ ಸಾರ್ವಜನಿಕರು, ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಪ್ರಾಣ ಉಳಿಸಿ ಎಂಬ ಘೋಷಣೆಗಳನ್ನು ಕೂಗುತ್ತಾ, ಸರ್ಕಾರಿ ನ್ಯಾಷನಲ್‌ ಶಾಲೆಯ ಮೈದಾನದಲ್ಲಿ ಬಂದು ಸೇರಿದರು.

ಕಾನೂನಿಗೆ ಗೌರವ ನೀಡಿ: ನ್ಯಾಯಾಧೀಶರು ಮಾತ ನಾಡಿ, ಪ್ರತಿಯೊಬ್ಬರು ಕಾನೂನಿಗೆ ಗೌರವ ಕೊಡಬೇಕು ಮತ್ತು ಯಾರು ಸಹ ಉಲ್ಲಂಘನೆ ಮಾಡಬಾರದು. ಕಾನೂನು ಉಲ್ಲಂಘನೆ ಮಾಡಿದ ವೇಳೆ ಅಪಘಾತಗಳು ನಡೆ ದಾಗ ಬೈಕ್‌ ಸವಾರರು ತೀವ್ರಗಾಯಗೊಂಡು ಸಾವನ್ನಪ್ಪಿದ ಪಕ್ಷದಲ್ಲಿ ಅವರ ಕುಟುಂಬಸ್ಥರು ಬೀದಿಗೆ ಬರಬೇಕಾಗುತ್ತದೆ. ಇದನ್ನು ಎಚ್ಚೆತ್ತು ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಜಾಥಾ ಯಶಸ್ವಿಗೊಳಿಸಿ: ರಸ್ತೆ ಅಪಘಾತಗಳನ್ನು ತಡೆಯುವ ಸಲುವಾಗಿ ಮೊಟ್ಟಮೊದಲಿಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಸಂಬಂಧಿಸಿದ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದ ನ್ಯಾಯಾಧೀಶರು, ವಿದ್ಯಾರ್ಥಿಗಳು ಸೂಕ್ತ ಮಾಹಿತಿಗಳನ್ನು ಪಡೆದುಕೊಂಡು ಜಾಗೃತಿಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

Advertisement

ಪ್ರತಿಯೊಬ್ಬರು ಹೆಲ್ಮೆಟ್‌ ಧರಿಸಿ: ಹೆಲ್ಮೆಟ್‌ ಧರಿಸದೆ ಬೈಕ್‌ ಚಾಲನೆಗೆ ಪೊಲೀಸರು ತಡೆದು ದಂಡ ವಿಧಿಸುತ್ತಾರೆ. ದಂಡವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಪ್ರತಿಯೊಬ್ಬರು ಹೆಲ್ಮೆಟ್‌ ಧರಿಸಿ ಜೀವ ರಕ್ಷಣೆ ಮಾಡಿಕೊಂಡಾಗ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪರಿಹಾರದ ಹಣದಿಂದ ಲಾಭವಿಲ್ಲ: ಸರ್ಕಲ್‌ ಇನ್ಸ್‌ಪೆಕ್ಟರ್‌ ಕೆ.ಶ್ರೀಕಾಂತ್‌ ಮಾತನಾಡಿ, ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರದಿಂದ ಜೀವ ರಕ್ಷಣೆಯಾಗುವುದಿಲ್ಲ. ಜೀವ ಹೋದ ಪಕ್ಷದಲ್ಲಿ ಅಂತಹವರ ಕುಟುಂಬದಲ್ಲಿ ಅಶಾಂತಿ ಉಂಟಾಗಿ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿ ಮೃತಪಟ್ಟ ವೇಳೆ ಅಂತಹವರ ಮನೆಯ ಸ್ಥಿತಿ ಏನಾಗಿರುತ್ತದೆ ಎಂಬುದನ್ನು ಪ್ರತಿಯೊಬ್ಬರು ಊಹಿಸಿಕೊಳ್ಳಬೇಕು ಎಂದರು.

ಪ್ರಾಣ ರಕ್ಷಿಸಲು ದಂಡ ವಿಧಿಸುವ ಇಲಾಖೆ: ಹೆಲ್ಮೆಟ್‌ ಧರಿಸದ ಬೈಕ್‌ ಸವಾರರಿಗೆ ಪೊಲೀಸ್‌ ಇಲಾಖೆ ಕೇವಲ ದಂಡ ವಿಧಿಸುವ ಸಲುವಾಗಿ ವಸೂಲಿ ಮಾಡುವುದಿಲ್ಲ. ಅವರ ಪ್ರಾಣ ರಕ್ಷಣೆಗೆ ಎಚ್ಚರಿಕೆ ವಹಿಸುವ ಸಲುವಾಗಿ ದಂಡ ವಸೂಲಿ ಮಾಡಲಾಗುತ್ತದೆ. ಇದನ್ನು ಎಚ್ಚೆತ್ತು ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವ ಪ್ರಯತ್ನಕ್ಕೆ ಮುಂದಾಗಬೇಕೆಂದರು.

ವಿದ್ಯಾರ್ಥಿಗಳೇ ಹೆಚ್ಚು ಸಾವು: ಭಾರತದಲ್ಲಿ ರಸ್ತೆ ಅಪಘಾತಗಳು ಒಂದು ಲಕ್ಷಕ್ಕೂ ಹೆಚ್ಚು ಸಂಭವಿಸುತ್ತಿದ್ದು, ಅದರ ಪೈಕಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದೆ ಮತ್ತು ಮೃತಪಟ್ಟ ಯುವಕರು ಹೆಲ್ಮೆಟ್‌ ಧರಿಸದೆ ತಲೆ ಭಾಗಕ್ಕೆ ತೀವ್ರ ಪೆಟ್ಟು ಸತ್ತವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಹೆಲ್ಮೆಟ್‌ ತಿರಸ್ಕಾರ ಮಾಡದೆ ಪ್ರತಿಯೊಬ್ಬರು ಹೆಲ್ಮೆಟ್‌ ಧರಿಸಿ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಟಿ.ಶ್ರೀಕಾಂತ್‌, ಅಪರ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಕೊಠಾರಿ, ವಕೀಲರ ಸಂಘದ ಅದ್ಯಕ್ಷ ಪಿ.ಮಹದೇವ, ಸರ್ಕಾರಿ ಅಭಿಯೋಜಕ ಎಂ.ನಾಗೇಶ್‌, ಪಟ್ಟಣ ಠಾಣೆಯ ಎಸ್‌ ಐ ಜೆ.ರಾಜೇಂದ್ರ, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ ಐ ವಿ.ಸಿ.ಅಶೋಕ್‌, ವಕೀಲರ ಸಂಘದ ಉಪಾಧ್ಯಕ್ಷೆ ನಿರ್ಮಲ ಮಧುಸೂಧನ್‌, ಕಾರ್ಯದರ್ಶಿ ಡಿ.ಕೆಂಪಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next