Advertisement

ಜು.17ರಿಂದ ಉಡುಪಿಯಲ್ಲಿ ಅಗ್ನಿಪಥ್‌ ನೇಮಕಾತಿ ರ‍್ಯಾಲಿ:6,800ಕ್ಕೂ ಅಧಿಕ ಅಭ್ಯರ್ಥಿಗಳ ನೋಂದಣಿ

11:43 PM Jul 12, 2023 | Team Udayavani |

ಉಡುಪಿ: ಅಜ್ಜರಕಾಡು ಕ್ರೀಡಾಂಗಣದಲ್ಲಿ ಭಾರತೀಯ ಸೇನೆಯ ಅಗ್ನಿಪಥ್‌ ಸೇನಾ ನೇಮ ಕಾತಿ ರ್ಯಾಲಿಯು ಜು. 17ರಿಂದ 25ರ ವರೆಗೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡು, ಅಭ್ಯರ್ಥಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ರ್ಯಾಲಿ ಕುರಿತ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರ್ಯಾಲಿಯಲ್ಲಿ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. 6,800ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ರ್ಯಾಲಿಗೆ ನಿತ್ಯ 1000 ಮಂದಿ ಆಗಮಿಸಲಿದ್ದು, ಇವರಿಗೆ ಕ್ರೀಡಾಂಗಣ ದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್‌ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಬೇಕು. ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಬಗ್ಗೆ ನಿತ್ಯವೂ ಪರಿ ಶೀಲಿಸುವಂತೆ ನಗರಸಭೆಯ ಪೌರಾ ಯುಕ್ತರಿಗೆ ಸೂಚನೆ ನೀಡಿದರು.

ಅಭ್ಯರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗದಂತೆ, ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಯಾಗದಂತೆ ಮತ್ತು ರಾತ್ರಿ ವೇಳೆಯಲ್ಲಿ ರಸ್ತೆ ಬದಿಗಳಲ್ಲಿ ಅಭ್ಯರ್ಥಿಗಳು ಮಲಗ ದಂತೆ, ಕ್ರೀಡಾಂಗಣದ ಸುತ್ತಮುತ್ತ ಅಗತ್ಯ ಭದ್ರತ ವ್ಯವಸ್ಥೆ ಒದಗಿಸಲು ಪೊಲೀಸ್‌ ಇಲಾಖೆಗೆ ತಿಳಿಸಿದರು.

ಮೆಸ್ಕಾಂ ವತಿಯಿಂದ ಕ್ರೀಡಾಂಗಣಕ್ಕೆ ನಿರಂತರ ವಿದ್ಯುತ್‌ ಸರಬರಾಜು ಮಾಡಬೇಕು. ಅಪಾಯಕಾರಿ ಮರದ ಕೊಂಬೆಗಳು ಮತ್ತು ವಿದ್ಯುತ್‌ ತಂತಿಗಳಿದ್ದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬಿಎಸ್‌ಎನ್‌ಎಲ್‌ ವತಿಯಿಂದ ಸೇನಾ ಕಾರ್ಯಗಳನ್ನು ನಿರ್ವಹಿಸಲು ಇಂಟರ್‌ನೆಟ್‌, ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ನೈಜತೆ ಪರಿಶೀಲಿಸಲು ಶಿಕ್ಷಣ ಇಲಾ ಖೆಯ ಸಿಬಂದಿ ನಿಯೋಜನೆ, ತುರ್ತು ಆರೋಗ್ಯ ಸಹಾಯಕ್ಕಾಗಿ ಆ್ಯಂಬುಲೆನ್ಸ್‌ ಸಹಿತ ವೈದ್ಯಕೀಯ ಸಿಬಂದಿ ನಿಯೋಜಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

Advertisement

ಈಗಾಗಲೇ ನೋಂದಣಿ ಪ್ರಕ್ರಿಯೆ ನಡೆದಿದ್ದು, ಅಗ್ನಿವೀರ್‌ ಜನರಲ್‌ ಡ್ನೂಟಿ, ಅಗ್ನಿವೀರ್‌ ಟೆಕ್ನಿಕಲ್‌, ಅಗ್ನಿವೀರ್‌ ಟ್ರೇಡ್ಸ್‌ಮನ್‌, ಅಗ್ನಿವೀರ್‌ ಕ್ಲರ್ಕ್‌/ಸ್ಟೋರ್‌ ಕೀಪರ್‌ ಹುದ್ದೆಗಳಿಗೆ ನೇಮಕ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರಗಳನ್ನು ಇ-ಮೇಲ್‌ ಮೂಲಕ ಕಳುಹಿಸಲಾಗಿದೆ ಎಂದರು.

ಸಹಾಯಕ ಪೊಲೀಸ್‌ ಅಧೀಕ್ಷಕ ಸಿದ್ದಲಿಂಗಪ್ಪ, ಪೌರಾಯುಕ್ತ ರಾಯಪ್ಪ, ಡಿಎಚ್‌ಒ ಡಾ| ನಾಗಭೂಷಣ ಉಡುಪ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next