Advertisement

ರೆಡ್‌ ಆಕ್ಸೈಡ್ ನೆಲಗಳು, ವಿಟ್ರಿಫೈಡ್‌ ಟೈಲ್ಸ್‌ಗಳು

09:11 AM Jul 23, 2019 | Sriram |

ಮಹಾಯುದ್ಧಗಳ ಭೀಕರತೆಯಿಂದ ನಲುಗಿದ ಜನರು ಸಾಕಪ್ಪ ಸಾಕು ಎಂದು ಪ್ರತ್ಯೇಕತೆಯನ್ನು ಬಿಟ್ಟು, ಏಕತೆಯನ್ನು ಸಾರುವ ಸಲುವಾಗಿ ಒಂದೇ ಶೈಲಿಯ ವಿನ್ಯಾಸದ ಮನೆಗಳನ್ನು ಕಟ್ಟಿಸತೊಡಗಿದರು. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಕಟ್ಟಿದ ಕಟ್ಟಡಗಳಿಗೂ, ಅದೇ ವೇಳೆ ಲಂಡನ್‌ನಲ್ಲಿ ಕಟ್ಟಿದ ಮನೆಗಳಿಗೂ ಸಾಮ್ಯತೆ ಗುರುತಿಸಬಹುದಾಗಿತ್ತು. ಹೀಗೆ “ಇಂಟರ್‌ನ್ಯಾಷನಲ್‌ ವಾಸ್ತು ಶೈಲಿ’ಯೊಂದು ಸ್ತಾನ ಕಂಡುಕೊಂಡಿತ್ತು!

Advertisement

ಮನೆ ಕಟ್ಟಿಸುವವರಿಗೆಲ್ಲ ತಮ್ಮ ಮನೆ ವಿಶೇಷವಾಗಿರಬೇಕು, ಮಿಕ್ಕ ಮನೆಗಳಿಗಿಂತ ಎದ್ದು ಕಾಣಬೇಕು ಎಂದೆಲ್ಲಾ ಬಯಕೆಗಳಿರುತ್ತವೆ. ಜೊತೆಗೆ ಲೇಟೆಸ್ಟ್‌- ಹೊಸತು ಏನಿದೆ? ಅದನ್ನೂ ಒಳಗೊಂಡಂತೆ ಹೊಚ್ಚಹೊಸ ವಿನ್ಯಾಸವಾಗಿರಬೇಕು ಎಂಬ ಬಯಕೆಯೂ ಇರುತ್ತದೆ. ಒಂದು ಕಡೆ ವಿಶೇಷ ವಿನ್ಯಾಸದ ಅಗತ್ಯ, ಜೊತೆಗೆ ಮುಂದುವರಿದ ದೇಶಗಳಲ್ಲಿ ಯಾವುದನ್ನು ಜನಪ್ರಿಯ ಎಂದು ಪರಿಗಣಿಸಲಾಗುತ್ತೋ ಅದನ್ನೇ ಇಲ್ಲಿಯೂ ಅನುಕರಿಸುವುದು ಇದ್ದದ್ದೇ! ನಮ್ಮಲ್ಲಿ “ಫಾರಿನ್‌’ ಶೈಲಿ, ವಿದೇಶದ್ದು ಎಂದರೆ ನಾವು ಹಿಂದಿನಿಂದಲೂ ಒಲವು ತೋರುತ್ತಲೇ ಬಂದಿದ್ದೇವೆ. ಹಾಗಾಗಿ, ಮನೆ ಕಟ್ಟುವಾಗ ಎದುರಾಗುವ ನಾನಾ ವಿಧದ ಗೊಂದಲಗಳಲ್ಲಿ ಯಾವ ಮಾದರಿಯ, ಸ್ಟೈಲ್‌ನ ಮನೆ ಕಟ್ಟಬೇಕು ಎಂಬುದು ಮುಖ್ಯವಾಗುತ್ತದೆ. ಎಲ್ಲಾ ಮನೆಗಳಲ್ಲೂ ಸೂರು, ಅದರ ಕೆಳಗೆ ನಾಲ್ಕಾರು ಗೋಡೆಗಳು ಹಾಗೂ ಕಿಟಕಿ ಇರುತ್ತವಾದರೂ, ಅವುಗಳನ್ನು ನಾವು ಯಾವ ರೀತಿಯಲ್ಲಿ ಕಟ್ಟಿಕೊಳ್ಳುತ್ತೇವೆ ಎನ್ನುವುದರ ಮೇಲೆ ಕಡೆಗೆ ನಮ್ಮ ಮನೆಯ ಲುಕ್‌- ಚಿತ್ರಣ ತಯಾರಾಗುತ್ತದೆ. ಹಾಗಾಗಿ, ಮನೆ ಕಟ್ಟುವಾಗ ಅದರಲ್ಲೂ ಫಿನಿಶಿಂಗ್‌ ನೀಡುವ ವೇಳೆ ಯಾವ ವಿನ್ಯಾಸ ನಮಗೆ ಇಷ್ಟ, ಸರಿಹೊಂದುತ್ತದೆ ಎಂಬುದನ್ನು ನಿರ್ಧರಿಸಿ ಮುಂದುವರಿಯುವುದು ಉತ್ತಮ.

