Advertisement

ಅಗ್ನಿವೀರರ ನೇಮಕಾತಿ ಪೂರ್ಣ

04:05 PM Sep 19, 2022 | Team Udayavani |

ಹಾವೇರಿ: ಅಗ್ನಿಪಥ್‌ ಯೋಜನೆಯಡಿ ಹಾವೇರಿಯಲ್ಲಿ ಕಳೆದ ಹದಿನೆಂಟು ದಿನಗಳಿಂದ ಜರುಗಿದ್ದ ಅಗ್ನಿವೀರರ ನೇಮಕಾತಿ ಯಶಸ್ವಿಯಾಗಿ ಪೂರ್ಣಗೊಂಡಿದೆ. 43 ಸಾವಿರ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದು, ಈ ಪೈಕಿ 4,200 ಅಭ್ಯರ್ಥಿಗಳು ಲಿಖೀತ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

Advertisement

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಸೇನಾ ನೇಮಕಾತಿ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ಸತತ ಮಳೆಯ ಕಾರಣ ಸೇನಾ ನೇಮಕಾತಿ ರ್ಯಾಲಿ ಆಯೋಜಿಸುವುದು ಸವಾಲಿನ ಕೆಲಸವಾಗಿತ್ತು. ಆದಾಗ್ಯೂ ಜಿಲ್ಲೆಯ ಅಧಿಕಾರಿಗಳು, ನಾಗರಿಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸೇನಾ ನೇಮಕಾತಿ ವಿಭಾಗದ ಅಧಿಕಾರಿಗಳ ಅಭೂತಪೂರ್ವ ಸಹಕಾರದಿಂದ ನೇಮಕಾತಿ ಪ್ರಕ್ರಿಯೆಗೆ ತಡೆ ಇಲ್ಲದಂತೆ ಯಶಸ್ವಿಯಾಗಿ ಜರುಗಿದೆ. ಯಶಸ್ವಿಗೆ ಕಾರಣರಾದ ಎಲ್ಲರನ್ನೂ ಅಭಿನಂದಿಸುವೆ ಎಂದರು.

ಹಾವೇರಿ ಜಿಲ್ಲಾ ಕ್ರೀಡಾಗಣದಲ್ಲಿ ಸೆಪ್ಟೆಂಬರ್‌ ಒಂದರಿಂದ ಸತತ ಹದಿನೆಂಟು ದಿನಗಳ ಕಾಲ ಅಗ್ನಿವೀರರ ನೇಮಕಾತಿ ರ್ಯಾಲಿ ಪ್ರಕ್ರಿಯೆ ನಡೆಯಿತು. ರಾಜ್ಯದ 11 ಜಿಲ್ಲೆಯ ಸುಮಾರು 58,218 ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ನೋಂದಾಯಿಸಿಕೊಂಡಿದ್ದರು. ಈ ಪೈಕಿ 43 ಸಾವಿರ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಭಾಗವಹಿಸಿದ್ದರು. 4200 ಅಭ್ಯರ್ಥಿಗಳು ದಾಖಲಾತಿ ಹಾಗೂ ರನ್ನಿಂಗ್‌ ಸೇರಿದಂತೆ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ ಈಗಾಗಲೇ 3000 ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದೆ. ಉಳಿದ 1200 ಅಭ್ಯರ್ಥಿಗಳನ್ನು ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಎಲ್ಲರ ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ನವೆಂಬರ್‌ 13ರಂದು ಮಂಗಳೂರಿನಲ್ಲಿ ಲಿಖೀತ ಪರೀಕ್ಷೆ ಜರುಗಲಿದೆ. ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಅಗ್ನಿವೀರರಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಸೇನಾ ನೇಮಕಾತಿ ವೇಳೆ ಪ್ರತಿದಿನ ಮಳೆ ಸುರಿದು ಕ್ರೀಡಾಂಗಣದಲ್ಲಿ ಅಭ್ಯರ್ಥಿಗಳ ರನ್ನಿಂಗ್‌ ಟ್ರ್ಯಾಕ್‌ನಲ್ಲಿ ತೊಂದರೆ ಉಂಟಾಗುತಿತ್ತು. ನಗರಸಭೆ ಹಾಗೂ ಯುವಜನ ಸೇವಾ ಇಲಾಖೆ ಸಿಬ್ಬಂದಿ ವಿಶೇಷ ಶ್ರಮ ವಹಿಸಿ ನೇಮಕಾತಿ ಪ್ರಕ್ರಿಯೆ ಸುಗಮವಾಗಿ ನಡೆಯಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾಡಳಿತದ ವತಿಯಿಂದ ಸೇನಾ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳಾದ ಮೇಜರ್‌ ಜನರಲ್‌ ಪಿ. ರಮೇಶ, ಮಂಗಳೂರು ಸೇನಾ ನೇಮಕಾತಿ ವಿಭಾಗದ ಕರ್ನಲ್‌ ಅನುಜ್‌ ಗುಪ್ತಾ, ಮೇಜರ್‌ ಅನಿಲ್‌ ಹಾಗೂ ಸೇನಾ ಸಿಬ್ಬಂದಿಗಳಿಗೆ ಯಾಲಕ್ಕಿ ಮಾಲೆ, ಶಾಲು ಸ್ಮರಣಿಕೆ ನೀಡಿ ಜಿಲ್ಲಾಧಿಕಾರಿಗಳು ಎಲ್ಲರನ್ನೂ ಗೌರವಿಸಿದರು.

Advertisement

ಇದೇ ಸಂದರ್ಭದಲ್ಲಿ ಮೇಜರ್‌ ಜನರಲ್‌ ಪಿ. ರಮೇಶ ಅವರು ಅಗ್ನಿಪಥ್‌ ನೇಮಕಾತಿ ಯಶಸ್ವಿಗೆ ಶ್ರಮಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಗೌರವಿಸಿದರು.

ಮೇಜರ್‌ ಅನಿಲ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಕುಮಾರ ಎಂ. ಸಂತೋಷ, ಅಪರ ಜಿಲ್ಲಾಧಿಕಾರಿ ಡಾ| ಎನ್‌. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೆಗಡ್ಡಿ, ತಹಶೀಲ್ದಾರ್‌ ಗಿರೀಶ ಸ್ವಾದಿ ಹಾಗೂ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು, ಸೇನಾ ನೇಮಕಾತಿ ವಿಭಾಗದ ಅಧಿಕಾರಿಗಳು ಇದ್ದರು.

ರೆಡ್‌ಕ್ರಾಸ್‌ ಸಂಸ್ಥೆ, ಸೇವಾಭಾರತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಅಗ್ನಿವೀರ ಆಕಾಂಕ್ಷಿ ಅಭ್ಯರ್ಥಿಗಳಿಗೆ ಉಚಿತ ಉಪಹಾರ ಹಾಗೂ ಊಟ ನೀಡಿದ್ದಾರೆ. ನಗರದ ಸಮುದಾಯ ಭವನ, ಕಲ್ಯಾಣ ಮಂಟಪದ ಮಾಲೀಕರು ಉಚಿತವಾಗಿ ವಸತಿ ಸೇವೆ ನೀಡಿದ್ದಾರೆ. ಎಲ್ಲರಿಗೂ ಅಭಿನಂದಿಸುತ್ತೇನೆ. ಸಹಕಾರ ನೀಡಿದ ಎಲ್ಲರಿಗೂ ಜಿಲ್ಲಾಡಳಿತದಿಂದ ಸೋಮವಾರ ಸಂಜೆ ಅಭಿನಂದನ ಪತ್ರ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು.  -ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next