Advertisement

ಬೈಲೂರು ಮದಗ ಸ್ಥಳೀಯರಿಂದ ಪುನಶ್ಚೇತನ : 10 ಅಡಿ ನೀರು ಸಂಗ್ರಹ

11:16 PM Sep 23, 2019 | Sriram |

ಉಡುಪಿ: ಈ ಬಾರಿ ಬೇಸಗೆಯಲ್ಲಿ ನೀರಿನ ಸಮಸ್ಯೆಗೆ ಇಡೀ ನಗರವೇ ತತ್ತರಿಸಿ ಹೋಗಿದೆ. ಅನೇಕ ವರ್ಷದಿಂದ ಹೂಳು ತೆಗೆಯದೆ ಬತ್ತಿ ಹೋದ ನೀರಿನ ಮೂಲಗಳನ್ನು ಹುಡುಕಿ ತೆಗೆದು ಅಭಿವೃದ್ಧಿ ಮಾಡಲಾಗುತ್ತಿದೆ. ಅಂತಹ ಪ್ರಯತ್ನದ ಫ‌ಲವಾಗಿ ಬೈಲೂರು ಎನ್‌ಜಿಒ ಕಾಲೋನಿಯಲ್ಲಿ ಬತ್ತಿ ಹೋದ ಮದಗದಲ್ಲಿ ಇದೀಗ 10 ಅಡಿಯಷ್ಟು ನೀರು ಸಂಗ್ರಹವಾಗಿದೆ.

Advertisement

5 ದಶಕಗಳ ಇತಿಹಾಸ
ಬೈಲೂರು ಮದಗಕ್ಕೆ ಸುಮಾರು
5 ದಶಕಗಳ ಇತಿಹಾಸವಿದೆ. ಉಡುಪಿಯ ಹಿರಿಯ ವಕೀಲರಾಗಿದ್ದ ದಿ| ಬೈಲೂರು ವಾಸುದೇವ ರಾವ್‌ ಅವರ ಪುತ್ರ ರಮೇಶ್‌ ರಾವ್‌ ಅವರ ಒಡೆತನದ ಜಮೀನನ್ನು ಈ ಮದಗಕ್ಕಾಗಿ ಬಿಟ್ಟುಕೊಟ್ಟಿದ್ದಾರೆ. ಬೈಲೂರು ಎನ್‌ಜಿಒ ಕಾಲೊನಿ ಹಿಂಭಾಗದಲ್ಲಿ ಮದಗವಿದೆ. ಹಿಂದೆ ರೈತರು ನಾಟಿ ಮಾಡಿದ ಬಳಿಕ ದಣಿದ ಕೋಣಗಳಿಗೆ ವಿಶ್ರಾಂತಿಗಾಗಿ ಬೈಲೂರು ಮದಗಕ್ಕೆ ಬಿಡಲಾಗುತ್ತಿತ್ತು.

ಮದಗ ಕಸದ ಹೊಂಡವಾಗಿತ್ತು
ವರ್ಷ ಕಳೆದಂತೆ ಮದಗದಲ್ಲಿ ನೀರು ಮಾಯವಾಗಿ ಬಿದಿರು ಮುಳ್ಳು ಬೆಳೆದು, ಮಣ್ಣು ಹೂಳು ತುಂಬಿ ಮುಚ್ಚಿ ಹೋಗಿತ್ತು. ಹೊಂಡದಲ್ಲಿ ಕಸ, ತ್ಯಾಜ್ಯ ಇತ್ಯಾದಿಗಳನ್ನು ಎಸೆಯುತ್ತಿರುವುದರಿಂದ ನೀರಿನ ಮೂಲವಾದ ಮದಗ ಕಸದ ಕೊಂಪೆಯಾಗಿ ಮಾರ್ಪಾಡಾಗಿತ್ತು. ಎರಡು ವರ್ಷಗಳಿಗೊಮ್ಮೆ ಈ ಕಸದ ರಾಶಿ, ಒಣಗಿದ ಬಿದಿರಿಗೆ ಕಿಡಿಗೇಡಿಗಳು ಬೆಂಕಿ ಹಾಕುವುದರಿಂದ ಬೆಂಕಿ ಹೊತ್ತಿಕೊಳ್ಳುತ್ತಿತ್ತು.

