ಹೊಸ ಆರ್ಥಿಕ ವರ್ಷ 2023-24ನೇ ಸಾಲಿನ ಮೊದಲ ತಿಂಗಳಲ್ಲಿ 1.87ಲಕ್ಷ ಕೋಟಿ ರೂ. ಜಿಎಸ್‌ಟಿ ವರಮಾನ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಆರು ವರ್ಷಗಳ ಹಿಂದೆ ಅಂದರೆ 2017ರ ಜುಲೈ 1ರಂದು ದೇಶಾದ್ಯಂತ ಜಿಎಸ್‌ಟಿ ಪದ್ಧತಿಯನ್ನು ಜಾರಿಗೊಳಿಸಿದ ಬಳಿಕ ಜಿಎಸ್‌ಟಿ ಸಂಗ್ರಹ ಪ್ರಮಾಣ ಸಾರ್ವಕಾಲಿಕ ಮಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ದೇಶದ ಒಟ್ಟಾರೆ ಆರ್ಥಿಕತೆಯ ದೃಷ್ಟಿಯಿಂದ ಆಶಾವಾದದ ಬೆಳವಣಿಗೆಯಾಗಿದ್ದು ಪ್ರಸಕ್ತ ಹಣಕಾಸು ವರ್ಷದಲ್ಲೂ ನಿರೀಕ್ಷೆಗೂ ಮೀರಿದ ಬೆಳವಣಿಗೆಯನ್ನು ದಾಖಲಿಸಿ ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಕಳೆದ ವರ್ಷದ ಎಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ಎಪ್ರಿಲ್‌ನಲ್ಲಿ ಶೇ. 12ರಷ್ಟು ಏರಿಕೆಯಾಗಿದೆ. ಇದೇ ವೇಳೆ ಕಳೆದ ಹಣಕಾಸು ವರ್ಷದಲ್ಲಿ 18.10 ಲ. ಕೋ. ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಿದೆ. ಇದರ ಹಿಂದಿನ ವರ್ಷಕ್ಕೆ ಹೋಲಿಸಿ ದರೆ ಒಟ್ಟಾರೆ ಜಿಎಸ್‌ಟಿ ವರಮಾನದಲ್ಲಿ ಶೇ. 22ರಷ್ಟು ಹೆಚ್ಚಳವಾಗಿದೆ. ಪ್ರತಿ ಯೊಂದೂ ವಲಯದಲ್ಲೂ ಜಿಎಸ್‌ಟಿ ಸಂಗ್ರಹ ಪ್ರಮಾಣ ಏರಿಕೆಯನ್ನು ಕಂಡಿ ರುವುದು ಹೊಸ ಭರವಸೆಯನ್ನು ಮೂಡಿಸಿದೆ. ಇದೇ ವೇಳೆ ಪ್ರಸಕ್ತ ವರ್ಷದ ಎ.20ರಂದು 9.8 ಲಕ್ಷ ವಹಿವಾಟುಗಳಿಂದ 68,228 ಕೋ. ರೂ. ಸಂಗ್ರಹವಾಗಿದ್ದು ಇದು ಒಂದೇ ದಿನದಲ್ಲಿ ಸಂಗ್ರಹವಾದ ಅತೀ ಗರಿಷ್ಠ ಜಿಎಸ್‌ಟಿ ವರಮಾನ.
ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಭಾರತೀಯ ಆರ್ಥಿಕತೆಯು ಪ್ರಗತಿಯ ಹಾದಿಯಲ್ಲಿ ದಾಪುಗಾಲಿಡುತ್ತಿರುವುದರ ಲಕ್ಷಣ ಇದಾಗಿದೆ ಎಂದು ಕೈಗಾರಿಕೆ, ವಾಣಿಜ್ಯ ಮತ್ತು ಆರ್ಥಿಕ ಕ್ಷೇತ್ರದ ತಜ್ಞರು ವಿಶ್ಲೇಷಿಸಿದ್ದಾರೆ. ಬೇಡಿಕೆಯಲ್ಲಿನ ಹೆಚ್ಚಳದ ಕಾರಣದಿಂದಾಗಿಯೇ ಎಲ್ಲ ವಲಯಗಳಲ್ಲಿಯೂ ಚೇತೋಹಾರಿ ಪ್ರಗತಿ ದಾಖಲಾಗಿದ್ದು ಸಹಜವಾಗಿಯೇ ವಹಿವಾಟು ಮತ್ತು ಆದಾಯದಲ್ಲಿ ಮುನ್ನಡೆ ಸಾಧಿಸುವಂತಾಗಿದೆ. ಜಿಎಸ್‌ಟಿ ಪದ್ಧತಿಯ ಬಗೆಗೆ ತೆರಿಗೆದಾರರಿಗೆ ವಿಶ್ವಾಸ ಮೂಡಿ ರುವುದನ್ನು ಇದು ಸಾಬೀತುಪಡಿಸಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಸರಕಾರ ಹಂತಹಂತವಾಗಿ ವ್ಯವಸ್ಥೆಯಲ್ಲಿ ಸುಧಾರಣ ಕ್ರಮಗಳನ್ನು ಕೈಗೊಂಡಿದ್ದು ಕೂಡ ದಾಖಲೆ ಪ್ರಮಾಣ ತೆರಿಗೆ ಸಂಗ್ರಹಕ್ಕೆ ಸಹಕಾರಿಯಾಗಿರುವುದು ಸ್ಪಷ್ಟ. ಮತ್ತೂಂದು ಧನಾತ್ಮಕ ಬೆಳವಣಿಗೆ ಎಂದರೆ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಜಿಎಸ್‌ಟಿ ಸಂಗ್ರಹ ಪ್ರಮಾಣ ಶೇ.11-13ರ ಬೆಳವಣಿಗೆಯನ್ನು ದಾಖಲಿಸಿರುವುದು. ಇದೇ ವೇಳೆ ಕರ್ನಾಟಕ ಜಿಎಸ್‌ಟಿ ವರಮಾನದಲ್ಲಿ 2ನೇ ಸ್ಥಾನದಲ್ಲಿದ್ದು ಕಳೆದ ತಿಂಗಳು 14,593 ಕೋ.ರೂ. ಸಂಗ್ರಹವಾಗಿರುವುದು ರಾಜ್ಯದ ಪಾಲಿಗೆ ಹೆಮ್ಮೆಯ ಸಂಗತಿ.
ಕೋವಿಡ್ ಹೊಡೆತದಿಂದಾಗಿ ಭಾರತದಲ್ಲಿಯೂ ಒಂದಿಷ್ಟು ಆರ್ಥಿಕ ತಲ್ಲಣ ಗಳು ಗೋಚರಿಸಿದ್ದವು. ಆದರೆ ಈ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಂತೆಯೇ ಉಕ್ರೇನ್‌ಮೇಲಿನ ರಷ್ಯಾ ಯುದ್ಧ ಜಗತ್ತಿನ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಪೂರೈಕೆ ಮತ್ತು ಬೇಡಿಕೆ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ. ಇದರಿಂದಾ ಗಿಯೇ ಜಗತ್ತಿನ ಬಹು ತೇಕ ರಾಷ್ಟ್ರಗಳು ಜಾಗತಿಕ ಆರ್ಥಿಕ ಹಿಂಜರಿತದ ಕರಿನೆರಳಲ್ಲಿ ಸಿಲುಕಿವೆ. ಆದರೆ ಈ ಎಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಪರಿ ಕಲ್ಪನೆಗಳಾದ ಆತ್ಮ ನಿರ್ಭರ ಭಾರತ, ಮೇಕ್ ಇನ್ ಇಂಡಿಯಾದಡಿ ದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳಲು ಕಾರಣವಾಯಿತು. ಇದರಿಂದಾಗಿ ಎಲ್ಲ ಕ್ಷೇತ್ರಗಳಲ್ಲೂ ಭಾರತ ಸಹಜ ಸ್ಥಿತಿಗೆ ಮರಳಿದ್ದಲ್ಲದೆ ದೇಶದ ಆರ್ಥಿಕತೆಯೂ ಹಳಿಗೆ ಮರಳಿತು. ಇದಕ್ಕೆ ಸಾಕ್ಷ್ಯ ಎಂಬಂತೆ ಈಗ ಜಿಎಸ್‌ಟಿ ಸಂಗ್ರಹ ದಾಖಲೆ ಪ್ರಮಾಣದಲ್ಲಾಗಿದ್ದು ಸದ್ಯೋಭವಿಷ್ಯದಲ್ಲಿ ಭಾರತ ವಿಶ್ವದ ಬಲಾಡ್ಯ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನ ಪಡೆಯುವುದನ್ನು ಖಾತರಿ ಪಡಿಸಿದೆ.