Advertisement

ಸರ್‌ಪ್ರೈಸ್‌ ಕೊಟ್ಟ ಶಿಯೋಮಿ 

12:30 AM Mar 04, 2019 | |

ಶಿಯೋಮಿ ಭಾರತದ ಮೊಬೈಲ್‌ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ! ರೆಡ್‌ಮಿ ನೋಟ್‌ 7 ಮೊಬೈಲ್‌  ಅನ್ನು ಬಿಡುಗಡೆ ಮಾಡುವ ಸುಳಿವು ಮಾತ್ರ ನೀಡಿತ್ತು. ಆದರೆ ಮೊಬೈಲ್‌ ಬಿಡುಗಡೆ ದಿನ ತನ್ನ ಗ್ರಾಹಕರಿಗೆ ದೊಡ್ಡ ಸರ್‌ಪ್ರೈಸ್‌  ಕೊಟ್ಟಿದೆ. ರೆಡ್‌ಮಿ ನೋಟ್‌ 7 ಅಲ್ಲದೇ, ರೆಡ್‌ಮಿ ನೋಟ್‌ 7 ಪ್ರೊ. ಮೊಬೈಲ್‌ ಬಿಡುಗಡೆ ಮಾಡುವ ಮೂಲಕ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿದೆ. ತನ್ನ ತವರು ನೆಲೆ ಚೀನಾಕ್ಕಿಂತ ಮೊದಲೇ ರೆಡ್‌ಮಿ ನೋಟ್‌ ಪ್ರೊ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನೂ ವಿಶೇಷವೆಂದರೆ ಈ ಮಾಡೆಲ್‌ ಬಿಡುಗಡೆಯಾಗುತ್ತಿರುವ ಜಗತ್ತಿನ ಮೊದಲ ದೇಶ ಭಾರತ!

Advertisement

ಮಧ್ಯಮ ದರ್ಜೆಯ ಮೊಬೈಲ್‌ಗ‌ಳಲ್ಲಿ ನೀವು ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯವುಳ್ಳ  ಎರಡು ಮೊಬೈಲ್‌ ಫೋನ್‌ಗಳನ್ನು ನೀಡಿದೆ. ಅದರಲ್ಲೂ ರೆಡ್‌ಮಿ ನೋಟ್‌ ಪ್ರೊ ನಿಜಕ್ಕೂ ಕಡಿಮೆ ದರದಲ್ಲಿ ಉನ್ನತ ತಾಂತ್ರಿಕ ಅಂಶಗಳನ್ನು ಅಳವಡಿಸಿರುವ ಮೊಬೈಲ್‌ ಆಗಿದೆ. ತನ್ಮೂಲಕ ರೆಡ್‌ಮಿ ಅನ್‌ಲೈನ್‌ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಪ್ರತಿಸ್ಪರ್ಧಿಗಳಾದ ಸ್ಯಾಮ್‌ಸಂಗ್‌, ಆನರ್‌, ರಿಯಲ್‌ಮಿ, ಆಸುಸ್‌  ಕಂಪೆನಿಗಳಿಗೆ ಸವಾಲು ಹಾಕಿದೆ. 

ತನ್ನ ಫೇಸ್‌ಬುಕ್‌, ಟ್ವಿಟರ್‌ ಪುಟಗಳಲ್ಲಿ ಶಿಯೋಮಿ ಕಂಪೆನಿ ರೆಡ್‌ ಮಿ ನೋಟ್‌ 7 ಶೀಘ್ರದಲ್ಲೇ ಬರಲಿದೆ ಎಂಬ ಟೀಸರ್‌ಗಳನ್ನು ಬಿಡುಗಡೆ ಮಾಡಿತ್ತು. ಕಳೆದ ಗುರುವಾರ ದೆಹಲಿಯಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಸಾವಿರಾರು ಮಿ ಫ್ಯಾನ್ಸ್‌ ಭಾಗವಹಿಸಿದ್ದರು. ಎಲ್ಲರೂ ರೆಡ್‌ಮಿ ನೋಟ್‌ 7 ಬಿಡುಗಡೆ ಎಂದೇ ಭಾವಿಸಿದ್ದರು. ಬಿಗ್‌ ಸರ್‌ಪ್ರೈಸ್‌ ಎಂದು ಘೋಷಿಸಿದ ಶಿಯೋಮಿ ರೆಡ್‌ ಮಿ ನೋಟ್‌ 7 ಪ್ರೊ ಬಿಡುಗಡೆ ಮಾಡಲಾಗುತ್ತಿದೆ ಎಂದಾಗ ಅಭಿಮಾನಿಗಳೇ ಅಚ್ಚರಿ ಸಂತೋಷದಿಂದ ಚಪ್ಪಾಳೆ ಮತ್ತು ಉದ್ಘಾರ ಹೊರಡಿಸಿದರು.

