ಕೆಂಪು ತಲೆ ರಣಹದ್ದನ್ನು ಹಳ್ಳಿಯ ಜನ ರಾಜ-ರಾಣಿ ಎಂದು ಕರೆಯುತ್ತಾರೆ. ದೊಡ್ಡ ಮರಗಳ ತುದಿಯಲ್ಲಿ ಇದು ದೊಡ್ಡ ಗೂಡು ಕಟ್ಟುತ್ತದೆ. Red-Headed Vulture (Sarcogyps calvus ) R Peacocks +ಈಚಿನ ದಿನಗಳಲ್ಲಿ ಈ ಪಕ್ಷಿಯ ಸಂತತಿ ಕಡಿಮೆಯಾಗುತ್ತಿದೆ.
ಭಾರತದ ರಣಹದ್ದುಗಳ ಪಾಲಿನ ರಾಜ ಅಂದರೆ ಕೆಂಪು ತಲೆ ರಣ್ಣಹದ್ದು. ಗಾತ್ರದಲ್ಲಿ ಇದು ಟರ್ಕಿ ಕೋಳಿಯಷ್ಟು ದೊಡ್ಡದಾಗಿದೆ. ಇದರ ಕುತ್ತಿಗೆ ಸಹ ಉದ್ದವಾಗಿದೆ. ಇದು ‘ಎಸಿಪಿಟ್ರಿಡಿಯಾ’ ಕುಟುಂಬಕ್ಕೆ ಸೇರಿದ ಪಕ್ಷಿ. ಈಗಲ್, ಕೈಟ್ಸ್, ಹವಾಕ್ ಈ ಎಲ್ಲಾ ಗುಂಪಿನ ಹಕ್ಕಿಗಳು ಈ ಕುಟುಂಬಕ್ಕೆ ಸೇರಿವೆ. ಸುಮಾರು 2000 ಕಿ.ಮೀ. ಎತ್ತರದ ಪರ್ವತ ಪ್ರದೇಶ ಮತ್ತು ಮರಗಳಿರುವ ಕಾಡುಗಳೇ ಇದರ ಇರು ನೆಲೆ.
ಸತ್ತ ಪ್ರಾಣಿಗಳನು,° ಅದರಲ್ಲೂ ಸತ್ತ ಹಸುಗಳ ಮತ್ತು ರಾಸುಗಳ ಮಾಂಸವನ್ನು ತಿನ್ನುವುದು ಎಂದರೆ ರಣ ಹದ್ದಿಗೆ ಎಲ್ಲಿಲ್ಲದ ಖುಷಿ. ಇದು ಸಾಮಾನ್ಯವಾಗಿ ಬೇಟೆಯಾಡುವುದು ಕಡಿಮೆ. ಈ ಹತ್ತು ವರ್ಷದಲ್ಲಿ ಇದರ ಸಂತತಿ ಮತ್ತು ಇರುನೆಲೆ ಗಣನೀಯವಾಗಿ ಇಳಿಕೆಯಾಗಿದೆ. ಅಚ್ಚ ಗುಲಾಬಿ ಬಣ್ಣದ ಕುತ್ತಿಗೆ, ತಲೆ ಕಾಲು ಇದಕ್ಕಿದೆ. ಬಲವಾದ ಚುಂಚು ಇದೆ. ಅದರ ಬುಡದಲ್ಲಿ ಗುಲಾಬಿ -ಕೆಂಪು ಬಣ್ಣವಿದ್ದರೂ ತುದಿಯಲ್ಲಿ ಬೂದು ಬಣ್ಣದ -ಅರ್ಧ ಕೊಕ್ಕು ಸೇರಿಸಿದಂತೆ ಭಾಸವಾಗುತ್ತದೆ. ಹೀಗಾಗಿ, ಮಾಂಸವನ್ನು ಹರಿದು ತಿನ್ನಲು ಅನುಕೂಲವಾಗಿದೆ. ಇದರ ಕುತ್ತಿಗೆ ಉದ್ದವಾಗಿದ್ದು, ಎರಡೂ ಪಾರ್ಶ್ವದಲ್ಲಿ ಗುಲಾಬಿ-ಕೆಂಪು ಬಣ್ಣದ ಚರ್ಮವಿದೆ. ನೋಡಲು ಗಂಡು, ಹೆಣ್ಣು ಎರಡೂ ಒಂದೇ ರೀತಿ ಇರುತ್ತದೆ. ಆದರೆ, ಹೆಣ್ಣು ಹಕ್ಕಿಯ ಕಣ್ಣು- ಅಚ್ಚ ಕಪ್ಪು ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ. ರೆಕ್ಕೆಯೂ ಕೂಡ ಇದೇ ಬಣ್ಣದಿಂದ ಕೂಡಿರುತ್ತದೆ. ಅದರ ತುದಿಯಲ್ಲಿ -ತಿಳಿ ಬೂದು ಮಿಶ್ರಿತ ಕಂದುಬಣ್ಣದ ಗರಿ ಹಾರುವಾಗ ಸ್ಪಷ್ಟವಾಗಿ ಕಾಣುತ್ತದೆ. ರೆಕ್ಕೆಯ ಬುಡದಲ್ಲಿರುವ ಚಿಕ್ಕ ಗರಿ ಕಪ್ಪಾಗಿರುತ್ತದೆ.
