Advertisement

ರೆಡ್‌ಕ್ರಾಸ್‌ ಬಳ್ಳಾರಿ ಘಟಕಕ್ಕೆ ಪ್ರಶಸ್ತಿ ಗರಿ

11:57 AM May 26, 2018 | |

ಬಳ್ಳಾರಿ: ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಪ್ರಥಮ ಚಿಕಿತ್ಸೆ ತರಬೇತಿ ಸೇರಿದಂತೆ 27 ವಿಭಾಗಗಳಲ್ಲಿ ಬಳ್ಳಾರಿ ರೆಡ್‌ಕ್ರಾಸ್‌ ಸಂಸ್ಥೆ ಸಲ್ಲಿಸಿದ ಅಭೂತಪೂರ್ವ ಸೇವೆಗಳಿಗೆ ಉತ್ತಮ ಕಾರ್ಯನಿರ್ವಹಣೆ ಜಿಲ್ಲೆ ಪ್ರಶಸ್ತಿ ಲಭಿಸಿದ್ದು, ಎರಡು ದಿನಗಳ ಹಿಂದೆ ರಾಜಭವನದಲ್ಲಿ ರಾಜ್ಯಪಾಲರಿಂದ ಸ್ವೀಕರಿಸಲಾಯಿತು ಎಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚಿತ ಆರೋಗ್ಯ ತಪಾಸಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಪ್ರಥಮ ಚಿಕಿತ್ಸೆ ತರಬೇತಿ, ಲೆಡ್‌ ಪೊಲ್ಯೂಶನ್‌ ಕಾರ್ಯಾಗಾರ, ಕಿವಿ ಪರೀಕ್ಷೆ ತಪಾಸಣೆ, ಕ್ವೀಜ್‌ ಕಾಂಪಿಟೇಶನ್‌, ವಿಶ್ವ ತಂಬಾಕು ದಿನಾಚರಣೆ, ಯೋಗ ದಿನಾಚರಣೆ, ಕ್ಯಾನ್ಸರ್‌ ಜಾಗೃತಿ, ರಕ್ತದಾನ, ಸ್ವತ್ಛ ಭಾರತ ಸೇರಿದಂತೆ 27 ವಿಭಾಗಗಳಲ್ಲಿ 185 ಕಾರ್ಯಕ್ರಮಗಳನ್ನು 2016-17ನೇ ಸಾಲಿನಲ್ಲಿ ಬಳ್ಳಾರಿ ರೆಡ್‌ಕ್ರಾಸ್‌ ಸಂಸ್ಥೆ ಕೈಗೊಂಡಿದ್ದು, ಇದರ ಸೇವಾ ಕಾರ್ಯನಿರ್ವಹಣೆ ಮೆಚ್ಚಿ ಉತ್ತಮ ಕಾರ್ಯನಿರ್ವಹಣೆ ಜಿಲ್ಲೆ ಪ್ರಶಸ್ತಿ ನೀಡಲಾಗಿದೆ. ಇದಕ್ಕೆ ಕಾರಣರಾದ ರೆಡ್‌ಕ್ರಾಸ್‌ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

50 ಸಾವಿರ ನೋಂದಣಿ ಗುರಿ: ಸೇವಾ ಮನೋಭಾವವನ್ನು ಯುವಜನರಲ್ಲಿ ಬೆಳೆಸುವ ದೃಷ್ಟಿಯಿಂದ ಬಳ್ಳಾರಿ ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯಕಾರಿ ಸಮಿತಿ ತೀರ್ಮಾನದ ಅನ್ವಯ ಜೂನಿಯರ್‌ ರೆಡ್‌ಕ್ರಾಸ್‌ ಮತ್ತು ಯುವರೆಡ್‌ಕ್ರಾಸ್‌ಗೆ 50 ಸಾವಿರ ಯುವ ಜನರನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಯುವಜನರಿಗೆ ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣಾ ತರಬೇತಿ ನೀಡಲಾಗುತ್ತದೆ ಮತ್ತು ಇದರಲ್ಲಿ ಪಾಲ್ಗೊಂಡರೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂಬ ಮನೋಭಾವ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ನೋಂದಣಿ
ಮಾಡುವ ಉದ್ದೇಶ ಹೊಂದಲಾಗಿದೆ. ಈ ವರ್ಷ ಬಳ್ಳಾರಿ ರೆಡ್‌ಕ್ರಾಸ್‌ ಸಂಸ್ಥೆ ವತಿಯಿಂದ ಅವಶ್ಯವಿರುವ ಕಡೆ ರಕ್ತ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ರಕ್ತ ಸಂಗ್ರಹಣಾ ಕೇಂದ್ರಗಳಿರುವ ಕಡೆಗಳಲ್ಲಿ ಅವುಗಳನ್ನು ರಕ್ತ ಬ್ಯಾಂಕ್‌ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು. 

