ನವದೆಹಲಿ: ತೌಕ್ತೇ ಚಂಡಮಾರುತದ ಪರಿಣಾಮ ದೆಹಲಿಯ ಹವಾಮಾನ ಭಾರೀ ಬದಲಾವಣೆಗೆ ಸಾಕ್ಷಿಯಾಗಿದ್ದು, 1951ರ ನಂತರ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಇದರಿಂದಾಗಿ ದೆಹಲಿಯ ಬಹುತೇಕ ಭಾಗ ಜಲಾವೃತಗೊಂಡಿದ್ದು, ನವದೆಹಲಿಯ ತಾಪಮಾನ ಕೂಡಾ 23.8 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ ಎಂದು ವರದಿ ತಿಳಿಸಿದೆ.
ತೌಕ್ತೇ ಚಂಡಮಾರುತದ ಹಿನ್ನೆಲೆಯಲ್ಲಿ ಹರ್ಯಾಣ ಸರ್ಕಾರ ಕೂಡಾ ಭಾರೀ ಮಳೆ ಮತ್ತು ಅದರಿಂದಾಗುವ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಮಹತ್ವದ ಬೆಳವಣಿಗೆಗಳು:
1)ತೌಕ್ತೇ ಚಂಡಮಾರುತದಿಂದ ಉಂಟಾಗುವ ಭಾರೀ ಮಳೆಯಿಂದಾಗುವ ಪರಿಣಾಮವನ್ನು ಸೂಕ್ಷ್ಮವಾಗಿ ಅವಲೋಕಿಸುವಂತೆ ಹರ್ಯಾಣ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೇ ಪರಿಸ್ಥಿತಿಯನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ತಂಡ ಸಿದ್ಧವಾಗಿರಬೇಕು ಎಂದು ತಿಳಿಸಿದೆ.
2)ತೌಕ್ತೇ ಚಂಡಮಾರುತ ರಾಜ್ಯದ ಮೇಲೆ ಪರಿಣಾಮ ಬೀರಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ತಿಳಿಸಿದ್ದಾರೆ. ಮುಂದಿನ 48ಗಂಟೆಗಳ ಕಾಲದವರೆಗೆ ಜನರು ಮನೆಯಿಂದ ಅನಾವಶ್ಯಕವಾಗಿ ಹೊರ ಬರದಿರುವಂತೆ ಮನವಿ ಮಾಡಿಕೊಂಡಿದ್ದಾರೆ.
3)ದೆಹಲಿಯಲ್ಲಿ ಗುರುವಾರ 5.30ರವರೆಗೆ ದಾಖಲೆ ಪ್ರಮಾಣದ 118.8 ಮಿಲಿ ಮೀಟರ್ ಮಳೆಯಾಗಿದೆ. ಇದು ಕಳೆದ 24ಗಂಟೆಗಳಲ್ಲಿ 1951ರ ಬಳಿಕ ಸುರಿದ ದಾಖಲೆಯ ವರ್ಷಧಾರೆಯಾಗಿದೆ. ನಗರದ ಹಲವು ಪ್ರದೇಶ ಜಲಾವೃತಗೊಂಡಿದೆ. ಗುರುವಾರ ದೆಹಲಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.
4)ತೌಕ್ತೇ ಚಂಡಮಾರುತದಿಂದಾಗಿ ದೆಹಲಿ ಮಾತ್ರವಲ್ಲ ಉತ್ತರಪ್ರದೇಶ, ರಾಜಸ್ಥಾನದ ಉತ್ತರ ಭಾಗ, ಹಿಮಾಚಲ್ ಪ್ರದೇಶ್ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿಯೂ ದಾಖಲೆ ಪ್ರಮಾಣದ ಮಳೆಯಾಗಿದೆ.
5)ಪಶ್ಚಿಮ ರಾಜಸ್ಥಾನ ಭಾಗದಲ್ಲಿ ಕಡಿಮೆ ಒತ್ತಡದ ಹಿನ್ನೆಲೆಯಲ್ಲಿ ತೌಕ್ತೇ ಚಂಡಮಾರುತ ಕ್ಷೀಣವಾಗಿದ್ದು, ಇದು ಮಧ್ಯಪ್ರದೇಶ ಕರಾವಳಿ ಪ್ರದೇಶ ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
6)ಗುಜರಾತ್ ಕರಾವಳಿ ಪ್ರದೇಶದಲ್ಲಿ ಸೋಮವಾರ ರಾತ್ರಿ ತೌಕ್ತೇ ಚಂಡಮಾರುತ ಅಪ್ಪಳಿಸಿದ ಪರಿಣಾಮ ರಾಜ್ಯದಲ್ಲಿ 45 ಮಂದಿ ಸಾವನ್ನಪ್ಪಿದ್ದರು. ಚಂಡಮಾರುತದಿಂದ ಸಾವನ್ನಪ್ಪಿರುವವರ ಕುಟುಂಬಗಳಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಗುಜರಾತ್ ಸರ್ಕಾರ ಘೋಷಿಸಿದೆ.
7) ತೌಕ್ತೇ ಚಂಡಮಾರುತದಿಂದ ಹಾನಿ ಸಂಭವಿಸಿದ ಪ್ರದೇಶಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿದರು. ಅಷ್ಟೇ ಅಲ್ಲದೇ ತುರ್ತು ಪರಿಹಾರ ಚಟುವಟಿಕೆಗಾಗಿ ಒಂದು ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಅಂಕಿತ ಹಾಕಿದ್ದರು.
8)ಗೋವಾದಲ್ಲಿಯೂ ತೌಕ್ತೇ ಚಂಡಮಾರುತದಿಂದ ಇಬ್ಬರು ಸಾವನ್ನಪ್ಪಿದ್ದರು. ಮೃತ ಕುಟುಂಬದ ಸದಸ್ಯರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಗೋವಾ ಸರ್ಕಾರ ಘೋಷಿಸಿದೆ.
9)ರಾಜಸ್ಥಾನದಲ್ಲಿ ತೌಕ್ತೇ ಚಂಡಮಾರುತದ ಪರಿಣಾಮ ಸುರಿದ ಭಾರೀ ಮಳೆ ಮತ್ತು ಗಾಳಿಯಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿತ್ತು. ಮಂಗಳವಾರ ರಾತ್ರಿ ತೌಕ್ತೇ ಚಂಡಮಾರುತ ರಾಜಸ್ಥಾನ್ ಕರಾವಳಿ ಪ್ರದೇಶ ತಲುಪಿತ್ತು. ಇದರಿಂದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಹಾನಿ ಸಂಭವಿಸಿತ್ತು.
10)ತೌಕ್ತೇ ಚಂಡಮಾರುತದಿಂದಾಗಿ ಮುಂಬಯಿಯಲ್ಲಿ ಧಾರಾಕಾರ ವರ್ಷಧಾರೆಯಾಗಿದ್ದು, ಭಾರೀ ಗಾಳಿಯಿಂದಾಗಿ ಸುಮಾರು 813 ಮರಗಳು ಉರುಳಿ ಬಿದ್ದಿದ್ದವು. ಮುಂಬಯಿ ಕರಾವಳಿ ಪ್ರದೇಶದಲ್ಲಿ ತೌಕ್ತೇ ಚಂಡಮಾರುತ ತೀವ್ರವಾಗಿ ಹಾದುಹೋಗಿತ್ತು.