Advertisement

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಿಗೆ ರೆಡ್‌ ಸಿಗ್ನಲ್‌

06:15 AM Oct 22, 2017 | |

ಬೆಂಗಳೂರು: ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆನ್ನುವ ಆಶಯಕ್ಕೆ ಕಾನೂನು ಇಲಾಖೆ “ರೆಡ್‌ ಸಿಗ್ನಲ್‌’ ತೋರಿರುವ ಹಿನ್ನೆಲೆಯಲ್ಲಿ ಮತ್ತೂಂದು ಪ್ರಯತ್ನಕ್ಕೆ ಕಾರ್ಮಿಕ ಇಲಾಖೆ ಮುಂದಾಗಿದೆ. 

Advertisement

ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೊಳಿಸಿದರೆ, ಸಂವಿಧಾನದ ಆರ್ಟಿಕಲ್‌ 14 ಸಮಾನತೆಯ ಹಕ್ಕು ಮತ್ತು ಆರ್ಟಿಕಲ್‌ 16ರ ಪ್ರಕಾರ ಸಮಾನ ಅವಕಾಶ ಪಡೆಯುವ ಹಕ್ಕಿನ ಉಲ್ಲಂಘನೆಯಾಗಲಿದ್ದು, ಸರ್ಕಾರದ ಕ್ರಮವನ್ನು ಯಾರಾದರೂ ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಕಷ್ಟವಾಗುತ್ತದೆ ಎಂದು ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ, ರಾಜ್ಯ ಸರ್ಕಾರದಿಂದ ಜಮೀನು, ನೀರು, ವಿದ್ಯುತ್‌ ಸೌಲಭ್ಯ ಪಡೆದಿರುವ ಕಂಪನಿಗಳಲ್ಲಾದರೂ 1 ರಿಂದ 10ನೇ ತರಗತಿವರೆಗೆ ಕನ್ನಡ ಒಂದು ಭಾಷೆಯಾಗಿ ಕಲಿತಿರುವ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಿಸಬೇಕೆಂದು ಕಾರ್ಮಿಕ ಇಲಾಖೆ ಪಟ್ಟು ಹಿಡಿದು ಮತ್ತೂಂದು ಪ್ರಯತ್ನಕ್ಕೆ ಮುಂದಾಗಿದೆ.

ಉದ್ದೇಶಿತ ತಿದ್ದುಪಡಿ ವಿಧೇಯಕದಲ್ಲಿನ ಕೆಲವು ಅಂಶಗಳನ್ನು ಬದಲಾಯಿಸಿ, ಐಟಿ  ಬಿಟಿ, ಸ್ಟಾರ್ಟ್‌ಅಪ್‌ ಉದ್ದಿಮೆಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರದಿಂದ ರಿಯಾಯ್ತಿ ದರದಲ್ಲಿ ಭೂಮಿ, ವಿದ್ಯುತ್‌ ಮತ್ತು ನೀರು ಪಡೆದುಕೊಂಡಿರುವ ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಸಿ ಮತ್ತು ಡಿ ದರ್ಜೆಯ ಶೇ. 100ರಷ್ಟು ಹಾಗೂ ಎ ಮತ್ತು ಬಿ ದರ್ಜೆಯ ಶೇ. 70ರಷ್ಟು ಹಾಗೂ ಅಂಗವಿಕಲರಿಗೆ ಶೇ. 5 ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬ ನಿಯಮಗಳನ್ನು ಬದಲಾಯಿಸಿ ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಪಡೆಯಲು ಕಾರ್ಮಿಕ ಇಲಾಖೆ ಕಳುಹಿಸಿಕೊಟ್ಟಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸಂವಿಧಾನಕ್ಕೆ ಧಕ್ಕೆಯಾಗದಂತೆ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಲು ಇರುವ ಸಾಧ್ಯತೆಗಳ ಕುರಿತು ಸಂವಿಧಾನ ತಜ್ಞರು, ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯವಾದಿಗಳ ಅಭಿಪ್ರಾಯ ಪಡೆದುಕೊಂಡಿದ್ದು, ಸಂವಿಧಾನಕ್ಕೆ ಧಕ್ಕೆಯಾಗದಂತೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿ ಕಾನೂನು ರೂಪಿಸಲು ಅವಕಾಶವಿದೆ ಎಂದು ಅಭಿಪ್ರಾಯ ನೀಡಿದ್ದು, ಅದೇ ವರದಿಯನ್ನು ಸಹ ಕಳುಹಿಸಲಾಗಿದೆ.

