Advertisement

Udupi ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆ: ಕೌನ್ಸೆಲಿಂಗ್‌ ನಡೆದು ವಾರ ಕಳೆದರೂ ಲಭಿಸದ ಆದೇಶ!

12:01 AM Nov 05, 2023 | Team Udayavani |

ಉಡುಪಿ: ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಿದ್ದು, ಅತಿಥಿ ಶಿಕ್ಷಕರ ಮೂಲಕ ತರಗತಿ ನಡೆಸಲಾಗುತ್ತಿದೆ. ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್‌ ಪೂರ್ಣಗೊಂಡು ವಾರ ಕಳೆದರೂ ಆದೇಶದ ಪ್ರತಿ ಮಾತ್ರ ಅಭ್ಯರ್ಥಿಗಳಿಗೆ ಸಿಕ್ಕಿಲ್ಲ. ಹೀಗಾಗಿ ತಾವು ಆಯ್ಕೆ ಮಾಡಿಕೊಂಡಿರುವ ಶಾಲೆಗಳಿಗೆ ಹೋಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ.

Advertisement

ಖಾಯಂ ಶಿಕ್ಷಕರ ನೇಮಕಾತಿಯಾಗುತ್ತಿದ್ದಂತೆ ಅತಿಥಿ ಶಿಕ್ಷಕರನ್ನು ತೆರವುಗೊಳಿಸಲಾಗುತ್ತದೆ. ಸರಕಾರಿ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ-2022ರ ಸಂಬಂಧಿಸಿದಂತೆ 2023ರ ಮಾ. 8 ರಂದು ಪ್ರಕಟಿಸಲಾದ 1:1 ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಅರ್ಹ ಅಭ್ಯರ್ಥಿಗಳ ಕೌನ್ಸೆಲಿಂಗ್‌ ಅ. 21ರಂದು ನಡೆದಿತ್ತು. ದಕ್ಷಿಣ ಕನ್ನಡದಲ್ಲಿ ನಡೆದ ಕೌನ್ಸೆಲಿಂಗ್‌ಗೆ 489 ಅರ್ಹರಾಗಿದ್ದು, 468 ಮಂದಿ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಉಡುಪಿ ಜಿಲ್ಲೆಯ 214 ಅಭ್ಯರ್ಥಿಗಳಲ್ಲಿ 207 ಮಂದಿ ಕೌನ್ಸೆಲಿಂಗ್‌ ಪೂರೈಸಿದ್ದಾರೆ. ಆದರೆ ಅವರಾರಿಗೂ ಇನ್ನೂ ಆದೇಶ ಪತ್ರ ನೀಡಿಲ್ಲ.

ಸಿಂಧುತ್ವ ಪರೀಕ್ಷೆ, ಅಂಕಪಟ್ಟಿ ಪರಿಶೀಲನೆ ಸೇರಿದಂತೆ ವಿವಿಧ ಕಾರಣಗಳಿಂದ ನೇಮಕಾತಿ ಆದೇಶ ನೀಡಲು ಇಲಾಖೆಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಕೌನ್ಸೆಲಿಂಗ್‌ ಸಂದರ್ಭ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇವೆ. ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಎಲ್ಲವೂ ಸರಿಯಿವೆ ಎಂದಾದ ಬಳಿಕವೇ ಸ್ಥಳ ಆಯ್ಕೆಗೆ ಅವಕಾಶ ನೀಡಿದ್ದಾರೆ. ಆದರೆ ಅಂತಿಮ ಆದೇಶ ಪ್ರತಿ ಮಾತ್ರ ಇನ್ನೂ ನೀಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಈವರೆಗೂ ಕೇವಲ 67 ಹಾಗೂ ದ.ಕ. ಜಿಲ್ಲೆಯಲ್ಲಿ ಸುಮಾರು 100 ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಷಯವಾರು ಅಭ್ಯರ್ಥಿಗಳು
ದ.ಕ. ಜಿಲ್ಲೆಯಲ್ಲಿ ಗಣಿತ ಮತ್ತು ವಿಜ್ಞಾನಕ್ಕೆ 189ರಲ್ಲಿ 181, ಸಮಾಜ ವಿಜ್ಞಾನ 201ರಲ್ಲಿ 189, ಇಂಗ್ಲಿಷ್‌ 77ರಲ್ಲಿ 76, ಜೀವಶಾಸ್ತ್ರದ 20 ಅಭ್ಯರ್ಥಿಗಳ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಉಡುಪಿ ಜಿಲ್ಲೆಯ ಗಣಿತ ವಿಜ್ಞಾನ, ಕನ್ನಡ ವಿಷಯದ 87 ಅಭ್ಯರ್ಥಿಗಳಲ್ಲಿ 84, ಸಮಾಜ ವಿಜ್ಞಾನ, ಕನ್ನಡ ವಿಷಯದ 96 ಅಭ್ಯರ್ಥಿಗಳಲ್ಲಿ 94, ಜೀವಶಾಸ್ತ್ರ, ಕನ್ನಡ ವಿಷಯದ 11ಕ್ಕೆ 11, ಇಂಗ್ಲಿಷ್‌ ವಿಷಯದ 20ರಲ್ಲಿ 18 ಮಂದಿಗೆ ಕೌನ್ಸೆಲಿಂಗ್‌ ಪೂರ್ಣಗೊಂಡಿದೆ.

Advertisement

ವಿಳಂಬ ಯಾಕೆ?
ಅಭ್ಯರ್ಥಿಗಳ ಮೂಲ ದಾಖಲಾತಿಯನ್ನು ಸಿಂಧುತ್ವ ಪರೀಕ್ಷೆಗೆ ಕಳುಹಿಸಿ, ಅನಂತರ ಅಂಕಪಟ್ಟಿಗಳನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೆಲವು ದಾಖಲೆಗಳನ್ನು ಕಂದಾಯ ಇಲಾಖೆಯಿಂದ ಪರಿಶೀಲನೆ ಮಾಡಬೇಕಾಗುತ್ತದೆ. ಎಲ್ಲವೂ ಸರಿಯಾಗಿರುವ ಅಭ್ಯರ್ಥಿಗಳಿಗೆ ಹಂತ ಹಂತವಾಗಿ ಆದೇಶ ಪತ್ರ ವಿತರಣೆ ಮಾಡುತ್ತಿದ್ದೇವೆ. ತಾಂತ್ರಿಕ ಸಮಸ್ಯೆಯಿಲ್ಲ. ಪರಿಶೀಲನ ಪ್ರಕ್ರಿಯೆ ನಡೆಯುತ್ತಿದೆ ಎಂದು ಉಭಯ ಜಿಲ್ಲೆಯ ಡಿಡಿಪಿಐ ಕಚೇರಿ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next