ರೆಡ್‌ಮಿ ನೋಟ್‌ ಪ್ರೊದ ವಿಶೇಷ ಅಂಶಗಳು:  ರೆಡ್‌ಮಿ ನೋಟ್‌ 7 ಪ್ರೊ ದ ವಿಶೇಷ ಅಂಶಗಳೂ, ಮತ್ತು ದರ ಕೇಳಿದಾಗಂತೂ ಅದರ ಅಭಿಮಾನಿಗಳು ಸಮ್ಮೊàಹನಗೊಂಡರು. ಮೊದಲನೆಯ ವಿಶೇಷ ಎಂದರೆ ಇದರಲ್ಲಿ 48 ಮೆಗಾಪಿಕ್ಸಲ್‌ ಸೋನಿ ಐಎಂಎಕ್ಸ್‌ 586 ಹಿಂಬದಿಯ ಕ್ಯಾಮರಾ ಇದೆ! ಮತ್ತು 5 ಮೆ.ಪಿ. ಸೆಕೆಂಡರಿ ಕ್ಯಾಮರಾ ಅಲ್ಲದೇ 13 ಮೆ.ಪಿ. ಮುಂಬದಿಯ ಕ್ಯಾಮರಾ ಇದೆ. ಈಗ ನೀಡಿರುವ ದರಕ್ಕೆ ಸೋನಿ ಐಎಂಎಕ್ಸ್‌ 586 ಮಾದರಿಯ 48 ಮೆ.ಪಿ. ಕ್ಯಾಮರಾ ನೀಡುತ್ತಿರುವುದು ಸ್ಪರ್ಧಾತ್ಮಕವೇ ಸರಿ. ಆನರ್‌ ಕಂಪೆನಿ ತನ್ನ  ವ್ಯೂ 20 ಎಂಬ 37 ಸಾವಿರ ರೂ.ನ ಮೊಬೈಲ್‌ನಲ್ಲಿ ಈ ಕ್ಯಾಮರಾ ಅಳವಡಿಸಿದೆ. ಬಿಡುಗಡೆ ಕಾರ್ಯಕ್ರಮದಲ್ಲಿ ತೋರಿಸಿದಂತೆ ಕ್ಯಾಮರಾದ ಫೋಟೋಗಳು ಒನ್‌ಪ್ಲಸ್‌ 6ಟಿ ಮೊಬೈಲ್‌ಗಿಂತಲೂ ಸ್ಪಷ್ಟವಾಗಿ ನಿಖರವಾಗಿ ಮೂಡಿಬರುತ್ತವೆ ಎಂದು ಕಂಪೆನಿಯ ಅನುಜ್‌ ಶರ್ಮಾ ನೈಜ ಫೋಟೋಗಳನ್ನು ಪ್ರದರ್ಶಿಸುವ ಮೂಲಕ ತೋರಿಸಿದರು.  ವಿಡಿಯೋ ಚಿತ್ರಣ ಅಲುಗಾಡದಂತೆ ಮಾಡಲು ಇಮೇಜ್‌ ಸ್ಟೆಬಿಲೈಜೇಷನ್‌ ಸಹ ಇದೆ.

