Advertisement
ಅತಿಗಣ್ಯರ ವಾಹನಗಳ ಮೇಲೆ ಕೆಂಪುದೀಪ ನಿಷೇಧಕ್ಕೆ ಸಂಬಂಧಿಸಿದ ಆದೇಶಕ್ಕಾಗಿ ಕಾಯುತ್ತಿರುವ ಸಾರಿಗೆ ಇಲಾಖೆ, ಮೇ 1ರಿಂದ ಕೆಲ ದಿನಗಳು ಕಾಲಾವಕಾಶ ಕೊಟ್ಟು, ನಂತರದಿಂದ ಕೆಂಪುದೀಪ ವಾಹನಗಳ ವಿರುದ್ಧ ಕಾರ್ಯಾಚರಣೆಗಿಳಿಯಲಿದೆ. ಇದಕ್ಕಾಗಿ ಮಾನಸಿಕವಾಗಿ ಸಜ್ಜಾಗುತ್ತಿದೆ.
Related Articles
ಆದರೆ, ಅತಿಗಣ್ಯರ ವಾಹನಗಳ ಮೇಲೆ ಕೆಂಪುದೀಪ ಬಳಕೆ ರದ್ದುಪಡಿಸಿದ ಸಂಬಂಧ ಇದುವರೆಗೆ ಕೇಂದ್ರದಿಂದ ಯಾವುದೇ ಆದೇಶ ಬಂದಿಲ್ಲ. ಕೇವಲ ಮಾಧ್ಯಮಗಳಿಂದ ಮಾತ್ರ ತಿಳಿದುಬಂದಿದೆ. ಕೇಂದ್ರದ ಸಾರಿಗೆ ಇಲಾಖೆ ಸಚಿವಾಲಯದಿಂದ ಆದೇಶ ಬಂದ ನಂತರ ಅದರ ಪ್ರಕಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು ತಿಳಿಸಿದ್ದಾರೆ.
Advertisement
ಆದೇಶ ಬಂದ ನಂತರ ಎಲ್ಲ ಇಲಾಖೆಗಳಿಗೆ ಮಾಹಿತಿ ನೀಡಲಾಗುವುದು. ಆಮೇಲೆ ಕೆಂಪುದೀಪ ತೆರವಿಗೆ ಅತಿಗಣ್ಯರಿಗೆ ಕೆಲದಿನಗಳು ಕಾಲಾವಕಾಶ ನೀಡಲಾಗುವುದು. ಆದಾಗ್ಯೂ ಕಂಡುಬಂದರೆ, ವಾಹನಗಳನ್ನು ತಡೆದು ಮನವಿ ಮಾಡಲಾಗುವುದು. ನಂತರವೂ ನಿಯಮ ಪಾಲಿಸದಿದ್ದರೆ, ಅನಿವಾರ್ಯವಾಗಿ ತೆರವುಗೊಳಿಸಲಾಗುವುದು ಎಂದೂ ಬಸವರಾಜು ಸ್ಪಷ್ಟಪಡಿಸಿದರು.
ಅತಿಗಣ್ಯರ ವಾಹನಗಳಿಗೆ ಕೆಂಪುದೀಪ ಮತ್ತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಆ್ಯಂಬರ್ ದೀಪ (ಇತರೆ ಬಣ್ಣದ ದೀಪ)ಗಳ ಬಳಕೆಗೆ ಅವಕಾಶ ಇದೆ. ಆದೇಶ ಬಂದ ನಂತರ ಕೆಂಪುದೀಪ ಬಳಕೆಗೆ ಅವಕಾಶ ಇರುವುದಿಲ್ಲ. ಆದರೆ, ಇದುವರೆಗೆ ಯಾವುದೇ ಸೂಚನೆ ಅಥವಾ ಆದೇಶಗಳು ಬಂದಿಲ್ಲ ಎಂದು ಸಾರಿಗೆ ಆಯುಕ್ತ ದಯಾನಂದ ತಿಳಿಸಿದ್ದಾರೆ. ಈ ಮಧ್ಯೆ ನಗರವು ಸೇರಿದಂತೆ ಎಲ್ಲೆಡೆ ಕೆಂಪುದೀಪ ಹೊತ್ತ ವಾಹನಗಳ ಸಂಚಾರ ಎಂದಿನಂತಿತ್ತು.