ಏಕತೆ ಮೆರೆಯುವ ಇಂಟರ್‌ನ್ಯಾಷನಲ್‌ ಸ್ಟೈಲ್‌
ಇಂಟರ್‌ನ್ಯಾಷನಲ್‌ ಸ್ಟೈಲ್‌ ಎಂದರೇನು? ತಾಂತ್ರಿಕವಾಗಿ ಹೇಳಬೇಕೆಂದರೆ, ಯುರೋಪ್‌ನಿಂದ ಭಾರತದವರೆಗೆ, ಹೆಚ್ಚಾ ಕಡಿಮೆ ಒಂದೇ ತೆರನಾದ ವಿನ್ಯಾಸ ವಿಶ್ವವ್ಯಾಪಿ ಎನ್ನುವ ರೀತಿಯಲ್ಲಿ ದೇಶಗಳ ಗಡಿಮೀರಿ ಹರಡಿರುವುದನ್ನು ನಾವು ನೋಡಬಹುದು. ವಿಶ್ವಮಹಾಯುದ್ಧದ ಕಾಲದಿಂದಲೂ ಈ ವಿದ್ಯಮಾನವನ್ನು ಗಮನಿಸಬಹುದು. ಈ ಅವಧಿಯಲ್ಲಿ ಯೂರೋಪಿನಲ್ಲಿ ಜನಾಂಗೀಯ ದ್ವೇಷದಿಂದಾಗಿ ಲಕ್ಷಾಂತರ ಸಾವುನೋವುಗಳಾಗಿ, ಸ್ಥಳೀಯವಾದ, ಪ್ರತ್ಯೇಕತೆಯನ್ನು, ವಿಭಜತೆಯನ್ನು ಹೆಚ್ಚಿಸುವ ವಿನ್ಯಾಸಗಳ ಬದಲು ಇಡೀ ವಿಶ್ವ ಒಂದೇ ಮಾದರಿಯ ವಿನ್ಯಾಸವನ್ನು ನೆಚ್ಚಿಕೊಳ್ಳತೊಡಗಿತು. ಇದರ ಪರಿಣಾಮವಾಗಿ ಭಾರತದಲ್ಲಿ, ಬೆಂಗಳೂರಿನಲ್ಲಿ ಕಟ್ಟಿದ ಕಟ್ಟಡಗಳಿಗೂ, ಅದೇ ವೇಳೆ ಯೂರೋಪಿನಲ್ಲಿ ಕಟ್ಟಿದ ಮನೆಗೂ ಸಾಮ್ಯತೆ ಗುರುತಿಸಬಹುದಾಗಿತ್ತು. ಮಹಾಯುದ್ಧಗಳ ಭೀಕರತೆ ನಲುಗಿದ ಜನ ಸಾಕಪ್ಪ ಸಾಕು ಎಂದು ಎಲ್ಲ ರೀತಿಯ ಪ್ರತ್ಯೇಕತೆಯನ್ನು ಬಿಟ್ಟು, ಒಂದೇ ಶೈಲಿಯ ವಿನ್ಯಾಸಕ್ಕೆ ಮೊರೆ ಹೋಗುವ ಮೂಲಕ ಏಕತೆಯನ್ನು ಮೆರೆದರು.

