Advertisement

ಜುಲೈನಲ್ಲಿ ದಾಖಲೆ ತೆರಿಗೆ ಸಂಗ್ರಹ

12:28 PM Sep 06, 2018 | |

ಬೆಂಗಳೂರು: ಮೊದಲ ತ್ತೈಮಾಸಿಕದಲ್ಲಿ ಋಣಾತ್ಮಕವಾಗಿದ್ದ ರಾಜ್ಯದ ಆದಾಯ ಸಂಗ್ರಹ ಜುಲೈ ತಿಂಗಳಲ್ಲಿ ಭಾರೀ ಸುಧಾರಣೆ ಕಂಡಿದ್ದು, ಈ ಒಂದು ತಿಂಗಳಲ್ಲಿ 9621 ಕೋಟಿ ರೂ. ತೆರಿಗೆ ಸಂಗ್ರಹಿಸುವ ಮೂಲಕ ಇತ್ತೀಚಿನ ವರ್ಷದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.

Advertisement

ಮೊದಲ ತ್ತೈಮಾಸಿಕ ಜೂನ್‌ ಅಂತ್ಯಕ್ಕೆ ತೆರಿಗೆ ಬೆಳವಣಿಗೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. -4.9ರಷ್ಟಿದ್ದದ್ದು ಜುಲೈ ಅಂತ್ಯಕ್ಕೆ ಶೇ. 3.8ಕ್ಕೆ ತಲುಪಿದೆ. ಆಗಸ್ಟ್‌ ತಿಂಗಳಲ್ಲೂ ತೆರಿಗೆ ಸಂಗ್ರಹದಲ್ಲಿ ಇದೇ ಬೆಳವಣಿಗೆ ಕಂಡುಬಂದಿದ್ದು, ಬೆಳವಣಿಗೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 8 ದಾಟುವ ನಿರೀಕ್ಷೆಯಿದೆ. ಖಚಿತ ಅಂಕಿ ಅಂಶಗಳು ಇನ್ನಷ್ಟೇ ಲಭ್ಯವಾಗ ಬೇಕಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

ಜೂನ್‌ ಅಂತ್ಯಕ್ಕೆ ರಾಜ್ಯದ ಒಟ್ಟು ಸ್ವಂತ ತೆರಿಗೆ ಸಂಗ್ರಹ 21,481 ಕೋಟಿ ಇತ್ತು. ಜುಲೈ ಅಂತ್ಯಕ್ಕೆ 31,102 ಕೋಟಿ ರೂ. ಆಗಿದೆ. ಈ ಪೈಕಿ ವಾಣಿಜ್ಯ ತೆರಿಗೆ ಸಂಗ್ರಹವೇ ಜುಲೈ ತಿಂಗಳಲ್ಲಿ 6586 ಕೋಟಿ ರೂ. ಆಗಿದೆ. ಮೊದಲ ಮೂರು ತಿಂಗಳಲ್ಲಿ 12,676 ಕೋಟಿ ರೂ. ಸಂಗ್ರಹವಾಗಿದ್ದರೆ, ಜುಲೈ ಅಂತ್ಯಕ್ಕೆ ಇದು 19,262 ಕೋಟಿ ರೂ.ಗೆ ಏರಿದೆ. ಜೂನ್‌ ಅಂತ್ಯಕ್ಕೆ ವಾಣಿಜ್ಯ ತೆರಿಗೆ ಸಂಗ್ರಹದ ಬೆಳವಣಿಗೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ -12.5 ಇದ್ದದ್ದು ಈಗ -0.1ಕ್ಕೆ ಬಂದಿದೆ. ಆಗಸ್ಟ್‌ ಅಂತ್ಯಕ್ಕೆ ಬೆಳವಣಿಗೆ ಪ್ರಮಾಣ ಶೇ. 5 ದಾಟುವ ನಿರೀಕ್ಷೆ ಹೊಂದಲಾಗಿದೆ.

