ಅಜ್ಜಂಪುರ: ಪರಿಸರ ರಕ್ಷಣೆ ಎಲ್ಲರ ಹೊಣೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದರು.
ಅಜ್ಜಂಪುರ ಸಮೀಪ ಬುಕ್ಕಾಂಬುದಿ ಗ್ರಾಮದ ಉಜ್ಜಯಿನಿ ಸಿದ್ದಲಿಂಗೇಶ್ವರ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ನಾಶದಿಂದ ಉಷ್ಣಾಂಶದಲ್ಲಿ ಏರಿಕೆ ಆಗುತ್ತದೆ. ಸಂಶೋಧನೆಗಳ ಆಧಾರದಲ್ಲಿ ಕೇವಲ 1 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಉಷ್ಣಾಂಶ ಏರಿಕೆಯಿಂದ ಶೇ.30 ರಷ್ಟು ಮಳೆ ಕುಸಿಯುತ್ತದೆ. ಹೀಗಾಗಿ ಪರಿಸರ ಉಳಿಸುವುದು ಅಗತ್ಯ ಎಂದರು.
ಗಿಡ ನೆಡುವುದರಿಂದ ಮಾತ್ರ ಪರಿಸರ ಉಳಿಯುದಿಲ್ಲ. ಬದಲಾಗಿ ನೆಟ್ಟಿರುವ ಗಿಡಗಳನ್ನು ಮರಗಳಾಗಿ ಸಂರಕ್ಷಿಸಿದಾಗ ಮಾತ್ರ ಪರಿಸರ ರಕ್ಷಣೆಯಾಗುತ್ತದೆ. ಅದು ಕೇವಲ ಇಲಾಖೆ, ಅಧಿಕಾರಿ, ಸಂಘಟನೆಗಳ ಜವಾಬ್ದಾರಿ ಎಂದು ಭಾವಿಸದೇ ಪ್ರತಿಯೊಬ್ಬರ ಹೊಣೆ ಎಂದು ತಿಳಿಯಬೇಕು ಎಂದರು.
ಗ್ರಾಮದ ಕಾರ್ಪೋರೇಶನ್ ಬ್ಯಾಂಕ್ ವ್ಯವಸ್ಥಾಪಕರು ಸಾಲ ನೀಡಲು ಸೂಚಿಸುವಂತೆ, ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಉಬ್ಬು ನಿರ್ಮಿಸುವಂತೆ, ಕೆರೆ ಮತ್ತು ಮೈದಾನದಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸುವಂತೆ ಮಾಡಿದ ಮನವಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ವಿಷಯುಕ್ತ ವಸ್ತು. ಅದು ಮಣ್ಣು, ನೀರಿನೊಂದಿಗೆ ವರ್ತಿಸಿ ಪರಿಸರ ಕಲುಷಿತಗೊಳಿಸುತ್ತದೆ. ಇನ್ನು ಇವುಗಳನ್ನು ಅರಿವಿಲ್ಲದೇ ತಿನ್ನುವ ಪ್ರಾಣಿ-ಪಕ್ಷಿಯಂತಹ ಜೀವ ಸಂಕುಲವೂ ಸಾವನ್ನಪ್ಪುತ್ತವೆ. ಪ್ಲಾಸ್ಟಿಕ್ ಬಳಕೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.