ತೋಟಗಾರಿಕೆಯತ್ತ ವಾಲಿದ ಭತ್ತ ಕೃಷಿಕ ಹೊಳೆಗೌಡ ಮಾಲೀಪಾಟೀಲರು ತಮ್ಮ ಮೂರು ಎಕರೆ ಜಮೀನಿನಲ್ಲಿ ಥೈವಾನ್ ರೆಡ್ ಲೇಡಿ ತಳಿಯ ಪಪ್ಪಾಯಿ ಬೆಳೆಯನ್ನು 35 ಟನ್‌ನಷ್ಟು ಬೆಳೆದು ಇತರೆ ರೈತರಿಗೆ ಪ್ರೇರಣೆಯಾಗಿದ್ದಾರೆ.
ಭತ್ತದ ತವರು, ಭತ್ತದ ಕಣಜ ಎಂಬ ಹೆಗ್ಗಳಿಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿಗಿದೆ. ಇತ್ತೀಚಿಗೆ ಭತ್ತದ ಬೆಲೆ ಕುಸಿಯುತ್ತಿರುವುದು ಮತ್ತು ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದು, ಜೊತೆಗೆ ಒಂದೇ ಬೆಳೆ ಬರುತ್ತಿರುವುದರಿಂದ ಅಲ್ಲಿನ ರೈತರು ಭತ್ತ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅನೇಕರು ತೋಟಗಾರಿಕೆಯತ್ತ ವಾಲುತ್ತಿದ್ದಾರೆ. ಅಂಥವರಲ್ಲಿ ಗಂಗಾವತಿ ತಾಲ್ಲೂಕಿನ ಹಲಸನಕಟ್ಟಿ ಗ್ರಾಮದ ಹೊಳೆಗೌಡ ಮಾಲೀಪಾಟೀಲ ಒಬ್ಬರು. ಅವರು, ತಮ್ಮ ಮೂರು ಎಕರೆ ಜಮೀನಿನಲ್ಲಿ 35 ಟನ್ ಪಪ್ಪಾಯಿ ಬೆಳೆದು ಗ್ರಾಮದಲ್ಲಿರುವ ರೈತರಿಗೆ ಪ್ರೇರಣೆಯಾಗಿದ್ದಾರೆ.
ರೆಡ್ ಲೇಡಿ ಮಹಾತ್ಮೆ: ಎರಡು ವರ್ಷಗಳ ಹಿಂದೆ ನವೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರದಿಂದ “ಥೈವಾನ್ ರೆಡ್ ಲೇಡಿ’ ಎಂಬ ತಳಿಯ 3,600 ಪಪ್ಪಾಯಿ ಸಸಿಗಳನ್ನು ತಂದು, ಮೂರು ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದರು. ಮೊದಲನೇ ಬಾರಿ ಪಪ್ಪಾಯಿ ಬೆಳೆದಿದ್ದರಿಂದ ರೋಗ ಕೀಟ ಬಾಧೆಯೂ ಕಮ್ಮಿಯಾಗಿರುವುದು ರೈತನಿಗೆ ವರದಾನವಾಗಿದೆ. ಪಪ್ಪಾಯ ಜೂನ್ ತಿಂಗಳಿನಿಂದಲೇ ಇಳುವರಿ ಕೊಡಲು ಆರಂಭಿಸಿದೆ. ಆರಂಭದಲ್ಲಿ ಸರಾಸರಿ 12 ರೂ.ಗೆ ಪ್ರತಿ ಕೆ.ಜಿ.ಯಂತೆ 35 ಟನ್‌ಗಳಷ್ಟು ಹಣ್ಣನ್ನು ಸ್ಥಳೀಯ ಖರೀದಿದಾರರಲ್ಲದೇ, ಮುಂಬಯಿ, ಹೈದರಾಬಾದ್‌ನಿಂದಲೂ ಬಂದ ವ್ಯಾಪಾರಿಗಳು ಖರೀದಿಸಿದ್ದಾರೆ. ಇದುವರೆಗೂ 4 ಲಕ್ಷಕ್ಕೂ ಹೆಚ್ಚಿನ ಆದಾಯ ಪಡೆದಿರುವ ಇವರು ಇನ್ನೂ 6- 8 ತಿಂಗಳಿನಲ್ಲಿ 80- 100 ಟನ್ ಇಳುವರಿ ನಿರೀಕ್ಷಿಸಿದ್ದಾರೆ. 10ರೂ. ನಂತೆ ಪ್ರತಿ ಕೆ.ಜಿ.ಗೆ ಸರಾಸರಿ ದರ ಸಿಕ್ಕರೂ ಅವರ ಒಟ್ಟಾರೆ ಆದಾಯ 8- 10 ಲಕ್ಷ ರೂ. ತಲುಪುವ ನಿರೀಕ್ಷೆ ಇದೆ.
ಸಹಾಯ ಸೌಲಭ್ಯ: ಹೊಳೆಗೌಡರಿಗೆ ಇಲಾಖೆಯಿಂದ ಹನಿ ನೀರಾ (ಓ.ಜೆ) ಅಳವಡಿಸಿಕೊಳ್ಳಲು ಶೇ.90 ರಷ್ಟು ಸಹಾಯಧನ ದೊರೆತಿದೆ. ಅಲ್ಲದೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಹಾಯಧನ ದೊರೆತಿದೆ. ಇವರು ಸ್ವಂತ ಟ್ರ್ಯಾಕ್ಟರ್ ಹೊಂದಿದ್ದರಿಂದ ನೀರಿನ ಟ್ಯಾಂಕರ್ ಖರೀದಿಸಲು ಶೇ.90ರಷ್ಟು ಸಹಾಯಧನವೂ ದೊರೆತಿದೆ. ಹೀಗೆ, ಒಟ್ಟಾರೆಯಾಗಿ ಇಲಾಖೆಯಿಂದ ಉತ್ತಮ ಸೌಲಭ್ಯ ಪಡೆದ ರೈತ ಹೊಳೆಗೌಡರು, ಪಪ್ಪಾಯಿ ಬೆಳೆದು ಉತ್ತಮ ಲಾಭ ಗಳಿಸಿ ಗ್ರಾಮದಲ್ಲಿರುವ ರೈತರಿಗೆ ಮಾದರಿಯಾಗಿದ್ದಾರೆ.
ಸಂಪರ್ಕ: 9880142347 (ಹೊಳೆಗೌಡ )
* ರೇಣುಕಾ ತಳವಾರ