Advertisement

15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ: ಅಧಿಸೂಚನೆ

11:09 PM Jan 22, 2022 | Team Udayavani |

ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ (6ರಿಂದ 8ನೇ ತರಗತಿ) ಬೋಧನೆಗೆ 15 ಸಾವಿರ ಪದವೀಧರ ಶಿಕ್ಷಕರ (ಜಿಪಿಟಿ) ನೇಮಕಾತಿ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರಕಾರ ಕರಡು ಅಧಿಸೂಚನೆ ಪ್ರಕಟಿಸಿದೆ.

Advertisement

ಈ ಬಾರಿ ಎಂಜಿನಿಯರಿಂಗ್‌ ಶಿಕ್ಷಣ ಪಡೆದಿರುವವರಿಗೂ ಶಿಕ್ಷಕರಾಗುವ ಅವಕಾಶ ಕಲ್ಪಿಸಿದೆ. 45 ವರ್ಷಗಳ ವರೆಗಿನ ವಯೋಮಿತಿ ನೀಡಲಾಗಿದೆ. ಪದವಿಯಲ್ಲಿ ಶೇ.50ರಷ್ಟು ಅಂಕ ಮತ್ತು “ಬಿ.ಇಡಿ’ ವಿದ್ಯಾರ್ಹತೆ ಹೊಂದಿದವರನ್ನು ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವಿ ಮತ್ತು ಬಿ.ಇಡಿ.ಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಶೇ.50ರಷ್ಟು ಸ್ಪರ್ಧಾತ್ಮಕ ಪರೀಕ್ಷೆ ಅಂಕ, ಶೇ.20ರಷ್ಟು ಟಿಇಟಿ ಪರೀಕ್ಷೆ ಅಂಕ, ಶೇ.20ರಷ್ಟು ಪದವಿ ಪರೀಕ್ಷೆ ಅಂಕ ಹಾಗೂ ಶೇ.10ರಷ್ಟು ಬಿ.ಇಡಿ. ಶಿಕ್ಷಣದ ಅಂಕಗಳನ್ನು ಪರಿಗಣಿಸಲಾಗುತ್ತದೆ.

ಐಚ್ಛಿಕ ಭಾಷಾ ವಿಷಯ ಅಭ್ಯಾಸ ಕಡ್ಡಾಯ
ಭಾಷಾ ವಿಷಯಗಳಲ್ಲಿ ಹುದ್ದೆ ಬಯಸುವವರು ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಸಂಸ್ಕೃತ ಸಹಿತ ಇತರ ಭಾಷೆ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಾಸ ಮಾಡಿರಬೇಕು ಮತ್ತು ಈ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು.

ಇದನ್ನೂ ಓದಿ:ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ಎಂಜಿನಿಯರಿಂಗ್‌ ಪದವೀಧರರಿಗೂ ಅವಕಾಶ
ಇದೇ ಮೊದಲನೇ ಬಾರಿಗೆ ವಾಸ್ತುಶಿಲ್ಪ ವಿಷಯವನ್ನು ಹೊರತುಪಡಿಸಿ ಕನಿಷ್ಠ ಮೂರು ಅಥವಾ 4 ಸೆಮಿಸ್ಟರ್‌ಗಳಲ್ಲಿ ಗಣಿತ ಅಥವಾ ಅನ್ವಯಿಕ ಗಣಿತ ವಿಷಯವನ್ನು ಅಭ್ಯಾಸ ಮಾಡಿರುವ ಎಂಜಿನಿಯರಿಂಗ್‌ ಪದವೀಧರರನ್ನು ಗಣಿತ ವಿಷಯದ ಶಿಕ್ಷಕರ ಹುದ್ದೆಗೆ ಪರಿಗಣಿಸಲಾಗಿದೆ. ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರದ ಜತೆಗೆ, ರಸಾಯನಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌, ಸಂಖ್ಯಾಶಾಸ್ತ್ರ, ಭೂಗೋಳಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಾಸ ಮಾಡಿದವರು ಅರ್ಜಿ ಸಲ್ಲಿಸಬಹುದು.

Advertisement

ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವವರು ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಬಹುಮಹಡಿ ಕಟ್ಟಡ, ಡಾ| ಬಿ.ಆರ್‌.ಅಂಬೇಡ್ಕರ್‌ ವೀಥಿ, ಬೆಂಗಳೂರು-50001 ಇಲ್ಲಿಗೆ ಕಳುಹಿಸಬಹುದು ಎಂದು ಪ್ರಾಥಮಿಕ ಶಿಕ್ಷಣದ ಅಧೀನ ಕಾರ್ಯದರ್ಶಿ ಶಿವಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next