Advertisement

Mysore Dasara: ಮೈಸೂರು ದಸರಾಗೆ ದಾಖಲೆ ಜನ!

04:03 PM Oct 11, 2024 | Team Udayavani |

ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ವನರಾತ್ರಿ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿನತ್ತ ಲಗ್ಗೆ ಇಟ್ಟಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಕಳೆದ 4 ವರ್ಷಗಳ ಬಳಿಕ ಮೈಸೂರಿಗೆ ಭಾರಿ ಪ್ರಮಾಣದ ಪ್ರವಾಸಿಗರು ಭೇಟಿ ನೀಡಿರುವುದು ದಾಖಲೆಯಾಗಿದೆ.

Advertisement

ಕಳೆದ ಬಾರಿ ಎಲ್ಲಾ ಕ್ಷೇತ್ರಗಳಿಂದ 5 ಲಕ್ಷ ಮಂದಿ ಮೈಸೂರಿಗೆ ಭೇಟಿ ನೀಡಿದ್ದರು. ಆದರೆ, ಈ ಬಾರಿ ಈಗಾಗಲೇ ಅ.3ರಿಂದ 10ರವರೆಗೆ 4 ಲಕ್ಷದಷ್ಟು ಮಂದಿ ಭೇಟಿ ನೀಡಿದ್ದು, ಅ.11, 12ರಂದು ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಈ ಎರಡು ದಿನದಂದೆ ಅಂದಾಜು 2 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಅದೇ ರೀತಿ, ಹೋಟೆಲ್‌ ಉದ್ಯಮದಿಂದ ಈ ಬಾರಿ 100 ಕೋಟಿ ರೂ. ಹೆಚ್ಚು ವಹಿವಾಟು ನಿರೀಕ್ಷಿಸಲಾಗಿದ್ದು, ಉಳಿದ ಕ್ಷೇತ್ರಗಳಾದ ಪ್ರವಾಸೋದ್ಯಮ, ಸಾರಿಗೆ ಮತ್ತು ಸಂಪರ್ಕ ಸೇರಿದಂತೆ ಇತರೆ ಕ್ಷೇತ್ರಗಳಿಂದ 120 ಕೋಟಿ ರೂ.ಗೂ ಹೆಚ್ಚು ವಹಿವಾಟು ನಿರೀಕ್ಷಿಸಲಾಗಿದೆ.

ಅ.3ರಂದು ಚಾಮುಂಡಿಬೆಟ್ಟದಲ್ಲಿ ದೇವಿಯ ಅಗ್ರಪೂಜೆಯೊಂದಿಗೆ ಆರಂಭವಾದ 10 ದಿನಗಳ ನಾಡಹಬ್ಬ ಮೈಸೂರು ದಸರಾ ಉತ್ಸವದ ಸಂಭ್ರಮವನ್ನು ಕಣ್ತುಂಬಿ ಕೊಳ್ಳಲು ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲದೇ ನೆರೆ ರಾಜ್ಯಗಳಿಂದಲೂ ಸಾವಿರಾರು ಮಂದಿ ಪ್ರವಾಸಿಗರು ನಿತ್ಯವೂ ಮೈಸೂರಿಗೆ ಭೇಟಿ ನೀಡುತ್ತಿದ್ದು, ನಗರದಲ್ಲಿರುವ ಪ್ರವಾಸಿ ತಾಣಗಳು ಜನಜಂಗುಳಿಯಿಂದ ತುಂಬಿ ಹೋಗಿದೆ.

ಇದು ಕಳೆದ 4 ವರ್ಷಗಳ ದಸರೆಗೆ ಹೋಲಿಸಿದರೆ ಗರಿಷ್ಠ ಪ್ರಮಾಣದಲ್ಲಿ ಪ್ರವಾಸಿಗರ ಭೇಟಿಯಾಗಿದೆ. 2020 ಮತ್ತು 21ರಲ್ಲಿ ಕೋವಿಡ್‌ಸಂಕಷ್ಟ ಎದುರಾದ ಹಿನ್ನೆಲೆ ದಸರಾ ಆಚರಣೆ ಅರಮನೆಗಷ್ಟೇ ಸೀಮಿತವಾಗಿತ್ತು. ಬಳಿಕ 2022ರಲ್ಲಿ ಪ್ರವಾಸೋದ್ಯಮ, ಹೋಟೆಲ್‌ ಉದ್ಯಮ ಆಗಷ್ಟೇ ಚೇರಿಸಿಕೊಂಡಿದ್ದರಿಂದ ಹೆಚ್ಚು ಮಂದಿ ಆಗಮಿಸಿರಲಿಲ್ಲ.

