Advertisement
ಗುಲಾಬಿ (ಪಿಂಕ್) ಬಣ್ಣ, ಹದಿ ಹರೆಯದ ಹುಡುಗಿಯರ ಬಣ್ಣ. ಕೆಂಪು ಬಣ್ಣ, ಸ್ವಲ್ಪ ವಯಸ್ಸಾದ ಹೆಂಗಸರಿಗೆ ಒಪ್ಪುವ ಬಣ್ಣ ಎಂಬುದು ಫ್ಯಾಷನ್ ಲೋಕದಲ್ಲಿದ್ದ ಮಾತು. ಕಾಲೇಜು ಯುವತಿಯರ ವಸ್ತ್ರ ವಿನ್ಯಾಸಕರು ಗುಲಾಬಿ ಬಣ್ಣಕ್ಕೇ ಜಾಸ್ತಿ ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಈಗ ಬದಲಾವಣೆಯ ಸಮಯ. ಯಾರು, ಯಾವ ಬಣ್ಣದ ವಸ್ತ್ರವನ್ನು ಬೇಕಾದರೂ ತೊಡಬಹುದು ಎಂಬುದು ಈಗಿನವರ ಮಾತು. ಆ ಮಾತನ್ನು ಎಮ್ಮಿ ಅವಾರ್ಡ್ಸ್ನಲ್ಲಿ ತಾರೆಯರು ಎತ್ತಿ ಹಿಡಿದಿದ್ದಾರೆ. ಕೆಂಪು ಮತ್ತು ಗುಲಾಬಿ ಕಾಂಬಿನೇಶನ್‌ನ ವಸ್ತ್ರದಲ್ಲಿ ಮಿಂಚಿ, ಫ್ಯಾಷನ್ ಲೋಕಕ್ಕೆ ಹೊಸ ರಂಗು ನೀಡಿದ್ದಾರೆ.
Related Articles
Advertisement
ಒಂದೇ ಉಡುಗೆಯಲ್ಲಿ ಕೆಂಪು- ಗುಲಾಬಿ ಎರಡೂ ಬಣ್ಣಗಳನ್ನು ಬಳಸಬಹುದು. ಇಲ್ಲವೇ, ಒಂದು ಬಣ್ಣದ ಟಾಪ್‌ಗೆ ಇನ್ನೊಂದು ಬಣ್ಣದ ಲಂಗ, ಪ್ಯಾಂಟ್ ಅಥವಾ ಶಾರ್ಟ್ಸ್ ತೊಡಬಹುದು. ಈ ರೀತಿ ಕೆಂಪು ಟಾಪ್ ಜೊತೆ ಗುಲಾಬಿ ಪ್ಯಾಂಟ್, ಗುಲಾಬಿ ಕುರ್ತಿ ಜೊತೆ ಕೆಂಪು ಲೆಗಿಂಗ್ಸ್, ಮುಂತಾದ ಕಾಂಬಿನೇಶನ್ ಟ್ರೈ ಮಾಡಬಹುದು. ಕೆಂಪು ಬಣ್ಣದ ಸಲ್ವಾರ್ ಕಮೀಜ್ ತೊಟ್ಟು, ಜೊತೆಗೆ ಗುಲಾಬಿ ದುಪಟ್ಟಾ ತೊಡಬಹುದು.
ಲಿಪ್‌ಸ್ಟಿಕ್‌ನಲ್ಲೂ ಹೊಸ ಪ್ರಯೋಗ: ಈ ಶೈಲಿಯ ಉಡುಗೆ ಜೊತೆ ಡ್ಯುಯಲ್ ಲಿಪ್‌ಸ್ಟಿಕ್ ಕೂಡ ಹಚ್ಚಿಕೊಳ್ಳಬಹುದು. ಅಂದರೆ, ಮೇಲಿನ ತುಟಿಗೆ ಕೆಂಪು ಬಣ್ಣ ಮತ್ತು ಕೆಳಗಿನ ತುಟಿಗೆ ಗುಲಾಬಿ ಬಣ್ಣ! ಸಾಮಾನ್ಯ ದಿನಗಳಿಗಿಂತ, ಪಾರ್ಟಿ, ಮದುವೆ ಸಮಾರಂಭಗಳಂದು ಇದನ್ನು ಟ್ರೈ ಮಾಡಿ. ಈ ಕಾಂಬಿನೇಶನ್ ನ ಉಡುಗೆ ಜೊತೆ ಬಂಗಾರದ ಬಣ್ಣದ ಆಕ್ಸೆಸರೀಸ್ ಚೆನ್ನಾಗಿ ಕಾಣಿಸುತ್ತವೆ. ಹಾಗಾಗಿ, ಗೋಲ್ಡನ್ ಬಣ್ಣದ ಪಾದರಕ್ಷೆ, ಸರ, ಕಿವಿಯೋಲೆ, ಬಳೆ, ಉಂಗುರ ಮುಂತಾದವುಗಳನ್ನು ತೊಡಬಹುದು.