ಇದಕ್ಕೆ ಸ್ನಾಪ್‌ಡ್ರಾಗನ್‌ 675, 11 ನ್ಯಾನೋಮೀಟರ್‌ ಎಂಟು ಕೋರ್‌ಗಳುಳ್ಳ ಪ್ರೊಸೆಸರ್‌ ಇದೆ. ಮಧ್ಯಮ ದರ್ಜೆಯ ಫೋನ್‌ಗಳಲ್ಲಿ ಇದು ಶಕ್ತಿಶಾಲಿ ಪ್ರೊಸೆಸರ್‌. ಸ್ನಾಪ್‌ಡ್ರಾಗನ್‌ 660 ಗಿಂತಲೂ ವೇಗವಾಗಿ ಕೆಲಸ ಮಾಡುವ ಪ್ರೊಸೆಸರ್‌. ಇದರಲ್ಲಿ ಅಂಡ್ರಾಯ್ಡ 9.0 ಪೈ ಆವೃತ್ತಿ , ಎಂಐಯುಐ ಕಾರ್ಯಾಚರಣಾ ವ್ಯವಸ್ಥೆಯಿದೆ. ಎಂಐಯುಐ ಉತ್ತಮವಾದ ಗ್ರಾಹಕ ಸ್ನೇಹಿ ಇಂಟರ್‌ಫೇಸ್‌ ಅಗಿದೆ. ಸ್ಟಾಕ್‌ ಅಂಡ್ರಾಯ್ಡಗಿಂತಲೂ ನನಗೆ ಎಂಐಯುಐ ಚೆನ್ನಾಗಿದೆ  ಅನಿಸುತ್ತದೆ.

Advertisement

ತನ್ನ ಮಧ್ಯಮ ವರ್ಗದ ಫೋನ್‌ಗಳಲ್ಲಿ ಮೊದಲ ಬಾರಿಗೆ ಹಿಂಬದಿಯಲ್ಲಿ ಗಾಜಿನ ಪ್ಯಾನೆಲ್‌ ನೀಡಿದೆ. ವಿಶೇಷವೆಂದರೆ ಮೊಬೈಲ್‌ ಗಾಜು ಸುಲಭದಲ್ಲಿ ಒಡೆಯದಂತೆ ಮೊಬೈಲ್‌ನ ಮುಂಬದಿ ಹಾಗೂ ಹಿಂಬದಿ ಎರಡಕ್ಕೂ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5ನ ರಕ್ಷಣೆ ಇದಕ್ಕಿದೆ.

6.3 ಇಂಚಿನ ಮೇಲ್ಭಾಗದಲ್ಲಿ ನೀರಿನ ಹನಿಯಂತಹ ವಿನ್ಯಾಸದ ಪರದೆ. 2340*1080 ಎಫ್ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ. 4000 ಎಂಎಎಚ್‌ ಬ್ಯಾಟರಿ, ಇದಕ್ಕೆ ವೇಗದಲ್ಲಿ ಚಾರ್ಜ್‌ ಆಗುವ ಸೌಲಭ್ಯ. (ಕ್ಯಾಲ್‌ಕಾಂ ಕ್ವಿಕ್‌ ಚಾರ್ಜ್‌ 4) ಜೊತೆಗೆ ಮಾಮೂಲಿ ಮೈಕ್ರೋ ಯುಎಸ್‌ಬಿ ಬದಲು, ಟೈಪ್‌ ಸಿ ಚಾರ್ಜಿಂಗ್‌ ಪೋರ್ಟ್‌ ಇದೆ. ಅಂದರೆ ಮೊಬೈಲ್‌ ಚಾರ್ಜ್‌ ವೇಗವಾಗಿ ಆಗಲಿದೆ. ಆದರೆ, ಕಂಪೆನಿ ಮೊಬೈಲ್‌ ಜೊತೆಗೆ ಫಾಸ್ಟ್‌ ಜಾರ್ಜರ್‌ ನೀಡುವುದಿಲ್ಲ. ಮಾಮೂಲಿ ಚಾರ್ಜರ್‌ (5ವಿ/2ಎ) ನೀಡಲಿದೆ. ವೇಗದ ಚಾರ್ಜರ್‌ ಬೇಕೆಂದರೆ ಗ್ರಾಹಕ ಪ್ರತ್ಯೇಕವಾಗಿ ಖರೀದಿಸಬೇಕು. 3.5 ಎಂಎಂ ಆಡಿಯೋ ಜಾಕ್‌ ಇದೆ. ಮಳೆಯ ಹನಿ, ಆಕಸ್ಮಿಕ ನೀರಿನ ಸಿಂಪಡಣೆಯಿಂದ ಫೋನನ್ನು ರಕ್ಷಿಸಲು ಹೊಸದಾಗಿ ಪಿ2ಐ ಎಂಬ ತಂತ್ರಜ್ಞಾನವನ್ನು ಅಳವಡಿಸಿದೆ.