ಕಳೆದ ವರ್ಷ ಅಂದರೆ 2023ರಲ್ಲಿ ಮಳೆ ಕೊರತೆ ಕಾರ ಣವೊಡ್ಡಿ ರಾಜ್ಯ ಸರ್ಕಾರ ಸರಳವಾಗಿ ದಸರಾ ಆಚರಣೆ ಮಾಡಿತ್ತು. ಇದರಿಂದ ಹೊರಭಾಗದ ಪ್ರವಾಸಿಗರು ನಿರೀಕ್ಷಿತ ಪ್ರಮಾಣದಲ್ಲಿ ಬಂದಿರಲಿಲ್ಲ. ಆದರೆ, ಬಾರಿಯ ದಸರೆಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿರುವುದರಿಂದ ದೇಶದ ಮೂಲೆ ಮೂಲೆಗಳಿಂದಲೂ ಮೈಸೂರಿಗೆ ಆಗಮಿಸುತ್ತಿದ್ದಾರೆ.

Advertisement

ನಿತ್ಯವೂ 50ರಿಂದ 60 ಸಾವಿರ ಮಂದಿ ಭೇಟಿ: ದಸರಾ ಆರಂಭವಾದಾಗಿನಿಂದ ಸಾರಿಗೆ ಬಸ್‌, ರೈಲ್ವೆ ಹಾಗೂ ಖಾಸಗಿ ವಾಹನಗಳ ಮೂಲಕ ಮೈಸೂರಿಗೆ ನಿತ್ಯವೂ 50ರಿಂದ 60 ಸಾವಿರ ಮಂದಿ ಭೇಟಿ ನೀಡು ತ್ತಿದ್ದು, ದಸರಾ ಆಹಾರ ಮೇಳ, ಫ‌ಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ಯುವ ದಸರಾ, ಯುವ ಸಂಭ್ರಮದಂತ ಹತ್ತಾರು ಕಾರ್ಯಕ್ರಮ ವೀಕ್ಷಿಸಿದ್ದಾರೆ.

ಬೆಂಗಳೂರು, ಮಂಗಳೂರು, ಕೇರಳ, ಹಾಸನ ಹೆದ್ದಾರಿಗಳ ಮೂಲಕ ನಿತ್ಯವೂ 8 ಸಾವಿರ ಖಾಸಗಿ ವಾಹನ ಮೈಸೂರಿಗೆ ಆಗಮಿಸಿದ್ದರೆ, ರೈಲುಗಳಲ್ಲಿ ಎಂದಿಗಿಂತ ಶೇ.20 ಹೆಚ್ಚು ಪ್ರಯಾಣಿಕರು ಆಗಮಿಸುತ್ತಿದ್ದು, 45ರಿಂದ 50 ಸಾವಿರ ಮಂದಿ ಬಂದು ಹೋಗುತ್ತಿದ್ದಾರೆ. ಹಾಗೆಯೇ ಸಾರಿಗೆ ಬಸ್‌ಗಳ ಮೂಲಕ ರಾಜ್ಯದ ವಿವಿಧ ಮೂಲೆಗಳಿಂದ 15ರಿಂದ 20 ಸಾವಿರ ಮಂದಿ ಆಗಮಿಸುತ್ತಿದ್ದಾರೆ. ಅ.11 ಮತ್ತು 12 ರಂದು ನಡೆಯುವ ಆಯುಧಪೂಜೆ ಮತ್ತು ವಿಜಯದಶಮಿಗೆ ಈ ಪ್ರಮಾಣ ಶೇ.30ರಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.