ಇದರ ಪರಿಣಾಮ ಆಯವ್ಯಯದ ಶೇಕಡಾವಾರು ತೆರಿಗೆ ಸಂಗ್ರಹದಲ್ಲೂ ಸುಧಾರಣೆ ಕಂಡುಬಂದಿದೆ. 2017-18ರ
ಜುಲೈ ಅಂತ್ಯಕ್ಕೆ ಸ್ವಂತ ತೆರಿಗೆ ಸಂಗ್ರಹ 29,971 ಕೋಟಿ ರೂ. (ಆಯವ್ಯಯದ ಶೇ. 33) ತೆರಿಗೆ ಸಂಗ್ರಹವಾಗಿದ್ದರೆ, 2018-19ನೇ ಸಾಲಿನ ಜುಲೈ ಅಂತ್ಯಕ್ಕೆ 31,102 ಕೋಟಿ ರೂ. (ಆಯವ್ಯಯದ ಶೇ. 32.5) ಸಂಗ್ರಹವಾಗುವಂತಾಗಿದೆ.

ತೆರಿಗೆಯೇತರ ರಾಜಸ್ವವೂ ಏರಿಕೆ: ತೆರಿಗೆ ಜತೆಗೆ ತೆರಿಗೆಯೇತರ ರಾಜಸ್ವ ಸಂಗ್ರಹದಲ್ಲೂ ಏರಿಕೆ ಕಂಡುಬಂದಿದೆ. ಜೂನ್‌ ಅಂತ್ಯಕ್ಕೆ 1137 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಬೆಳವಣಿಗೆ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. -8.2 ಇತ್ತು. ಜುಲೈ ಅಂತ್ಯಕ್ಕೆ 1625 ಕೋಟಿ ರೂ. ಸಂಗ್ರಹವಾಗಿದ್ದು, ಬೆಳವಣಿಗೆ ಪ್ರಮಾಣ ಶೇ. -2.3ಕ್ಕೆ ಬಂದಿದೆ. ಇದೂ ಕೂಡ ರಾಜಸ್ವ ಸಂಗ್ರಹದಲ್ಲಿ ಸುಧಾರಣೆಯಾಗುತ್ತಿರುವುದರ ದ್ಯೋತಕ ಎನ್ನುತ್ತಾರೆ ಹಣಕಾಸು ಇಲಾಖೆ ಅಧಿಕಾರಿಗಳು.

Advertisement

ಕೇಂದ್ರದ ತೆರಿಗೆ ಪಾಲು: ಈ ಮಧ್ಯೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲು ಮತ್ತು ಸಹಾಯಧನ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. 2017-18ನೇ ಸಾಲಿನಲ್ಲಿ ಜುಲೈ ಅಂತ್ಯಕ್ಕೆ ಕೇಂದ್ರದ ತೆರಿಗೆ ಪಾಲು 9,116 (ಆಯವ್ಯಯದ ಶೇ. 28.6) ಮತ್ತು ಸಹಾಯಧನ 7,230 (ಆಯ ವ್ಯಯದ ಶೇ.45) ಬಂದಿದ್ದರೆ, ಈ ಬಾರಿ ತೆರಿಗೆ ಪಾಲು 9,942 ಕೋಟಿ ರೂ. (ಆಯ ವ್ಯಯದ ಶೇ.27.5) ಮತ್ತು ಸಹಾಯಧನ 7,151 ಕೋಟಿ ರೂ. (ಆಯವ್ಯಯದ ಶೇ. 27.3) ಮಾತ್ರ ಬಂದಿದೆ. 

ತೆರಿಗೆ ಸಂಗ್ರಹ ಏರಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳು, ಆರಂಭದ ಮೂರು ತಿಂಗಳು ವಿಧಾನಸಭೆ ಚುನಾವಣೆ, ಹೊಸ ಸರ್ಕಾರ ರಚನೆ ಕಾರಣದಿಂದ ತೆರಿಗೆ ಸಂಗ್ರಹ ಕುಸಿತವಾಗಿತ್ತು. ನಂತರದಲ್ಲಿ ಆಡಳಿತ ಯಂತ್ರ ಚುರುಕುಗೊಳ್ಳುವುದರ ಜತೆಗೆ ಆದಾಯ ಸಂಗ್ರಹ ಹೆಚ್ಚಳಕ್ಕೆ ಆದ್ಯತೆ ನೀಡಿದ ಪರಿಣಾಮ ಜುಲೈ ತಿಂಗಳಲ್ಲಿ ದಾಖಲೆಯ ತೆರಿಗೆ ಸಂಗ್ರಹವಾಗಿದೆ ಎಂದಿದ್ದಾರೆ.

 ಎಂ. ಪ್ರದೀಪ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next