ಜನಪ್ರಿಯತೆಗೆ ಕಾರಣವಿದೆ
ಹಳೆ ಮೈಸೂರು, ಮಂಗಳೂರು, ಮುಂಬೈ ಕರ್ನಾಟಕ ಇತ್ಯಾದಿ ಪ್ರದೇಶಗಳಲ್ಲಿನ ಜನ ಓದು- ಉದ್ಯೋಗ ಎಂದು ಪರದೇಶಗಳಲ್ಲೂ ಅನುಭವ ಪಡೆಯುತ್ತಿದ್ದು, ಇದರ ಪರಿಣಾಮವಾಗಿಯೂ ಅತ್ಯಾಧುನಿಕ ವಿನ್ಯಾಸಗಳು ಶೀಘ್ರವಾಗಿ ಕರ್ನಾಟಕವನ್ನು ಪ್ರವೇಶಿಸಿದವು. ಇದೆಲ್ಲದರ ಪರಿಣಾಮವಾಗಿ ನಮ್ಮ ಜನ ವಿಶ್ವ ಮಟ್ಟದಲ್ಲಿ ಹೆಸರಾದ ವಿನ್ಯಾಸಗಳಿಗೆ ಮನಸೋಲತೊಡಗಿದರು. ಇಂಟರ್‌ನ್ಯಾಷನಲ್‌ ಸ್ಟೈಲ್‌ ಮನೆಗಳು ಜನಪ್ರಿಯಗೊಳ್ಳಲು ಇನ್ನೂ ಅನೇಕ ಕಾರಣಗಳಿದ್ದವು. ದೇಸಿ ವಿನ್ಯಾಸ ರೂಪಿಸುವವರ ಸಂಖ್ಯೆ ವಿರಳವಾಗಿ, ಅವರ ಕೂಲಿಯೂ ದುಬಾರಿಯಾಗುತ್ತಾ ಹೋಯಿತು. ಹೊಸ ಮಾದರಿಯ ವಸ್ತುಗಳಿಗೆ ಹೊಸ ವಿನ್ಯಾಸಗಳ ಅಗತ್ಯವೂ ಇತ್ತು. ಮರ ಉಳಿಸಬೇಕೆಂದು ಸ್ಟೀಲ್‌ ಕಿಟಕಿಗಳು ಬಂದವು. ರೆಡ್‌ ಆಕ್ಸೆ„ಡ್‌ ಬದಲು ಮೊಸೈಕ್‌, ನಂತರ ವಿಟ್ರಿಫೈಡ್‌ ಟೈಲ್ಸ್‌ ಬಂದವು.

ಮನೆ ಎನ್ನುವ ನಿರಾಭರಣ ಸುಂದರಿ
ಅತಿ ಕಡಿಮೆ ಆಭರಣ- ಆರ್ನಮೆಂಟೇಷನ್‌, ಒಂದು ರೀತಿಯಲ್ಲಿ ನಿರಾಭರಣ ಸುಂದರಿ ಈ ವಿಶ್ವ ಮಾದರಿಯ ವಿನ್ಯಾಸ. ಆ ಕಾಲದವರು ಆಭರಣ ಎಂದರೆ ಅದು ದುಂದು ವೆಚ್ಚ, ಅನಗತ್ಯ ಎನ್ನುವ ಅಭಿಪ್ರಾಯವನ್ನು ಹೊಂದಿದ್ದರು. ವಸ್ತುಗಳು ಇದ್ದಂತೆಯೇ, ಅವುಗಳ ಸ್ವಾಭಾವಿಕ ರೂಪದಲ್ಲೇ ಸುಂದರವಾಗಿರುತ್ತವೆ. ಅವುಗಳಿಗೆ ಕೃತಕವಾಗಿ ಸಿಮೆಂಟ್‌ ಹೂಗಳನ್ನು, ಗ್ರೀಕ್‌ ರೋಮನ್‌ ವಿನ್ಯಾಸಗಳ ಕಾನೀìಸ್‌ ಇತ್ಯಾದಿ ಮಾಡುವ ಅಗತ್ಯ ಇಲ್ಲ ಎನ್ನುವ ನಿಲುವನ್ನು ಅವರು ಮನೆ ನಿರ್ಮಾಣದಲ್ಲೂ ತೋರಿದರು.

