Advertisement

Teachers Recruitment: ಶೀಘ್ರದಲ್ಲಿಯೇ ಶಿಕ್ಷಕರ ನೇಮಕಾತಿಗೆ ಕ್ರಮ; ಮಧು ಬಂಗಾರಪ್ಪ ಭರವಸೆ

03:52 PM Oct 13, 2023 | Kavyashree |

ಸಾಗರ: ರಾಜ್ಯದಲ್ಲಿ 13,500 ಶಿಕ್ಷಕರ ನೇಮಕಾತಿಗೆ ಉಚ್ಚ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದ್ದು ಶೀಘ್ರದಲ್ಲಿಯೇ ಶಿಕ್ಷಕರ ನೇಮಕಾತಿ ಮೂಲಕ ಕೊರತೆ ಇರುವ ಶಿಕ್ಷಕರ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Advertisement

ನಗರದ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಗುರುವಾರ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ಅವರು ಪತ್ರಕರ್ತರ ಜೊತೆ ಮಾತನಾಡಿ, ಈ ಪ್ರಮಾಣದಲ್ಲಿ ಶಿಕ್ಷಕರನ್ನು ಭರ್ತಿ ಮಾಡಿಕೊಂಡರೆ ಬಹುತೇಕ ಶಿಕ್ಷಕರ ಸಮಸ್ಯೆ ಬಗೆಹರಿಯಲಿದ್ದು, ಮುಂದಿನ ಹಂತದಲ್ಲಿ ದೈಹಿಕ ಶಿಕ್ಷಕರ ನೇಮಕಾತಿಗೆ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಎನ್‌ಇಪಿ ಬದಲು ಎಸ್‌ಇಪಿ ಜಾರಿಗೆ ತರಲು ತಜ್ಞರ ಸಮಿತಿ ರಚಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಗಿಂತ ರಾಜ್ಯ ಶಿಕ್ಷಣ ನೀತಿ ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಲಾಗುತ್ತದೆ. ಮಕ್ಕಳಿಗೆ ಸ್ಥಳೀಯ ಸಂಸ್ಕೃತಿ, ಇತಿಹಾಸ ಕುರಿತು ಕಲಿಸುವ ಜೊತೆಗೆ ಅವರನ್ನು ರಾಷ್ಟ್ರೀಯ ಶಿಕ್ಷಣ ನೀತಿಗಿಂತ ಹೆಚ್ಚು ಬಲಿಷ್ಟವಾಗಿ ಸ್ಪರ್ಧಾತ್ಮಕ ಜಗತ್ತು ಎದುರಿಸಲು ಅಗತ್ಯವಾದ ಪಠ್ಯಗಳನ್ನು ಅಳವಡಿಸಲಾಗುತ್ತದೆ. ಹಾಗೆ ನೋಡಿದರೆ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿಯೇ ಈತನಕ ಎನ್‌ಇಪಿ ಜಾರಿಗೆ ತಂದಿಲ್ಲ ಎಂದು ಹೇಳಿದರು.

ಈಗಾಗಲೆ ಕೆಲವು ಕಡೆಗಳಲ್ಲಿ ಎನ್‌ಇಪಿ ಅಡಿ ಮಕ್ಕಳು ಶಿಕ್ಷಣ ಮುಂದುವರೆಸುತ್ತಿದ್ದಾರೆ. ಅವರ ಶಿಕ್ಷಣಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಸರ್ಕಾರ ಭವಿಷ್ಯದ ಮಕ್ಕಳ ದೃಷ್ಟಿಯಿಂದ ಬದ್ಧತೆಯಿಂದಲೇ ಶೈಕ್ಷಣಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತದೆ ಎಂದು ಹೇಳಿದರು.

ಈಗಾಗಲೇ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಈ ಸಂಬಂಧ ವಾದ ಮಂಡಿಸಲು ರಾಜ್ಯ ಸರ್ಕಾರ ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಗ್ರಾಮೀಣ ಭಾಗದ ಜನರು ವಾಸಿಸುವ ನೆಲದ ಹಕ್ಕು ಅವರಿಗೆ ಕೊಡಲು 94ಸಿಸಿ ಅಡಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ಕಂದಾಯ ಭೂಮಿ ಯಾವುದು, ಅರಣ್ಯಭೂಮಿ ಯಾವುದು ಎನ್ನುವ ಕುರಿತು ಸರ್ವೇ ನಡೆಸಲು ಸಹ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next