ಬೆಂಗಳೂರು: ಆಸ್ತಿ ನೋಂದಣಿಗೆ ಶೇ.10 ರಿಯಾಯಿತಿ ನೀಡಿದ ಪರಿಣಾಮ ಸರ್ಕಾರದ ಆದಾಯ ಹೆಚ್ಚಿದ್ದು, ಕಳೆದ ಮೂರು ತಿಂಗಳಲ್ಲಿ 6700 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಅವಧಿಯಲ್ಲಿ 1900 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹವಾಗಿದ್ದು, ಇತಿಹಾಸದಲ್ಲೇ ಇದು ದಾಖಲೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರಿಯಾಯಿತಿ ನೀಡಿದ್ದರಿಂದ ಸರ್ಕಾರದ ಆದಾಯದಲ್ಲಿ ದಾಖಲೆ ಪ್ರಮಾಣದ ಏರಿಕೆಯಾಗಿದೆ. ಇದನ್ನು ಇನ್ನೂ 3 ತಿಂಗಳು ವಿಸ್ತರಿಸಿ ಸದ್ಯದಲ್ಲಿ ಆದೇಶ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ರೈತರು ಒತ್ತುವರಿ ಮಾಡಿರುವ ಒಂದು ಲಕ್ಷ ಎಕರೆಗೂ ಹೆಚ್ಚಿನ ಭೂಮಿಯನ್ನು ಅವರಿಗೇ ಗುತ್ತಿಗೆ ಆಧಾರದ ಮೇಲೆ ನೀಡುವ ಸಂಬಂಧ ತಿದ್ದುಪಡಿ ಮಸೂದೆ ಸಿದ್ಧಪಡಿಸಲಾಗಿದ್ದು ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.
ಇದೇ ರೀತಿ ಭೂ ಪರಿವರ್ತನೆ ಕಾರ್ಯವನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದ ತಿದ್ದುಪಡಿ ಮಸೂದೆಯನ್ನು ಸಿದ್ಧಪಡಿಸಲಾಗಿದ್ದು ಅದನ್ನೂ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.