ಕಾಲಿನ ಬಣ್ಣ ಕೆಂಪು. ಮೊಳಕಾಲಿನ ಭಾಗದಲ್ಲಿ ಕಪ್ಪು ಗರಿವ್ಯಾಪಿಸಿದೆ. ಕೆಳಕಾಲು ಮತ್ತು ಬೆರಳಿನಲ್ಲಿ ಗರಿಗಳಿಲ್ಲದ ಬೋಳಾದ ಕೆಂಪು ಚರ್ಮವು ಎದ್ದು ಕಾಣುತ್ತದೆ. ಕಾಲು ಸ್ವಲ್ಪ ಕುಳ್ಳು. ಆದರೆ ದಪ್ಪನಾಗಿದೆ. ಕಾಲಿನ ಬೆರಳಿನಲ್ಲಿ ಬೂದು ಬಣ್ಣದ ಚೂಪಾದ ಉಗುರಿದೆ. ಹಾರುವಾಗ ರೆಕ್ಕೆಯ ಅಡಿಯಲ್ಲಿ ಕಾಣುವ – ಬಿಳಿ ಗೆರೆ ಮತ್ತು ತೊಡೆ ಮತ್ತು ಕುತ್ತಿಗೆ ಬುಡದಲ್ಲಿರುವ ಬಿಳಿ ಮಚ್ಚೆ ಇದನ್ನು ಗುರುತಿಸುವ ಚಿಹ್ನೆ. ಇದರ ಸ್ಥೂಲ ಆಕಾರ ಮತ್ತು ಬಣ್ಣ ನೋಡಿ ಇದನ್ನು ಇತರೆ ರಣ ಹದ್ದಿಗಿಂತ ಭಿನ್ನ ಎಂದು ಗುರುತಿಸಬಹುದು.
ಹಳ್ಳಿಗರು ಇದನ್ನು ರಾಜ ರಾಣಿ ಅಂತ ಕರೆಯುತ್ತಾರೆ. ಇದರ ಕುತ್ತಿಗೆ ಹಿಂಭಾಗದಲ್ಲಿ ಕಪ್ಪು ಗರಿ ಕುತ್ತಿಗೆಗೆ ಆಧಾರ ಆಗಿರುವ ಪೇಡ್ ನಂತೆ ಭಾಸವಾಗುತ್ತದೆ. ಕಾಗೆ, ಸತ್ತ ದನದ ಕಣ್ಣನ್ನು ಒಯ್ಯುವುದು ಈ ಹದ್ದಿಗೆ ಕಾಣಿಸುತ್ತದೆ. ಆಗ ಮೊದಲು ಈ ರಾಜಾ -ರಾಣಿ ಹದ್ದು ಬರುತ್ತದೆ. ಹೀಗೆ ಬಂದ ಈ ಲೀಡರ್, ಮೊದಲ ಮಾಂಸದ ಭೋಜನ ಸವಿಯುವುದು. ಅನಂತರ ಉಳಿದದ್ದು ತನ್ನ ಗುಂಪಿನಲ್ಲಿರುವ ಸೇವಕ, ಗುಂಪಿನ ಒಡೆಯ, ರಕ್ಷಕ, ಸಾಮಾನ್ಯ ಪ್ರಜೆ ಈ ರೀತಿಯ ಅದರ ಕೆಟಗರಿಗೆ ಅನುಗುಣವಾಗಿ ಸತ್ತ ಪ್ರಾಣಿಗಳನ್ನು ತಿನ್ನುತ್ತದೆ.
ಈಗೀಗ ಕೆಂಪು ರಣಹದ್ದುಗಳ ಇದರ ಸಂತತಿಯೇ ಕಡಿಮೆಯಾಗುತ್ತಿದೆ. ಸತ್ತ ದನ ಹಸುಗಳನ್ನು ಈಗ ಎಸೆಯುವುದಿಲ್ಲ . ಅದರಿಂದ ಆಹಾರದ ಕೊರತೆ ಮತ್ತು ಭತ್ತದ ಪೈರಿಗೆ ಸಿಂಪಡಿಸುವ ಕೀಟ ನಾಶಕ ದನದ ಮಾಂಸದ ಮೂಲಕ ಇದರ ದೇಹ ಸೇರಿ ಅಳಿವಿಗೆ ಕಾರಣವಾಗುತ್ತಿದೆ ಎನ್ನುವ ವಾದವಿದೆ.
ಈ ಹಕ್ಕಿ ಭಿನ್ನ ರೀತಿಯಲ್ಲಿ ಹಾರುತ್ತದೆ. ಕೆಲವೊಮ್ಮ ಗಾಳಿಯಲ್ಲಿ ತೇಲುತ್ತಾ ಭೂಮಿಯ ಮೇಲಿರುವ ತನ್ನ ಆಹಾರ ಗುರುತಿಸುವಷ್ಟು ಇದರ ನೋಟ ಸೂಕ್ಷ್ಮವಾಗಿದೆ. ದೊಡ್ಡ ಮರದ ತುತ್ತ ತುದಿಯಲ್ಲಿ ಗೂಡು ಕಟ್ಟುತ್ತದೆ. ಡಿಸೆಂಬರ್-ಏಪ್ರಿಲ್ ಇದು ಮರಿಮಾಡುವ ಸಮಯ. 10-15 ಮೀ ಎತ್ತರದ ಮರದ ತುದಿಯಲ್ಲಿ ಕಟ್ಟಿಗೆ ಕೋಲನ್ನು ಸೇರಿಸಿ ದೊಡ್ಡ ಗೂಡನ್ನು ಕಟ್ಟುತ್ತದೆ. ಅದರಲ್ಲಿ ಒಂದೇ ಒಂದು ಮೊಟ್ಟೆ ಇಡುತ್ತದೆ.