Advertisement

ಕೋಣಗಳ ಸಾಮರ್ಥ್ಯ ಶ್ರುತಪಡಿಸಿದ ಓಟಗಾರರ ದಾಖಲೆ !

10:11 AM Feb 22, 2020 | mahesh |

 ಕೋಣಗಳ ದೇಹ ರಚನೆ ಓಟಕ್ಕೆ ಪೂರಕವಲ್ಲ ಎಂಬುದು ಹುಸಿ
 ಕಂಬಳ ನಿಷೇಧ ಆಗ್ರಹದಲ್ಲಿ ಪ್ರಾಣಿ ದಯಾ ಸಂಘಟನೆಗಳ ವಾದ

Advertisement

ಮಂಗಳೂರು: ಕಂಬಳ ಓಟಗಾರರನ್ನು ಉಸೇನ್‌ ಬೋಲ್ಟ್ ಜತೆಗೆ ಹೋಲಿಸುವುದು ತಪ್ಪೋ ಸರಿಯೋ ಎಂಬುದಕ್ಕಿಂತಲೂ ಈ ವಿದ್ಯಮಾನವು ಕಂಬಳದ ಕೋಣಗಳ ದೇಹ ರಚನೆ ಓಟಕ್ಕೆ ಪೂರಕ ಎಂಬುದನ್ನು ಸಾಬೀತುಪಡಿಸಿದೆ. ಕಂಬಳ ನಿಷೇಧಿಸಿ ಎನ್ನು ತ್ತಿರುವವರು ಕೋರ್ಟಿನಲ್ಲಿ ಮಂಡಿಸಿ ರುವ 2 ಪ್ರಬಲ ಅಂಶಗಳೆಂದರೆ, ಕೋಣಗಳ ದೇಹ ರಚನೆ ಓಟಕ್ಕೆ ಪೂರಕವಲ್ಲ ಮತ್ತು ಹಿಂಸೆ ನೀಡಿ ಓಡಿಸಲಾಗುತ್ತಿದೆ ಎಂಬುದು. ಕಂಬಳ ಓಟಗಾರರಾದ ಶ್ರೀನಿವಾಸ ಗೌಡ ಮತ್ತು ನಿಶಾಂತ್‌ ಶೆಟ್ಟಿ ಅವರ ಸಾಧನೆ ಪ್ರಾಣಿ ದಯಾ ಸಂಘಟನೆಗಳ ವಾದವನ್ನು ಸುಳ್ಳಾಗಿಸಿದೆ.

ಕೋಣಗಳೇ ಹೀರೋಗಳು
ಕಂಬಳದಲ್ಲಿ ಕೋಣಗಳು ಹೀರೋಗಳು. ಓಟಗಾರ ಪೂರಕ. ಈ ಕೋಣಗಳು ಅತ್ಯಂತ ಸೂಕ್ಷ್ಮ ಮತಿಗಳಾಗಿದ್ದು, ಮಂಜೊಟ್ಟಿ ತಲುಪಿದಾಕ್ಷಣ ಓಟ ನಿಲ್ಲಿಸುತ್ತವೆ. ಓಡಿಸುತ್ತಿರುವವರ ಸೂಚನೆ ಗಳನ್ನು ಗಮನಿಸಿ ಅವುಗಳಿಗೆ ಹೊಂದಿಕೊಳ್ಳುತ್ತವೆ ಮತ್ತು ಮಂಜೊಟ್ಟಿಯಲ್ಲಿ ತಮ್ಮವರು ಕರೆಯುವ ಸ್ವರ ಮತ್ತು ಕಹಳೆಯ ಧ್ವನಿಯನ್ನು ಗ್ರಹಿಸಿ ವೇಗವನ್ನು ಹೆಚ್ಚಿಸುತ್ತವೆ. ಇದಕ್ಕೆ ಪೂರಕವಾಗಿ ಓಟಗಾರನೂ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಇದು ಸಾಧ್ಯವಾಗದೆ ಓಟಗಾರ ಕರೆಯಲ್ಲಿ ಬಿದ್ದ ಘಟನೆಗಳಿವೆ.

