ಬೆಂಗಳೂರು: ಮಣಿಪಾಲ್ ಆಸ್ಪತ್ರೆಯ 70 ವೈದ್ಯರು ಆರೋಗ್ಯ ಸಂಬಂಧಿ 68 ವಿಷಯಗಳ ಬಗ್ಗೆ ಸತತ ಎಂಟು ಗಂಟೆ ಕಾಲ ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಲೈವ್ ಚಾಟ್ “ಏಷ್ಯಾ ಬುಕ್ ಆಫ್ ರೆಕಾರ್ಡ್’ ದಾಖಲೆಗೆ ಸೇರ್ಪಡೆಯಾಯಿತು.
ಆಸ್ಪತ್ರೆಯಲ್ಲಿ ಗುರುವಾರ “ಹೆಲ್ತ್ ವೈಬ್ಸ್’ ಹೆಸರಿನಡಿ ನಡೆದ ಫೇಸ್‌ಬುಕ್ ಲೈವ್ ಚಾಟಿಂಗ್‌ಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಎಂಟು ಗಂಟೆ ಕಾಲ 70 ವೈದ್ಯರು 68 ವಿಷಯಗಳ ಬಗ್ಗೆ ಸಂವಾದ ಪೂರ್ಣಗೊಳಿಸುತ್ತಿದ್ದಂತೆ ವಿನೂತನ ಪ್ರಯತ್ನ ದಾಖಲೆಗೆ ಸೇರ್ಪಡೆಯಾಯಿತು. ಆ ಮೂಲಕ ಆರೋಗ್ಯ ವಿಷಯ ಕುರಿತಂತೆ ನಡೆದ ಫೇಸ್‌ಬುಕ್‌ನ ಸುದೀರ್ಘ ಲೈವ್‌ಚಾಟ್ ಎಂಬ ಹೆಗ್ಗಳಿಕೆಗೆ ಸಂವಾದ ಸಾಕ್ಷಿಯಾಯಿತು.
ಸಂವಾದ ದಾಖಲೆಯ ಅವಧಿ ತಲುಪಿದ ನಂತರವೂ ಸಾಮಾಜಿಕ ಜಾಲತಾಣದಲ್ಲಿ ಆಸಕ್ತರು ಮಾತುಕತೆ ಮುಂದುವರಿಸಿದ್ದರಿಂದ ಇನ್ನಷ್ಟು ವೈದ್ಯರು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಅದರಂತೆ ಗುರುವಾರ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಒಟ್ಟು 102 ವೈದ್ಯರು 100 ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸಂವಾದಕ್ಕೆ ತೆರೆ ಎಳೆದರು.
ಹೃದ್ರೋಗತಜ್ಞರು, ಮಕ್ಕಳ ತಜ್ಞರು, ಮೂಳೆತಜ್ಞರು, ನರರೋಗ ತಜ್ಞರು, ಜೆನೆಟಿಕ್ಸ್, ದಂತ ವೈದ್ಯರು ಸೇರಿದಂತೆ ಹಲವು ತಜ್ಞರು ಸುದೀರ್ಘ ಲೈವ್ ಚಾಟ್‌ನಲ್ಲಿ ಪಾಲ್ಗೊಂಡಿದ್ದರು. ಫೇಸ್‌ಬುಕ್ ಲೈವ್ ಚಾಟ್‌ಅನ್ನು 10,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಮೂಡಿಬಂದವು. ಹಾಗೆಯೇ 3,500ಕ್ಕೂ ಹೆಚ್ಚು ಲೈಕ್‌ಗಳು ವ್ಯಕ್ತವಾಗಿವೆ. ಪ್ರಶ್ನೆಗಳು ಮೂಡುತ್ತಿದ್ದಂತೆ ತಜ್ಞರು ತಕ್ಷಣ ಪ್ರತಿಕ್ರಿಯೆ ನೀಡುತ್ತಾ ಸಂವಾದ ನಡೆಸುತ್ತಿದ್ದರು.
ಫೇಸ್‌ಬುಕ್ ಲೈವ್‌ಚಾಟ್‌ಗೆ ಗುರುವಾರ ಬೆಳಗ್ಗೆ ಚಾಲನೆ ನೀಡಿದ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕರೂ ಆದ ಸಿಇಒ ಡಾ.ಅಜಯ್ ಭಕ್ಷಿ, “100 ವೈದ್ಯರು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ನೂರಾರು ವಿಷಯಗಳ ಬಗ್ಗೆ ಫೇಸ್‌ಬುಕ್ ಲೈವ್ ಚಾಟ್‌ನಲ್ಲಿ ಸಂವಾದ ನಡೆಸಿದರೆ ಸಾವಿರಾರು ಮಂದಿ ಪ್ರಯೋಜನ ಪಡೆಯಲಿದ್ದಾರೆ. ಆ ರೀತಿಯ ಅವಕಾಶವನ್ನು ಈ ಸುಧಾರಿತ ಡಿಜಿಟಲ್ ವೇದಿಕೆಯು ಕಲ್ಪಿಸಿದೆ’ ಎಂದು ಹೇಳಿದರು.