ಬೆಂಗಳೂರು: ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 200 ದೈಹಿಕ ಶಿಕ್ಷಕರು ಹಾಗೂ 100 ವಿವಿಧ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಸೋಮವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಹೇಮಲತಾ ನಾಯಕ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಒಂದೂವರೆ ದಶಕದಿಂದ 2 ಸಾವಿರಕ್ಕೂ ಹೆಚ್ಚು ದೈಹಿಕ ಮತ್ತು ಚಿತ್ರಕಲಾ ಶಿಕ್ಷಕರ ಹುದ್ದೆಗಳ ಖಾಲಿ ಇವೆ. ಇದುವರೆಗೆ ಯಾವುದೇ ಶಿಕ್ಷಕರ ನೇಮಕಾತಿ ಆಗಿಲ್ಲ. ಒಟ್ಟು 2120 ದೈಹಿಕ ಶಿಕ್ಷಕರು ಗ್ರೇಡ್-2 ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆ ಕುರಿತು ಆರ್ಥಿಕ ಇಲಾಖೆಯ ಕಳುಹಿಸಲಾಗಿದ್ದು, ಒಪ್ಪಿಗೆ ಸೂಚಿಸಿದ ಬಳಿಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಸ್ತುತ 200 ಪ್ರೌಢ ಶಾಲಾ ದೈಹಿಕ ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಬೆನ್ನಲ್ಲೇ ನೂರು ವಿವಿಧ ಶಿಕ್ಷಕರ ನೇಮಕವನ್ನೂ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಅನುಮತಿ ಕೊಟ್ರೂ ಪ್ರಸ್ತಾವನೆ ಸಲ್ಲಿಸಿಲ್ಲ: ಬಿಜೆಪಿಯ ಎಸ್.ವಿ. ಸಂಕನೂರ ಪ್ರಶ್ನೆಗೆ ಉತ್ತರಿಸಿ ಸಚಿವರು, ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 2015ರವರೆಗೆ ಖಾಲಿ ಉಳಿದಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಹಣಕಾಸು ಇಲಾಖೆ ಅನುಮತಿ ಪಡೆದು ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು 455 ಹುದ್ದೆಗಳಿಗೆ ಪ್ರಸ್ತಾವನೆಯನ್ನೇ ಕಳುಹಿಸಲಿಲ್ಲ. 171 ಹುದ್ದೆಗಳ ಪ್ರಸ್ತಾವನೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ ನನೆಗುದಿಗೆ ಬಿದ್ದಿವೆ ಎಂದರು.
ಈ ವೇಳೆ ಮಧ್ಯಪ್ರವೇಶಿದ ಸದಸ್ಯ ಸಂಕನೂರ, ಸುಮಾರು 11,125 ಹುದ್ದೆಗಳು ಬಾಕಿ ಉಳಿದಿವೆ. ಹೊಸದಾಗಿ ನೀಡಲಾಗಿರುವ ಅಂಕಿ ಅಂಶಗಳ ಪ್ರಕಾರ 9158 ಹುದ್ದೆಗಳಲ್ಲಿ ಭರ್ತಿ ಮಾಡಿಕೊಳ್ಳಬೇಕಿದೆ. ಇಷ್ಟು ಹುದ್ದೆಗಳನ್ನು ಖಾಲಿ ಇಟ್ಟು ಹೇಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದನಿಗೂಡಿಸಿದ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ನೇಮಕಾತಿ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು, ಪರಿಷತ್ತಿನ ಸದಸ್ಯರನ್ನೊಳಗೊಂಡ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.