Advertisement

ಇದಲ್ಲದೇ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಲು ಮುಂದಿನ ವಾರ ಕಾನೂನು ಇಲಾಖೆ ಅಧಿಕಾರಿಗಳ ಉನ್ನತಮಟ್ಟದ ಸಭೆಯನ್ನೂ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಕರೆದಿದ್ದಾರೆ ಎಂದು ತಿಳಿದು ಬಂದಿದೆ. ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಕನ್ನಡಿಗರಿಗೆ ರಾಜ್ಯೋತ್ಸವದ ಕೊಡುಗೆ ನೀಡಲು ಕಾರ್ಮಿಕ ಇಲಾಖೆ ಪ್ರಯತ್ನ ಮುಂದುವರಿಸಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿನ ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂಬ ಉದ್ದೇಶದಿಂದ ಕಾರ್ಮಿಕ ಇಲಾಖೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಿದ್ದುಪಡಿ ವಿಧೇಯಕ ಮಂಡನೆಗೆ ಮುಂದಾಗಿತ್ತು. ಬೆಳಗಾವಿಯಲ್ಲಿ ನಡೆದ ಚಳಿಗಾಲದ
ಅಧಿವೇಶನದಲ್ಲಿಯೇ ವಿಧೇಯಕ ಮಂಡನೆಗೆ ಪ್ರಯತ್ನ ನಡೆಸಿತ್ತು. ಆದರೆ, ಕಾನೂನು ಇಲಾಖೆ ಅದಕ್ಕೆ ಅಡ್ಡಿಪಡಿಸಿತ್ತು.

ಮಹಾರಾಷ್ಟ್ರ ಮೆಚ್ಚುಗೆ: ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಪ್ರಯತ್ನಕ್ಕೆ ಮಹಾರಾಷ್ಟ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಕರಡು ಮಸೂದೆಯ ಪ್ರತಿ ಕಳುಹಿಸಿಕೊಡುವಂತೆಯೂ ಕೋರಿದೆ. ನೆರೆಯ ಮಹಾರಾಷ್ಟ್ರ ನಮ್ಮ ಪ್ರಸ್ತಾವನೆ ಒಪ್ಪುತ್ತದೆ ಆದರೆ, ನಮ್ಮದೇ ಸರ್ಕಾರದ ಕಾನೂನು ಇಲಾಖೆ ಅಡ್ಡಿಪಡಿಸುತ್ತಿದೆ. ಈ ಮಧ್ಯೆ, ಸ್ಥಳೀಯರಿಗೆ ಉದ್ಯೋಗವಕಾಶ ನೀಡುವ ಸರೋಜಿನಿ ಮಹಿಷಿ ವರದಿ ಹಾಗೂ ಸರ್ಕಾರಿ ಶಾಲಾ ಸಬಲೀಕರಣ ವರದಿಯನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿ ದೇಶದ ಎಲ್ಲ ರಾಜ್ಯಗಳಿಗೂ ಕಳುಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಯಾವುದೇ ಕೈಗಾರಿಕೆಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಸರ್ಕಾರದ ನೆರವು ಪಡೆದಿರುವ ಕೈಗಾರಿಕೆಗಳಲ್ಲಾದರೂ ಮೀಸಲಾತಿ ಬೇಕು. ಅದಕ್ಕಾಗಿ ಎಲ್ಲ ಹಂತದ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ವಿಧೇಯಕಕ್ಕೆ ಮಹಾರಾಷ್ಟ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿ, ವಿಧೇಯಕದ ಮಾಹಿತಿ ಕೇಳಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ನಾಡಿನ ಹಿತ ಕಾಯಲು ಕಾರ್ಮಿಕ ಇಲಾಖೆ ಪ್ರಯತ್ನ ನಡೆಸುತ್ತಿದೆ.
–  ಸಂತೋಷ್‌ ಲಾಡ್‌, ಕಾರ್ಮಿಕ ಸಚಿವ

ಕನ್ನಡಿಗರಿಗೆ ಮೀಸಲಾತಿ ನೀಡಲು ಸಂವಿಧಾನದ ಆರ್ಟಿಕಲ್‌ 14, 16ರಲ್ಲಿ ಅವಕಾಶವಿಲ್ಲ ಎಂದು ಅಡ್ವೋಕೇಟ್‌ ಜನರಲ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಸಂವಿಧಾನ ತಜ್ಞರ ಅಭಿಪ್ರಾಯ ಪಡೆದು ಅವರಿಗೆ ವರದಿ ನೀಡಿದ್ದೇವೆ. 
  - ಎಸ್‌.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next