20237 ಮತದಾರರು: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಮೇ.15ರಿಂದ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಈ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 20237 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದಕ್ಕಾಗಿ 30 ಮತದಾನ ಕೇಂದ್ರಗಳನ್ನು ಆರಂಭಿಸಿದ್ದು, 80 ಜನ ಸಿಬ್ಬಂದಿ ನಿಯೋಜಿಸಲಾಗಿದೆ. 9 ಫ್ಲೆ$çಯಿಂಗ್‌ ಸ್ಕ್ವಾಡ್‌ ತಂಡಗಳನ್ನು ನೇಮಕ ಮಾಡಲಾಗಿದೆ. ಜೂ.8ರಂದು ಮತದಾನ ನಡೆಯಲಿದ್ದು, ಜೂ.12ರಂದು ಗುಲ್ಬರ್ಗ ವಿವಿಯಲ್ಲಿ ಮತ ಏಣಿಕೆ ನಡೆಯಲಿದೆ ಎಂದು ತಿಳಿಸಿದರು. 

Advertisement

ಈ ಸಂದರ್ಭದಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಷಕೀಬ್‌, ಮುಖಂಡರಾದ ಡಾ| ಮಹಿಪಾಲ್‌, ಕೆ.ಚಂದ್ರಶೇಖರ್‌, ಸಾಧನಾ ಹಿರೇಮಠ, ಎಸ್‌ಬಿಐ ದೇವಣ್ಣ ಸೇರಿದಂತೆ ಇನ್ನಿತರರಿದ್ದರು. 

ಬೀಜ-ಗೊಬ್ಬರ ದಾಸ್ತಾನು ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು, ಅವಶ್ಯಕವಿರುವ 15 ಸಾವಿರ ಟನ್‌ ಗೊಬ್ಬರ ಮತ್ತು 15 ಸಾವಿರ ಟನ್‌ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಜೂನ್‌ ತಿಂಗಳಲ್ಲಿ 15 ಸಾವಿರ ಟನ್‌ ಗೊಬ್ಬರ, ಜುಲೈ ಮತ್ತು ಮುಂದಿನ ತಿಂಗಳಲ್ಲಿ ತಲಾ 40 ಸಾವಿರ ಟನ್‌ ಗೊಬ್ಬರ ಅವಶ್ಯಕವಿದ್ದು, ಅದನ್ನು ಸಮರ್ಪಕವಾಗಿ ಪೂರೈಸಲು ಸೂಚನೆ ನೀಡಲಾಗಿದೆ. ಈಗಾಗಲೇ ರಸಗೊಬ್ಬರ ಕಂಪನಿಗಳ ಡೀಲರ್‌ಗಳು, ರಸಗೊಬ್ಬರ ಸರಬರಾಜು ಗುತ್ತಿಗೆದಾರರು ಮತ್ತು ಲಾರಿ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ.

ರೈತರಿಗೆ ರಸಗೊಬ್ಬರ ಪೂರೈಕೆ ವಿಷಯದಲ್ಲಿ ಯಾವುದೇ ಸಮಸ್ಯೆಗಳು ಉಂಟಾದರೆ ಅವಶ್ಯಕ ವಸ್ತು ಕಾಯ್ದೆ ಅಡಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next