200 ಕೋಟಿಗೂ ಅಧಿಕ ವಹಿವಾಟು: ನಗರದಲ್ಲಿರುವ ವಿವಿಧ ಪ್ರವಾಸಿ ತಾಣಗಳು, ಹೋಟೆಲ್‌ ಉದ್ಯಮ, ಸಾರಿಗೆ ಮತ್ತು ಸಂಪರ್ಕ ಹಾಗೂ ಇತರೆ ವಲಯದಿಂದ ಈ ಬಾರಿ 200 ಕೋಟಿ ರೂ.ಗೂ ಅಧಿಕ ವ್ಯಾಪಾರ ವಹಿ ವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಈವರೆಗಿನ ದಸರೆಗಳಿಗೆ ಇದು ದಾಖಲೆಯಾಗಿದೆ ಎಂದು ಹೇಳಲಾಗುತ್ತಿದೆ.

ಶೇ.98 ಹೋಟೆಲ್‌ ಭರ್ತಿ: ಹೊರ ಜಿಲ್ಲೆ, ಹೊರರಾಜ್ಯಗಳಿಂದ ಪ್ರವಾಸಿಗರು ಮೈಸೂರಿನತ್ತ ದಾಂಗುಡಿ ಇಡುತ್ತಿರುವುದರಿಂದಾಗಿ ಪಂಚತಾರಾ ಹೋಟೆಲ್‌ಗ‌ಳು ಸೇರಿದಂತೆ ಮೈಸೂರಿನ ವಸತಿಗೃಹಗಳಲ್ಲಿ ಕೊಠಡಿಗಳು ಶೇ.98 ಭರ್ತಿಯಾಗಿವೆ. ನವರಾತ್ರಿ ಆರಂಭದ ದಿನಗಳಿಂದ ಈತನಕ ತ್ರಿತಾರಾ, ಪಂಚತಾರಾ ಹೋಟೆಲ್‌ಗ‌ಳು, ಐಷಾರಾಮಿ ವಸತಿ ಗೃಹಗಳು, ಸಾಮಾನ್ಯ ಹೋಟೆಲ್‌ಗ‌ಳು ಸೇರಿ 10,500 ಕೊಠಡಿಗಳು ಲಭ್ಯವಿದ್ದು, ಈವರೆಗೆ 9500 ಕೊಠಡಿಗಳು ಬುಕ್‌ ಆಗಿವೆ. ಶುಕ್ರವಾರ ಭರ್ತಿಯಾಗುವ ಸಾಧ್ಯತೆಗಳಿವೆ. ದರದಷ್ಟೇ ಹೆಚ್ಚಿದ ಬೇಡಿಕೆ ಈ ಬಾರಿಯ ದಸರೆಗೆ ದಸರಾ ಗೋಲ್ಡ್‌ ಕಾರ್ಡ್‌, ಅರಮನೆಯಲ್ಲಿ ಜಂಬೂ ಸವಾರಿ ವೀಕ್ಷಣೆ, ಪಂಜಿನ ಕವಾಯತು ವೀಕ್ಷಣೆಗಿರುವ ಟಿಕೆಟ್‌ದರ ದುಪ್ಪಟ್ಟು ಹೆಚ್ಚಾಗಿದ್ದರೆ, ಹೋಟೆಲ್‌, ಸಾರಿಗೆ ಕ್ಷೇತ್ರದಲ್ಲೂ ದರ ಹೆಚ್ಚಾಗಿದೆ. ಹೀಗಿದ್ದರೂ ಪ್ರವಾಸಿಗರಿಂದ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಹಜವಾಗಿ ಆದಾಯವೂ ವೃದ್ಧಿಸಿದೆ.

ಪ್ರವಾಸಿಗರು ಹೆಚ್ಚಳ

 4 ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನ

 ಆಯುಧಪೂಜೆ, ವಿಜಯದಶಮಿಗೆ ಈ ಪ್ರಮಾಣ ಶೇ.30ರಷ್ಟು ಹೆಚ್ಚಾಗುವ ಸಾಧ್ಯತೆ

 ನಿತ್ಯವೂ ಮೈಸೂರಿಗೆ 45ರಿಂದ 50 ಸಾವಿರ ಮಂದಿ ಬಂದು ಹೋಗುತ್ತಿದ್ದಾರೆ

 ಹೊಟೇಲ್‌ಗ‌ಳು ಬುಕ್ಕಿಂಗ್‌, ಮೈಸೂರು ನಗರದಲ್ಲಿ ಪ್ರವಾಸಿಗರ ಕಲರವ

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next