ಬಂಗಾರದ ಬಣ್ಣಕ್ಕೆ ಹೋಲುವ ಬೆಲ್ಟ್ (ಸೊಂಟ ಪಟ್ಟಿ) ಮತ್ತು ಕ್ಲಚ್ ಅಥವಾ ಬ್ಯಾಗ್ ಕೂಡ ಚೆನ್ನಾಗಿ ಒಪ್ಪುತ್ತದೆ. ಕೆಂಪು -ಗುಲಾಬಿ ಬಣ್ಣಗಳುಳ್ಳ ಉಡುಗೆ ಜೊತೆ ಕಪ್ಪು ಬಣ್ಣದ ಆ್ಯಕ್ಸೆಸರೀಸ್ ಕೂಡ ಒಪ್ಪುತ್ತವೆ. ಹಾಗೆಂದು ಸ್ವರ್ಣ ಮತ್ತು ಕಪ್ಪು, ಎರಡನ್ನೂ ಒಟ್ಟಿಗೇ ಧರಿಸಬೇಡಿ. ಕಪ್ಪು ಅಥವಾ ಬಂಗಾರದ ಬಣ್ಣ, ಎರಡರಲ್ಲಿ ಒಂದನ್ನು ಆಯ್ದುಕೊಳ್ಳಿ.
ನಟಿಯರು ಮೆಚ್ಚಿದ ರಂಗು…: ಎಮ್ಮಾ ಅವಾರ್ಡ್ಸ್‌ನಲ್ಲಿ ಸೆಲೆಬ್ರಿಟಿಗಳು ತೊಟ್ಟ ಈ ಬಣ್ಣಗಳ ಪ್ರಯೋಗದ ಬಗ್ಗೆ ಎಲ್ಲೆಡೆ ಸುದ್ದಿಯಾದರೂ, ಈ ಮೊದಲೇ ಬಾಲಿವುಡ್‌ನ ಕೆಲವು ನಟಿಯರು ಈ ವಿಭಿನ್ನ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಕೆಂಪು ಟಾಪ್ ಜೊತೆಗೆ, ಪಿಂಕ್ ಫ್ಲೇರ್ಡ್ ಪ್ಯಾಂಟ್ ತೊಟ್ಟ ದೀಪಿಕಾ ಪಡುಕೋಣೆ, ಕೆಂಪು ಬಣ್ಣದ ಫ್ಲೇರ್ಡ್ ವಿ-ನೆಕ್ ಟಾಪ್ ಜೊತೆಗೆ ಗುಲಾಬಿ ಬಣ್ಣದ ಪಲಾಝೋ ಪ್ಯಾಂಟ್ ತೊಟ್ಟ ಜಾಹ್ನವಿ ಕಪೂರ್, ಗುಲಾಬಿ ಬಣ್ಣದ ರಫಲ್ಡ್ ಟಾಪ್ ಜೊತೆ ಕೆಂಪು ಪ್ಯಾಂಟ್ ತೊಟ್ಟ ಶಿಲ್ಪಾ ಶೆಟ್ಟಿ, ಎಂಬ್ರಾಯ್ಡರಿ ಕ್ರಾಪ್ ಟಾಪ್ ಜೊತೆಗೆ ಕೆಂಪು ಬಣ್ಣದ ಫ್ಲೇರ್ಡ್ ಪ್ಯಾಂಟ್ ಹಾಗೂ ಕೇಪ್ ಜ್ಯಾಕೆಟ್ ತೊಟ್ಟ ಸಾರಾ ಅಲಿಖಾನ್‌ರ ಫೋಟೊ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಹಾಗಾಗಿ ಕೆಂಪು-ಗುಲಾಬಿ ಬಣ್ಣವನ್ನು, 2019ರ ಬೆಸ್ಟ್ ಕಾಂಬಿನೇಷನ್ ಅನ್ನಬಹುದೇನೋ!
* ಅದಿತಿಮಾನಸ ಟಿ.ಎಸ್.