ಓಟಗಾರರ ಚಾಕಚಕ್ಯತೆ
ಕೋಣಗಳ ವೇಗವನ್ನು ಕಾಯ್ದುಕೊಳ್ಳುವ ಮತ್ತು ಕುಂಠಿತಗೊಂಡರೆ ಸ್ವರ ಮತ್ತು ಬೆತ್ತದ ಮೂಲಕ ಎಚ್ಚರಿಸುವ ಕಾರ್ಯವನ್ನು ಓಟಗಾರರು ಮಾಡುತ್ತಾರೆ. ಕೋಣಗಳು ಓಟಗಾರರಿಗಿಂತ ಮುಂಚಿತವಾಗಿ ಮಂಜೊಟ್ಟಿ (ಗುರಿ) ತಲುಪುತ್ತವೆ ಮತ್ತು ಆ ವೇಳೆ ಓಟಗಾರ 4ರಿಂದ 5 ಅಡಿ ಹಿಂದಿರುತ್ತಾರೆ ಎಂಬುದು ಗಮನಿಸಬೇಕಾದ ಅಂಶ. ಕೋಣಗಳ ವೇಗ ಕಂಬಳದಿಂದ ಕಂಬಳಕ್ಕೆ ಬದಲಾಗುತ್ತದೆ; ಓಟಗಾರರ ವೇಗವೂ ಬದಲಾಗುತ್ತದೆ. ಆದುದರಿಂದ ವೇಗವನ್ನು ಸಾರ್ವತ್ರಿಕವಾಗಿ ಲೆಕ್ಕ ಹಾಕಲಾಗದು ಎನ್ನುತ್ತಾರೆ ಕಂಬಳ ಪರಿಣತರು.

ವೇಗದ ಓಟಗಾರರು
ಈ ಸಾಲಿನ ಕಂಬಳದಲ್ಲಿ ವೇಗದ ಓಟಗಾರರ ಪೈಕಿ ಶ್ರೀನಿವಾಸ ಗೌಡ, ನಿಶಾಂತ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಹೊಕ್ಕಾಡಿಗೋಳಿ, ಪ್ರವೀಣ್‌ ಕೋಟ್ಯಾನ್‌ ಮತ್ತು ಆನಂದ ಅವರ ಹೆಸರು ಕೇಳಿಬರುತ್ತಿದೆ. ಶ್ರೀನಿವಾಸ ಗೌಡ ಮತ್ತು ನಿಶಾಂತ್‌ ಶೆಟ್ಟಿ ದಾಖಲೆ ಬರೆದಿದ್ದಾರೆ.

Advertisement

ಕಂಬಳ ಓಟಗಾರರ ಸಾಧನೆಯ ವ್ಯಾಪಕ ಪ್ರಚಾರವು ಕೋಣಗಳ ಓಟದ ಬಗ್ಗೆ ಮಂಡಿಸುತ್ತಾ ಬಂದಿರುವ ವಾದಗಳ ನಿಜಾಂಶವನ್ನು ಸಾಬೀತು ಪಡಿಸಿದೆ. ಕೋಣಗಳ ಓಟವೇ ಇಲ್ಲಿ ನಿರ್ಣಾಯಕ. ಇದು ಕಂಬಳದ ಕೋಣಗಳ ದೇಹ ರಚನೆ ಓಟಕ್ಕೆ ಪೂರಕವಾಗಿಲ್ಲ ಎಂಬ ವಾದಕ್ಕೆ ಸಮರ್ಥ ಉತ್ತರ ನೀಡಿದೆ.
– ಬಾರ್ಕೂರು ಶಾಂತಾರಾಮ ಶೆಟ್ಟಿ, ಕೋಣಗಳ ಯಜಮಾನರು, ಕಂಬಳ ಸಮಿತಿ ನಿಕಟಪೂರ್ವ ಅಧ್ಯಕ್ಷ

ಕಂಬಳದ ಒಟ್ಟು ಬೆಳವಣಿಗೆ ಮತ್ತು ತಪ್ಪು ಅಭಿಪ್ರಾಯಗಳನ್ನು ನಿವಾರಿಸಲು ಪ್ರಸ್ತುತ ಬೆಳವಣಿಗೆ ಸಹಕಾರಿ. ಪ್ರಸ್ತುತ ವೇಗದ ಒಟಗಾರರು ಎಂದು ಪರಿಗಣಿತರಾಗಿರುವ ಐವರ ಜತೆ ಶುಕ್ರವಾರ ಚರ್ಚೆ ನಡೆಸಲಿದ್ದೇನೆ. ಅವರು ರಾಷ್ಟ್ರ ಮಟ್ಟದ ತರಬೇತಿಗೆ ತೆರಳುವ ಮುನ್ನ ಪೂರ್ವ ತಯಾರಿ ಅಗತ್ಯವಿರುತ್ತದೆ. ಮೂಡುಬಿದಿರೆಯಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಇದ್ದು, ಅಲ್ಲಿ ಓಡಿ ಪೂರ್ವಭಾವಿ ತರಬೇತಿ ಪಡೆಯಬೇಕು. ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
– ಗುಣಪಾಲ ಕಡಂಬ, ಸಂಚಾಲಕರು, ಕಂಬಳ ಅಕಾಡೆಮಿ

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next