ಎರಡು ಸಿಮ್‌ ಹಾಕುವ ಸೌಲಭ್ಯ, ಎರಡರಲ್ಲೂ 4ಜಿ ವೋಲ್ಟ್ ಸಿಮ್‌ ಹಾಕಬಹುದು. ಎರಡು ಸಿಮ್‌ ಹಾಕಿದರೆ ಮೆಮೊರಿ ಕಾರ್ಡ್‌ ಹಾಕಲಾಗುವುದಿಲ್ಲ. ಒಂದು ಸಿಮ್‌ ಜೊತೆ ಮೆಮೊರಿಕಾರ್ಡ್‌ ಹಾಕಬಹುದು. (ಇದಕ್ಕೆ ಮೆಮೊರಿ ಕಾರ್ಡ್‌ ಹಾಕುವ ಅಗತ್ಯವೂ ಇಲ್ಲ)

4 ಜಿಬಿ ರ್ಯಾಮ್‌ ಮತ್ತು 64 ಜಿಬಿ  ಆಂತರಿಕ ಸಂಗ್ರಹ ಮತ್ತು 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ರ್ಯಾಮ್‌ ಇರುವ ಎರಡು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದೆ. 64 ಜಿಬಿ ಆವೃತ್ತಿಯ ಬೆಲೆ 13999 ರೂ. ಮತ್ತು 128 ಜಿಬಿ  ಆವೃತ್ತಿಯ ಬೆಲೆ 16999 ರೂ. 

ತಡೆಯಿರಿ, ನೀವಿದನ್ನು ಕೊಳ್ಳಲು ಮಾ. 13ರವರೆಗೂ ಕಾಯಬೇಕು! ಮಿ.ಕಾಮ್‌, ಮಿ. ಸ್ಟೋರ್‌, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.
ಅಂದು ಮಧ್ಯಾಹ್ನ 12ಗಂಟೆಗೆ ಫ್ಲಾಶ್‌ ಸೇಲ್‌ನಲ್ಲಿ ಸಿಕ್ಕವರಿಗೆ ಸೀರುಂಡೆ!

ಇನ್ನೇನಿರಬೇಕಿತ್ತು?: ಕೊಡುವ ಹಣಕ್ಕೆ ಇದು ಬಹಳ ವರ್ಥ್ ಎಂದೇ ಹೇಳಬೇಕು. ಆದರೂ ಹಿಂಬದಿ ಮುಂಬದಿ ಗಾಜಿನ ದೇಹ ಕೊಟ್ಟು ಸುತ್ತಲಿನ ಅಂಚುಪಟ್ಟಿ (ಫ್ರೆàಂ) ಲೋಹದ್ದಾಗಿದ್ದರೆ ಚೆನ್ನಾಗಿತ್ತು. ಈಗ ಪ್ಲಾಸ್ಟಿಕ್‌ ಫ್ರೆàಂ ಇದೆ. ಹಿಂಬದಿಗೆ 48 ಮೆ.ಪಿ. ಕ್ಯಾಮರಾ ನೀಡಿ, ಸೆಲ್ಫಿàಗೆ ಕೇವಲ 13 ಮೆ.ಪಿ. ಸಿಂಗಲ್‌ ಕ್ಯಾಮರಾ ನೀಡಲಾಗಿದೆ. ಕನಿಷ್ಟ 16 ಮೆ.ಪಿ. ಮತ್ತು 2 ಮೆ.ಪಿ. ಡುಯಲ್‌ ಲೆನ್ಸ್‌ ಕ್ಯಾಮರಾ ಇಡಬಹುದಿತ್ತು. ಬಾಕ್ಸ್‌ ಜೊತೆಗೆ ಕ್ವಿಕ್‌ ಚಾರ್ಜರ್‌ ನೀಡಿದ್ದರೆ ಗಂಟೇನೂ ಹೋಗುತ್ತಿರಲಿಲ್ಲ!