Advertisement

ಈ ಅವಧಿಯಲ್ಲಿಯೇ ಮೊದಲ ಬಾರಿಗೆ ಗಾಜನ್ನು ಅತಿ ಹೆಚ್ಚಾಗಿ ಬಳಸಲು ಶುರುಮಾಡಿದ್ದು. ಅದಕ್ಕೂ ಮೊದಲು ಕಿಟಕಿ ಬಾಗಿಲುಗಳನ್ನೂ ಮರದಿಂದಲೇ ಸಿದ್ಧಪಡಿಸಲಾಗುತ್ತಿತ್ತು. ಗಾಳಿ ಆಡಲು ಮಾತ್ರ ಅಡ್ಡ ಪಟ್ಟಿಗಳನ್ನು ಕಟ್ಟಿ ಲೂವರ್‌ ಮಾದರಿಯಲ್ಲಿ ಇಡಲಾಗುತ್ತಿತ್ತು. ಸಾಂಪ್ರದಾಯಿಕವಾಗಿ ಮನೆ ಅಥವಾ ಯಾವುದೇ ಕಟ್ಟಡದ ಮೂಲೆ ಕಲ್ಲು ಅಂದರೆ ಅದು ಗಟ್ಟಿಮುಟ್ಟಿನ ಸಂಕೇತವಾಗಿತ್ತು. “ಆವರು ಮೂಲೆ ಕಲ್ಲಿನಂತೆ ಇದ್ದರು’ ಎಂದರೆ ಅವರು ಅತಿ ಮುಖ್ಯ ವ್ಯಕ್ತಿಯಾಗಿದ್ದರು ಎಂದರ್ಥವಾಗಿತ್ತು ಆದರೆ ಈ ಅವಧಿಯಲ್ಲಿ ಆಧುನಿಕ ತಂತ್ರಜ್ಞಾನದ ಸಹಾಯದಿಂದಾಗಿ ಪ್ರಥಮ ಬಾರಿಗೆ ಮೂಲೆಗಳನ್ನು ಖಾಲಿ ಬಿಟ್ಟು ಮೂಲೆ ಕಿಟಕಿಗಳಲ್ಲಿ, ಕೆಲವೊಮ್ಮೆ ಕೇವಲ ಗಾಜನ್ನು ಮಾತ್ರ ಅಳವಡಿಸಲಾಯಿತು!

ಮೊದಲು ಹೊಂದುತ್ತಾ ನೋಡಿ
ಉಡುಗೆ ತೊಡುಗೆ ವಿಶ್ವದೆಲ್ಲೆಡೆ ಒಂದೇ ಮಾದರಿಯಲ್ಲಿ ಹರಡುವುದು ಇದ್ದಮೇಲೆ ಮನೆ ವಿಷಯದಲ್ಲೂ ಕೆಲವೊಂದು ವಿನ್ಯಾಸಗಳು ಗಡಿ ಮೀರಿ ಇಷ್ಟ ಆಗುವುದು ಸಹಜ. ಬೇಡ ಎಂದು ಕೆಲ ಕಾಲ ದೂರವಿಟ್ಟರೂ ಕಾಲನ ಕರೆಗೆ ಓಗೊಟ್ಟು ಬದಲಾಗಬೇಕಾಗುತ್ತದೆ. ಆದರೆ, ಕೆಲವೊಂದು ನಮಗೆ ಸರಿಹೊಂದುವುದಿಲ್ಲ. ಯಾವುದು ಹೊಂದುತ್ತದೆ, ಯಾವುದು ಹೊಂದುವುದಿಲ್ಲ ಮುಂತಾದ ವಿಚಾರಗಳನ್ನು ಸ್ಥೂಲವಾಗಿ ತಿಳಿದುಕೊಂಡು ನಂತರ ಮುಂದುವರಿಯುವುದು ಜಾಣತನ. ಉದಾಹರಣೆಗೆ ಯೂರೋಪಿನಲ್ಲಿದ್ದಂತೆ ನಮ್ಮಲ್ಲಿ ತಂಪು ಹವಾಮಾನ ಇಲ್ಲ, ನಮ್ಮ ಸೆಕೆಗೆ ಗಾಜು ಸರಿ ಹೊಂದುವುದಿಲ್ಲ. ಅದರಲ್ಲೂ ಮನೆಗಳಲ್ಲಿ ಹೆಚ್ಚು ಗಾಜು ಬಳಸಿದರೆ ಬಿಸಿ ಏರಿ ಚಳಿಗಾಲದಲ್ಲೂ ಫ್ಯಾನ್‌ ಬಳಸಬೇಕಾಗಿ ಬರಬಹುದು! ಆಫೀಸು ಕಚೇರಿಗಳಲ್ಲಾದರೆ ಎ.ಸಿ ವ್ಯವಸ್ಥೆ ಇರುತ್ತದೆ ಆದ್ದರಿಂದ ಅಂಥ ಕಡೆ ಗಾಜು ಹೊಂದುತ್ತದೆ. ಆದುದರಿಂದ ಕೆಲವೊಂದು ಜಾಗತಿಕ ವಿನ್ಯಾಸ, ವಸ್ತುಗಳನ್ನು ಪರಿಶೀಲಿಸಿ, ಸಾಧಕ ಬಾಧಕಗಳನ್ನು ಗಮನಿಸಿ ಉಪಯೋಗಿಸುವುದು ಉತ್ತಮ!

