Advertisement

ಜಾಲತಾಣದಿಂದ ಗಾಂಭೀರ್ಯತೆ ಕಡಿಮೆ

08:58 PM Mar 15, 2021 | Team Udayavani |

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಸಂದೇಶ ಬೇಗ ಪ್ರಚಾರ ಹೊಂದಿ ಒಳ್ಳೆಯ ವಿಚಾರ, ಗಾಂಭೀರ್ಯತೆ ಕಡಿಮೆಯಾಗುತ್ತಿದೆ ಎಂದು ವಿಧಾನ ಪರಿಷತ್‌ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಹೇಳಿದರು.

Advertisement

ಭಾನುವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನತೆ ಸಾಮಾಜಿಕ ಜಾಲತಾಣ ಹೆಚ್ಚು ಬಳಸುತ್ತಿದ್ದು, ದಿನನಿತ್ಯದ ಚಟುವಟಿಕೆ ಆರಂಭವಾಗುವುದೇ ಮಾಹಿತಿ ತಂತ್ರಜ್ಞಾನದಿಂದ. ಸಾಮಾಜಿಕ ಜಾಲತಾಣವನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅದರ ಗಾಂಭೀರ್ಯತೆ ಹಾಳಾಗುತ್ತದೆ ಎಂದು ತಿಳಿಸಿದರು. ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ, ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸಲು ಜಾಲತಾಣ ಮುಖ್ಯ ಸಾಧನವಾಗಿದೆ. ಈ ಹಿಂದೆ ಸಾಮಾಜಿಕ ಜಾಲತಾಣದ ಬಳಕೆ ಕಡಿಮೆ ಇತ್ತು. ವಿಜ್ಞಾನ- ತಂತ್ರಜ್ಞಾನ ಬೆಳೆದಂತೆ ಸಾಮಾಜಿಕ ಜಾಲತಾಣ ಪ್ರಬಲವಾಗಿದೆ. ಇದರಲ್ಲಿ ಬಿತ್ತರವಾಗುವ ವಿಷಯಗಳ ಕುರಿತು ವಿಮರ್ಶಿಸುವ, ಸತ್ಯಾಸತ್ಯತೆ ತಿಳಿಯುವ ಮನಸ್ಥಿತಿ ಬೆಳೆಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠವು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದಲ್ಲಿನ ಜನಪ್ರಿಯ ಯೋಜನೆ ಗಳ ಮಾಹಿತಿಯನ್ನು ಜನತೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವಿರೋಧಿ ಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಅದಕ್ಕೆ ಕಾರಣ ಏನು ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದರು.

ಕೊರೊನಾದಿಂದ ಸರ್ಕಾರಕ್ಕೆ 63 ಲಕ್ಷ ಕೋಟಿ ರೂ. ಆದಾಯ ತೆರಿಗೆ ನಷ್ಟವಾಗಿದೆ. ಆರ್ಥಿಕ ಚೇತರಿಕೆ ಹಿನ್ನೆಲೆಯಲ್ಲಿ ಸಾಕಷ್ಟು ವರ್ಗಗಳಿಗೆ ನೆರವು ನೀಡಿದೆ. ಇದೆಲ್ಲವನ್ನು ನಾವು ಅರಿಯಬೇಕು. ಆದರೆ, ಸಾಮಾಜಿಕ ಮಾಧ್ಯಮಗಳು ಹೆಚ್ಚಾಗಿ ನಕಾರಾತ್ಮಕ ವಿಚಾರಗಳಿಗೆ ಆದ್ಯತೆ ನೀಡುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ವಿಷಾ ದಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಮರುಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟ ಆಲೋಚನೆಗಳು ಬೇಗ ಹರಿದಾಡುತ್ತವೆ. ಆ ಹಿನ್ನೆಲೆಯಲ್ಲಿ ಒಳ್ಳೆಯ ವಿಚಾರಗಳನ್ನು ಜನತೆಗೆ ಬಲವಂತವಾಗಿ ತುಂಬಬೇಕಿದೆ. ಸಾಮಾಜಿಕ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದ್ದು ಅತ್ಯಂತ ಎಚ್ಚರಿಕೆಯಿಂದ ಬಳಕೆ ಮಾಡಬೇಕು.

ಕೆಟ್ಟ ವಿಚಾರಗಳಿಗೆ ಆಸ್ಪದ ವಾಗದಂತೆ ಉತ್ತಮ ಬರಹಗಳ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸಾಮಾಜಿಕ ಜಾಲತಾಣ ರಾಜ್ಯ ಸಹಸಂಚಾಲಕ ಪ್ರಶಾಂತ್‌ ಜಾದವ್‌, ರಾಜ್ಯ ಸಂಚಾಲಕ ವಿನೋದ್‌ ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ ಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್‌ ಶೆಟ್ಟಿ, ಜಿಲ್ಲಾ ಸೋಶಿಯಲ್‌ ಮೀಡಿಯಾ ಸಂಚಾಲಕ ಚೇತನ್‌ ಶೆಟ್ಟಿ, ಸಹ ಸಂಚಾಲಕ ಸಮೃದ್ಧ್ ಪೈ, ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್‌, ಮಾಧ್ಯಮ ವಕ್ತಾರ ಸುಧಿಧೀರ್‌, ರಾಜಪ್ಪ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next