Advertisement

Record; ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆ: 25 ದಿನಗಳಲ್ಲಿ 3.13 ಕೋಟಿ!

09:44 AM Mar 27, 2024 | Team Udayavani |

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ದೇವಾಲಯದ ಹುಂಡಿಗಳಲ್ಲಿ ಕೇವಲ 25 ದಿನಗಳಲ್ಲಿ ದಾಖಲೆಯ 3.13 ಕೋಟಿ ರೂ. ಸಂಗ್ರಹವಾಗಿದೆ.

Advertisement

ಮಲೆ ಮಹದೇಶ್ವರ ಬೆಟ್ಟದ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಹುಂಡಿಗಳಿಂದ ಸಂಗ್ರಹವಾದ ಅತಿ ಹೆಚ್ಚಿನ ಮೊತ್ತ ಇದಾಗಿದೆ. ಇದುವರೆಗೆ ತಿಂಗಳೊಂದರಲ್ಲಿ 2.90 ಕೋಟಿ ರೂ. ಸಂಗ್ರಹವಾಗಿದ್ದು ದಾಖಲೆಯಾಗಿತ್ತು.ಮಾರ್ಚ್ 1 ರಿಂದ 25ನೇ ತಾರೀಕಿನವರೆಗೆ ಹುಂಡಿಗಳಲ್ಲಿ ಸಂಗ್ರಹವಾದ ಹಣದ ಎಣಿಕೆ ಮಂಗಳವಾರ ನಡೆಯಿತು. ಬೆಳಿಗ್ಗೆ 7ಕ್ಕೆ ಆರಂಭವಾದ ಹುಂಡಿಗಳ ಎಣಿಕೆ ಕಾರ್ಯ ತಡರಾತ್ರಿ 10.40ಕ್ಕೆ ಪೂರ್ಣಗೊಂಡಿತು. ಒಟ್ಟು 3,13,00,931 ರೂ. ಹುಂಡಿಗಳಲ್ಲಿ ಸಂಗ್ರಹವಾಗಿದೆ. 2,98,41,802 ರೂ. ನೋಟುಗಳ ಮೂಲಕ ಹಾಗೂ 14,59,129 ರೂ. ನಾಣ್ಯಗಳ ಮೂಲಕ ಸಂಗ್ರಹವಾಗಿದೆ. ಇದಲ್ಲದೇ 47 ಗ್ರಾಂ ಚಿನ್ನ, 2 ಕೆಜಿ 300 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 2 ಅಮೆರಿಕನ್ ಡಾಲರ್, 1 ಬಾಂಗ್ಲಾದೇಶದ ನೋಟು, ನೇಪಾಳ ದೇಶದ 2 ನೋಟು, ಮಲೇಶಿಯಾದ 1 ನೋಟುಗಳು ದೊರೆತಿವೆ.

ಮಾರ್ಚ್ ತಿಂಗಳಲ್ಲಿ ಮಹಾಶಿವರಾತ್ರಿ ಜಾತ್ರೆಯಿದ್ದುದ್ದರಿಂದ ಒಂದು ವಾರದ ಜಾತ್ರೆ ಅವಧಿಯಲ್ಲಿ 8 ಲಕ್ಷ ಭಕ್ತಾದಿಗಳು ಬೆಟ್ಟಕ್ಕೆ ಭೇಟಿ ನೀಡಿದ್ದರು. ಜಾತ್ರೆ ಮತ್ತು ಸ್ತ್ರೀ ಶಕ್ತಿ ಯೋಜನೆಯಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣ ಇವೆಲ್ಲವೂ ಸೇರಿ ತಿಂಗಳೊಂದರಲ್ಲಿ 3.13 ಕೋಟಿ ದಾಖಲೆಯ ಆದಾಯಕ್ಕೆ ಕಾರಣವಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ಉದಯವಾಣಿಗೆ ತಿಳಿಸಿದರು.

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾಹಿತಿ ಕೇಂದ್ರದ ಕಟ್ಟಡದಲ್ಲಿ ಎಣಿಕೆ ಕಾರ್ಯ ನಡೆಯಿತು. ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮೀಜಿ, ಪ್ರಾಧಿಕಾರದ ಉಪಕಾರ್ಯದರ್ಶಿ ಚಂದ್ರಶೇಖರ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ ನಾಗೇಶ್, ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ಶಾಖೆಯ ಶ್ವೇತಾ, ಪ್ರಾಧಿಕಾರದ ಸಿಬ್ಬಂದಿ ಎಣಿಕೆಯಲ್ಲಿ ಭಾಗವಹಿಸಿದ್ದರು.ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿ ಎಣಿಕೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next