Advertisement

ಗುಣಮುಖರಾದ ಸೋಂಕಿತರಿಗೆ ಸಸಿ ಕೊಟ್ಟು ಬೀಳ್ಕೊಟ್ಟ ಜಿಲ್ಲಾಧಿಕಾರಿ

02:41 PM Jun 12, 2021 | Team Udayavani |

ಬೆಳಗಾವಿ: ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆರೈಕೆ ಕೇಂದ್ರದಿಂದ ಮನೆಗೆ ಹೊರಟ ಜನರಿಗೆ ಸಸಿಗಳನ್ನು ನೀಡುವ ಮೂಲಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೀಳ್ಕೊಟ್ಟರು.

Advertisement

ಇಲ್ಲಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಕೋವಿಡ್ ಕೇಂದ್ರದಲ್ಲಿ ಹಲವು ದಿನಗಳಿಂದ ಆರೈಕೆ ಪಡೆಯುತ್ತಿದ್ದ ಏಳು ಜನರನ್ನು ಶನಿವಾರ  ಬೀಳ್ಕೊಡಲಾಯಿತು.

ಕೋವಿಡ್ ಸೋಂಕಿತರನ್ನು ಸರಕಾರದ ಮಾರ್ಗಸೂಚಿ ಪ್ರಕಾರ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಿ ಔಷಧೋಪಚಾರ ಹಾಗೂ ಊಟೋಪಹಾರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಈ ಕೇಂದ್ರದಲ್ಲಿ ಆರೈಕೆ ಪಡೆದುಕೊಂಡು ಸಂಪೂರ್ಣ ಗುಣಮುಖರಾದ ಏಳು ಜನರನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸ್ವತಃ ಹಾಜರಿದ್ದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಗುಣಮುಖರಾದ ಜನರಿಗೆ ಹೂವು ಮತ್ತಿತರ ಸಸಿಗಳನ್ನು ನೀಡುವ ಮೂಲಕ ಶುಭ ಕೋರಿ ಬೀಳ್ಕೊಟ್ಟರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಯಾ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ವಸತಿ ನಿಲಯಗಳಲ್ಲಿ ಸುಸಜ್ಜಿತ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಲಕ್ಷಣರಹಿತ ಸೋಂಕಿತರು ಇಂತಹ ಆರೈಕೆ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

Advertisement

ಸೂಕ್ತ ಆರೈಕೆ ಬಳಿಕ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳುತ್ತಿರುವವರು ಇನ್ನಷ್ಟು ದಿನಗಳ ಕಾಲ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉತ್ತಮ ಪೌಷ್ಟಿಕಾಹಾರ ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಎಂದು ಜಿಲ್ಲಾಧಿಕಾರಿ ಹಿರೇಮಠ ಸಲಹೆ ನೀಡಿದರು.

ನಗರ ಪೊಲೀಸ್ ಉಪ ಆಯುಕ್ತರಾದ ಡಾ.ವಿಕ್ರಮ್ ಆಮಟೆ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ‌.ಎಚ್., ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಬೆಳಗಾವಿ ನಗರದ 53 ಹಾಗೂ 54 ನೇ ವಾರ್ಡುಗಳಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮನೆಯಲ್ಲಿಯೇ ಪ್ರತ್ಯೇಕವಾಗಿರುವ ಕೋವಿಡ್ ಸೋಂಕಿತರನ್ನು ಭೇಟಿ ಮಾಡಿದರು.

ಸೋಂಕು ಹೆಚ್ಚಾಗಿರುವ ಕಂಗ್ರಾಳಿ ಬಿ.ಕೆ. ಹಾಗೂ ಹಿಂಡಲಗಾ ಪ್ರದೇಶದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು  ಸರಕಾರದ ಮಾರ್ಗಸೂಚಿ ಪ್ರಕಾರ ಸೀಲ್ ಡೌನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next