ಇದರ ಜೊತೆಗೆ ರೆಡ್‌ಮಿ ನೋಟ್‌ 7 ಮೊಬೈಲ್‌ ಅನ್ನೂ ಶಿಯೋಮಿ ಬಿಡುಗಡೆ ಮಾಡಿತು. ಇದರಲ್ಲಿ ಸ್ನಾಪ್‌ಡ್ರಾಗನ್‌ 660 ಪ್ರೊಸೆಸರ್‌ ಇದೆ. (ಇದನ್ನು  ಈ ಫೋನ್‌ನಲ್ಲಿ ಇನ್ನಷ್ಟು ಉನ್ನತೀಕರಣಗೊಳಿಸಲಾಗಿದೆ) 12 ಮತ್ತು 2 ಮೆ.ಪಿ. ಮುಂಬದಿ ಕ್ಯಾಮರಾ, 13 ಮೆ.ಪಿ. ಮುಂಬದಿ ಕ್ಯಾಮರಾ, 4000 ಎಂಎಎಚ್‌ ಬ್ಯಾಟರಿ, ಇದಕ್ಕೂ ಕ್ವಿಕ್‌ ಚಾರ್ಜ್‌ ಸೌಲಭ್ಯ ಇದೆ. ಆದರೆ ಕ್ವಿಕ್‌ಚಾರ್ಜರ್‌ ಖರೀದಿಸಬೇಕು. ಬಾಕ್ಸ್‌ ಜೊತೆ ಮಾಮೂಲಿ ಚಾರ್ಜರ್‌ ಬರುತ್ತದೆ. ಟೈಪ್‌ ಸಿ ಪೋರ್ಟ್‌ ಸಹ ಇದೆ. 3.5 ಮಿ.ಮಿ. ಆಡಿಯೋ ಜಾಕ್‌ ಇದೆ. ಇದಕ್ಕೂ ಗಾಜಿನ ದೇಹ, ಕಾರ್ನಿಂಗ್‌ ಗೊರಿಲ್ಲಾ ಗಾಜಿನ ರಕ್ಷಣೆಯಿದೆ. ಪರದೆ 6.3 ಇಂಚಿದೆ. ಎಫ್ಎಚ್‌ಡಿಪ್ಲಸ್‌, ನೀರಿನ ಹನಿ ನಾಚ್‌ ಇರುವ ಡಿಸ್‌ಪ್ಲೇ ಇದೆ. ಇದು 3 ಜಿಬಿ ರ್ಯಾಮ್‌, 32 ಜಿಬಿ ಆಂತರಿಕ ಸಂಗ್ರಹ ಮತ್ತು 4 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹ ಇರುವ ಎರಡು ಆವೃತ್ತಿಗಳಲ್ಲಿ ಲಭ್ಯ. 32 ಜಿಬಿ ಆವೃತ್ತಿಗೆ 9999 ರೂ., 64 ಜಿಬಿ ಆವೃತ್ತಿಗೆ 11999 ರೂ. ದರವಿದೆ. ಇದು ಸಹ ಮಿ.ಕಾಮ್‌, ಮಿ ಸ್ಟೋರ್‌, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ. ಮಾರ್ಚ್‌ 6ರಿಂದ ದೊರಕಲಿದೆ.

 7 ಪ್ರೊ ಮತ್ತು 7 ಎರಡೂ ಮಾಡೆಲ್‌ಗ‌ಳು ಕಪ್ಪು,ಕೆಂಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯ.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next