ಕುಷ್ಟಗಿ: ಆರೋಗ್ಯ ಇಲಾಖೆಯಲ್ಲಿ ಕಳೆದ 10 ರಿಂದ 15 ವರ್ಷಗಳಲ್ಲಿ ಆಗದೇ ಇರುವ ವೈದ್ಯರ ಕೊರತೆಯನ್ನು ಪ್ರಸಕ್ತ ವರ್ಷದಲ್ಲಿ 1,400 ಹುದ್ದೆ ಭರ್ತಿ ಮಾಡಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೊಪ್ಪಳ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ ಹೇಳಿದರು.
ಇಲ್ಲಿನ ಕುಷ್ಟಗಿ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗ ಹಾಗೂ ವಾರ್ಡ್ ಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸಕ್ತ ವರ್ಷದಲ್ಲಿ 1 ಸಾವಿರ ವೈದ್ಯರು, 350 ತಂತ್ರಜ್ಞರನ್ನು ನೇಮಿಸಲಾಗಿದೆ. ಆದರೂ ಸ್ಪೆಷಾಲಿಸ್ಟ್ ವೈದ್ಯರ ಕೊರತೆ ಇದೆ. ವೈದ್ಯರ ಕೊರತೆ ನೀಗಿಸಲು ಮತ್ತೊಂದು ಸುತ್ತಿಗೆ ವೈದ್ಯರ ಭರ್ತಿಗೆ ಅಹ್ವಾನಿಸಲು ಯೋಜಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ 4,400 ಹುದ್ದೆ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ. ಪ್ಯಾರಮೆಡಿಕಲ್, ಲ್ಯಾಬ್ ಟೆಕ್ನಿಷಿಯೇನ್, ಫರ್ಮಾಸಿಸ್ಟ್, ನರ್ಸಿಂಗ್ ಹೆಚ್ಚು ಫೋಕಸ್ ಮಾಡುತ್ತಿದ್ದೇವೆ. ಅಗತ್ಯತೆ ಅನುಗುಣವಾಗಿ ಭರ್ತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದೆ. ಗ್ರೂಪ್ ಡಿ ಹುದ್ದೆ ಭರ್ತಿಗೆ ಹೆಚ್ಚು ಬೇಡಿಕೆ ಇದ್ದು ಶೇ.100 ರಷ್ಟು ಭರ್ತಿಗೆ ತಯಾರಿ ಮಾಡಿಕೊಳ್ಳಲು ಹಣಕಾಸು ಇಲಾಖೆಯ ನಿಕಟ ಸಂಪರ್ಕದಲ್ಲಿದ್ದೇವೆ, ಶೇ.75 ಭರ್ತಿಗೆ ಅವಕಾಶ ಇದೆ ಎಂದರು.
ಕುಷ್ಟಗಿ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಆರಂಭಿಸದ ಬಗ್ಗೆ ಸುದ್ದಿಗಾರರ ಪ್ತಶ್ನೆಗೆ ಪ್ರತಿಕ್ರಿಯಿಸಿದ ಅನಿಲಕುಮಾರ ಅವರು, ಸಿಟಿ ಸ್ಕ್ಯಾನ್ ತಾಲೂಕಾ ಮಟ್ಟದ ಆಸ್ಪತ್ರೆ ವ್ಯವಸ್ಥೆಯ ಡಿಸೈನ್ ನಲ್ಲಿ ಇಲ್ಲ. ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೀಮಿತವಾಗಿದ್ದು ಪಿಪಿಪಿ ಮಾದರಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಎಂ.ಆರ್.ವೈ. ನಿರ್ವಹಣೆಗೆ ಸ್ಪೆಷಲಿಷ್ಟ ಇರುತ್ತಾರೆ. ಆದರೆ ತಾಲೂಕು ಆಸ್ಪತ್ರೆಯಲ್ಲಿ ಕೆಕೆ ಆರ್ ಡಿ ಬಿ ಅನುದಾನ ಬಳಸಿಕೊಂಡು ಸಿಟಿ ಸ್ಕ್ಯಾನ್ ವ್ಯವಸ್ಥೆ ಇದ್ದು, ಹೊರಗುತ್ತಿಗೆಯಲ್ಲಿ ಸಿಟಿ ಸ್ಕ್ಯಾನ್ ನಿರ್ವಹಿಸಲು ಸಾದ್ಯವಿದೆ ಎಂದರು.
ಕುಷ್ಟಗಿ 100 ಬೆಡ್ ಗೆ ಮಾತ್ರವಿದ್ದು, ಈಗಾಗಲೇ 100 ಬೆಡ್ ಎಂಸಿಎಚ್ ಆಸ್ಪತ್ರೆ ಮಂಜೂರಾಗಿದ್ದು ಈ ಸೇವೆಯಿಂದ ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಗೆ ಒತ್ತಡ ಕಡಿಮೆಯಾಗಲಿದ್ದು ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಕೇಂದ್ರೀಕರಿಸಲು ಸಾದ್ಯವಾಗಲಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಲಕಾನಂದ ಮಳಗಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರು, ಕುಷ್ಟಗಿ ಆಸ್ಪತ್ರೆ ಮುಖ್ಯವೈದ್ಯ ಡಾ. ಕೆ.ಎಸ್. ರಡ್ಡಿ ಯೋಜನಾ ಅಧಿಕಾರಿಗಳಾದ ಡಾ.ನಂದಕುಮಾರ, ಡಾ.ವೆಂಕಟೇಶ, ಡಾ. ಪ್ರಕಾಶ್, ಡಾ.ರಮೇಶ ಮತ್ತೀತರಿದ್ದರು.
ಇದಕ್ಕೂ ಮೊದಲು ಕುಷ್ಟಗಿ ತಹಸೀಲ್ದಾರ ಕಚೇರಿಯ ಚುನಾವಣಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.