ಹೊಸತು ಮತ್ತು ಹಳತರ ನಡುವೆ…
ಯಾವುದೇ ಅವಿಷ್ಕಾರ ವಿಶ್ವವ್ಯಾಪಿಯಾಗಿ ಹರಡಿದರೆ, ಅದರಿಂದಾಗಿ ದೇಸಿ ಅಥವ ಆಯಾ ಪ್ರಾಂತ್ಯಕ್ಕೆ ಸೀಮಿತವಾಗಿದ್ದ ವಿನ್ಯಾಸಗಳು ಕಾಲಾಂತರದಲ್ಲಿ ಮರೆಯಾಗುತ್ತದೆ. ಹಾಗೆಯೇ ನಮ್ಮ ಸುತ್ತಮುತ್ತಲ ಪ್ರದೇಶಗಳಿಂದ ಕಣ್ಮರೆಯಾಗಿವೆ. ಎಲ್ಲರೂ ಹೊಸತನ್ನು ಬಯಸುವಾಗ ಹಳೆಯದನ್ನು ಯಾರು ಮೆಚ್ಚುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಆಧುನಿಕ ಎನ್ನಲಾಗುವ ವಿನ್ಯಾಸಗಳಿಂದ ಕೆಲವೊಂದು ಲಾಭಗಳು ಆದದ್ದು ನಿಜ. ಗಾಜಿನ ಬಗೆಗೆ ಸುಮಾರು ಅರವತ್ತು ವರ್ಷಗಳ ಹಿಂದೆ ಇದ್ದ ಭಯ ಭೀತಿ ಈಗಿಲ್ಲ! ಶುರುವಿನಲ್ಲಿ ಸಣ್ಣ ಪುಟ್ಟ ಗಾತ್ರದ ಗಾಜನ್ನು ಕಿಟಕಿಗಳಿಗೆ ಅಳವಡಿಸಲಾಗುತ್ತಿತ್ತು. ಆದರೆ ಈಗ ಇಡೀ ಗೋಡೆಗಳನ್ನೇ ಗಾಜಿನಿಂದ ಮಾಡಲಾಗುತ್ತಿದೆ. ಈ ಕಾರಣದಿಂದಾಗಿಯೇ ಕೆಲ ಮನೆಗಳಿಗೆ “ಗಾಜಿನ ಮನೆ’ ಎಂದೇ ನಾಮಕರಣ ಮಾಡಲಾಗುತ್ತದೆ. ಇಂಥ ಮನೆಗಳಲ್ಲಿ ಖಾಸಗಿತನ ಸ್ವಲ್ಪ ಕಡಿಮೆ ಎಂದೆನಿಸಿದರೂ, ಸೂಕ್ತ ಕರ್ಟನ್‌ ವ್ಯವಸ್ಥೆ ಮಾಡಿಕೊಂಡು, ಅಥವಾ ಇನ್ಯಾವುದೋ ಮಾರ್ಪಾಡು ಮಾಡಿಕೊಂಡುಬಿಡಬಹುದು.

-ಆರ್ಕಿಟೆಕ್ಟ್ ಕೆ. ಜಯರಾಮ್‌

ಹೆಚ್ಚಿನ ಮಾಹಿತಿಗೆ ಫೋನ್‌ 98441 32826

Advertisement

Udayavani is now on Telegram. Click here to join our channel and stay updated with the latest news.

Next