ಬೆಂಗಳೂರು: ಕೋವಿಡ್ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಕುಕ್ಕುಟೋದ್ಯಮ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಹಕ್ಕಿಜ್ವರ ಸೇರಿದಂತೆ ಅನೇಕ ಕಾರಣಗಳಿಂದಾಗಿ ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಕೋಳಿಗಳನ್ನು ನಾಶ ಮಾಡಲಾಗಿತ್ತು. ಇದರಿಂದ ಚಿಕನ್ ಕೊಳ್ಳುವವರೂ ಕಡಿಮೆಯಾಗಿದ್ದರು. ಈಗ ಕುಕ್ಕುಟೋದ್ಯಮ ಚೇತರಿಸಿಕೊಳ್ಳುತ್ತಿದೆ. ಕೋವಿಡ್ ಹೊಡೆತದ ಬಳಿಕ ಇದೀಗ ಪ್ರತಿದಿನ ಸುಮಾರು 6-5 ಲಕ್ಷ ಕೆ.ಜಿ. ಕೋಳಿಮಾಂಸ ಮಾರಾಟವಾಗುತ್ತಿದೆ ಎಂದು ಕರ್ನಾಟಕ ಸಹಕಾರಿ ಕುಕ್ಕುಟ ಮಹಾಮಂಡಳಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚೇತರಿಸಿಕೊಳ್ಳಲು 45 ದಿನಗಳು ಬೇಕು: ಕೋವಿಡ್ ಕೋಳಿ ಮಾಂಸದಿಂದ ಹರಡುತ್ತಿದೆ ಎಂಬ ವದಂತಿಗಳು ಕುಕ್ಕುಟೋದ್ಯಮಕ್ಕೆ ಆರ್ಥಿಕ ಹೊಡೆತಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿಯೇ ಕೋಳಿ ಸಾಕಾಣಿಕೆ ದಾರರು ಮತ್ತು ಉದ್ಯಮಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಈಗ ಸರ್ಕಾರ ಕೂಡ ಕೋಳಿ ಮಾಂಸ ಮಾರಾಟಕ್ಕೂ ಅವಕಾಶ ನೀಡಿದ್ದು, ಸುಮಾರು 45 ದಿನಗಳಲ್ಲಿ ಉದ್ಯಮ ಚೇತರಿಕೆ ಕಾಣಲಿದೆ ಎಂದು ಸಹಕಾರಿ ಕುಕ್ಕುಟ ಮಹಾಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೇಳಿಕೊಳ್ಳುವಷ್ಟು ವ್ಯಾಪಾರವಿಲ್ಲ: ಬೆಂಗಳೂರಿನಲ್ಲಿಯೇ ಹೋಟೆಲ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಪ್ರತಿ ನಿತ್ಯ 4 ಲಕ್ಷ ಕೆ.ಜಿ.ಮಾಂಸ ಮಾರಾಟವಾಗುತ್ತಿತ್ತು. ಕೋವಿಡ್ ಹಿನ್ನೆಲೆ ಹೋಟೆಲ್ ಸೇರಿದಂತೆ ಸಾರಿಗೆ ಸಂಪರ್ಕವೂ ಬಂದ್ ಆದ ಪರಿಣಾಮ ಉದ್ಯಮ ಕುಸಿದಿತ್ತು ಎನ್ನುತ್ತಾರೆ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು. ಕೊರೊನಾ ರಾಜ್ಯ ಬರುವ ಮುನ್ನ ಪ್ರತಿ ದಿನ ಸುಮಾರು 8-10 ಲಕ್ಷ ಕೋಳಿ ಮರಿಗಳ ಉತ್ಪಾದನೆ ಆಗುತ್ತಿತ್ತು. ಆದರೆ ಈಗ ಕೇವಲ 3-4 ಲಕ್ಷ ಕೋಳಿ ಮರಿಗಳ ಉತ್ಪಾದನೆ ಮಾಡಲಾಗುತ್ತಿದೆ ಎಂದರು.
ಹಳ್ಳಿಗಳಲ್ಲಿ ಹೆಚ್ಚು ಮಾರಾಟ
ಕೋವಿಡ್ ಹಿನ್ನೆಲೆ ಜನರು ಹಳ್ಳಿಗಳ ಕಡೆಗೆ ಮುಖ ಮಾಡಿದ್ದು, ಆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿಯೇ ಶೇ.30 ರಷ್ಟು ಕೋಳಿ ಖರೀದಿ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಪ್ರತಿ.ಕೆ.ಜಿ ಕೋಳಿ ಮಾಂಸ 150 ರಿಂದ 190 ರೂ.ವರೆಗೂ ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.