ನೀರಿನಿಂದ ತುಂಬಿದ ಮದಗ
ಮಳೆಯ ನೀರು ನೇರವಾಗಿ ಬಂದು ಮದಗವನ್ನು ಸೇರುತ್ತಿರುವುದರಿಂದ ಮದಗದಲ್ಲಿ 10 ಅಡಿಗಳವರೆಗೆ ನೀರು ಸಂಗ್ರಹವಾಗಿದೆ. ಇದರಿಂದಾಗಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗದು ಎನ್ನುವ ಆತ್ಮವಿಶ್ವಾಸ ಸ್ಥಳೀಯರದ್ದು.ನಗರದಲ್ಲಿ ಇನ್ನು ಸಾಕಷ್ಟು ಮದಗಗಳಿವೆ. ಸ್ಥಳೀಯರು ಅದನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು. ಆ ಮೂಲಕ ನೀರಿನ ಮೂಲವನ್ನು ಸಂರಕ್ಷಿಸಬೇಕಾಗಿದೆ.

1 ಲ.ರೂ. ವೆಚ್ಚದಲ್ಲಿ ಪುನಶ್ಚೇತನ
ಮಾಲೀಕರ ಸಹಿತ ಸ್ಥಳೀಯ ಉತ್ಸಾಹಿಗಳು ಈ ಮದಗವನ್ನು ಜೂನ್‌ ತಿಂಗಳಿನಲ್ಲಿ ಪುನಶ್ಚೇತನಗೊಳಿಸಿದ್ದಾರೆ. ಜೂನ್‌ ತಿಂಗಳಿನಲ್ಲಿ ಸುಮಾರು 10-12 ದಿನಗಳ ಕಾಲ ಜೆಸಿಬಿ, ಟಿಪ್ಪರ್‌ ಲಾರಿ ಮೂಲಕ ಸ್ಥಳವನ್ನು ಸ್ವತ್ಛಗೊಳಿಸಿ 12 ಅಡಿ ಆಳದ ಮದಗವನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 1.ಲ. ರೂ. ವ್ಯಯಿಸಲಾಗಿದೆ. ಸ್ಥಳೀಯರು ಮತ್ತು ಇಲ್ಲಿನ ಅನಿವಾಸಿ ಭಾರತೀಯರು ದೇಣಿಗೆ ನೀಡಿದ್ದಾರೆ. ಬೈಲೂರು ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್‌ ಶೆಟ್ಟಿ, ದುರ್ಗಾ ಪ್ರಸಾದ್‌, ಸತೀಶ್‌ ರಾವ್‌ ಕತಾರ್‌, ಶ್ರೀನಿವಾಸ್‌ ಕೆ.ಸ್‌. ಮುಂಚೂಣಿಯಲ್ಲಿ ನಿಂತು ಮದಗ ನಿರ್ಮಿಸಿದ್ದಾರೆ ಎಂದು ಇಲ್ಲಿನ ವೆಂಕಟೇಶ ಪ್ರಭು ತಿಳಿಸಿದ್ದಾರೆ.

Advertisement

ಬೇಸಗೆಯಲ್ಲಿ ನೀರಿನ ಲಭ್ಯತೆ
3ದಶಕಗಳ ಹಿಂದೆ ಈ ಮದಗದಲ್ಲಿ ಬೇಸಗೆ ಕೊನೆಯವರೆಗೂ ನೀರಿನ ಲಭ್ಯತೆಯಿತ್ತು. ಸಮಯ ಕಳೆಯುತ್ತಿದ್ದಂತೆ ಮದಗ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಇದರಿಂದಾಗಿ ಈ ಭಾಗದ ಬಾವಿ, ಬೋರ್‌ವೆಲ್‌ ನೀರಿನ ಮಟ್ಟ ಕುಸಿದಿದೆ. ಈ ಬಾರಿ ಮದಗವನ್ನು ಅಭಿವೃದ್ಧಿ ಪಡಿಸಿರುವುದರಿಂದ ಬೇಸಗೆಯಲ್ಲಿ ಬಾವಿಗಳು ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಿದೆ.
-ಡಾ| ಕಿರಣ್‌ ಶೆಟ್ಟಿ,
ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next