Advertisement

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

02:54 PM Sep 19, 2024 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಬುಧವಾರದಿಂದ ಮರದ ಅಂಬಾರಿ ಹೊರುವ ತಾಲೀಮು ಆರಂಭವಾಗಿದ್ದು, ಮೊದಲ ದಿನವೇ ಕ್ಯಾಪ್ಟನ್‌ ಅಭಿಮನ್ಯು ರಾಜ ಬೀದಿ ಯಲ್ಲಿ ಗಾಂಭೀರ್ಯದಿಂದ ಮರದ ಅಂಬಾರಿ ಹೊತ್ತು ಬೀಗಿದ.

Advertisement

ಸಂಜೆ 5.50ಕ್ಕೆ ಅರಮನೆ ಅಂಗಳ ದಿಂದ ಮರದ ಅಂಬಾರಿ ಹೊತ್ತು ಸಖಿಯರಾದ ಹಿರಣ್ಯಾ ಮತ್ತು ಲಕ್ಷ್ಮೀಯೊಂದಿಗೆ ಬನ್ನಿಮಂಟಪದತ್ತ ಹೆಜ್ಜೆ ಹಾಕಿದ. ಈ ವೇಳೆ ಮಂಹೇಂದ್ರ, ಧನಂಜಯ, ಭೀಮ, ಪ್ರಶಾಂತ, ಗೋಪಿ, ಕಂಜನ್‌, ಸುಗ್ರೀವ, ರೋಹಿತ, ಏಕಲವ್ಯ, ದೊಡ್ಡಹರವೆ ಲಕ್ಷ್ಮೀ, ವರಲಕ್ಷ್ಮೀ ಆನೆಗಳು ಅಭಿಮನ್ಯುವನ್ನು ಅನುಸರಿಸುವ ಮೂಲಕ ಆತನಿಗೆ ಸಾಥ್‌ ನೀಡಿದವು. ರಾಜ ಬೀದಿಯಲ್ಲಿ ಅಭಿಮನ್ಯು ತನ್ನ ಪಡೆಯೊಂದಿಗೆ ಗಾಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿ ದರೆ, ದಾರಿಯುದ್ದಕ್ಕೂ ರಸ್ತೆ ಬದಿ ವ್ಯಾಪಾರಿಗಳು, ಸಾರ್ವಜನಿಕರು ಕೈಮುಗಿದು ನಮಸ್ಕರಿಸಿದರೆ, ಹೂ ಮತ್ತು ಹಣ್ಣು ವ್ಯಾಪಾರಿಗಳು ಆನೆಗಳಿಗೆ ನೀಡಿ ತಮ್ಮ ಭಕ್ತಿ ಮೆರೆದರು.

ವಿಶೇಷ ಪೂಜೆ: ಮರದ ಅಂಬಾರಿ ತಾಲೀಮು ಹಿನ್ನೆಲೆ ಸಂಜೆ 4ಕ್ಕೆ ಅರಮನೆ ಅಂಗಳದಲ್ಲಿನ ಕೋಡಿ ಸೋಮೇಶ್ವರ ದೇವಾಲಯ ಅಭಿಮನ್ಯುವಿನ ಹೆಗಲಿಗೆ ಗಾದಿ ಮತ್ತು ನಮª ಬಿಗಿದು, ರಾಜವಂಶಸ್ಥರು ವಾಸಿಸುವ ಖಾಸಗಿ ಅರಮನೆಯ ಮುಂಭಾಗಲ್ಲಿರುವ ಅಂಬಾರಿ ಕಟ್ಟುವ ಜಾಗಕ್ಕೆ ಕರೆತರಲಾಯಿತು. ಬಳಿಕ ಅರ್ಚಕ ಪ್ರಹ್ಲಾದ್‌ ರಾವ್‌ ಅವರು ಅಭಿ ಮನ್ಯು ನೇತೃತ್ವದ ಗಜಪಡೆ ಹಾಗೂ ಮರದ ಅಂಬಾರಿಗೆ ಪೂಜೆ ನೆರವೇರಿಸಿದರು. ಮೊದಲಿಗೆ ಎಲ್ಲಾ ಆನೆಗಳಿಗೂ ತೀರ್ಥ ಪ್ರೋಕ್ಷಣೆ ಮಾಡಿದ ಅವರು, ಹೂ ಮುಡಿಸಿ, ಅರಿಶಿನಿ, ಕುಂಕುಮ ಮತ್ತು ಗಂಧದ ಲೇಪ ನ ಹಚ್ಚಿ, 4.40ರಿಂದ 5ಗಂಟೆಯವರೆಗೆ ಪೂಜೆ ಸಲ್ಲಿಸಿ ದರು. ಬಳಿಕ ಎಲ್ಲಾ ಆನೆಗಳಿಗೂ ಪಂಚಫ‌ಲ, ಕಬ್ಬು, ಬೆಲ್ಲ ನೀಡಲಾಯಿತು.

ನಂತರ ಅಂಬಾರಿ ಕಟ್ಟುವ ಸ್ಟಾಂಡ್‌ ಬಳಿ ಬಂದ ಅಭಿಮನ್ಯವಿಗೆ 5.15ರಿಂದ 5.40ರವರೆಗೆ ಅಂಬಾರಿ ಕಟ್ಟುವ ಕಾರ್ಯ ನಡೆಯಿತು. ಮರದ ಅಂಬಾರಿಯನ್ನು ಹೊತ್ತ ಅಭಿಮನ್ಯು ರಾಜವಂಶಸ್ಥರ ಖಾಸಗಿ ಅಮರನೆ ಎದುರು ನಿಂತು ನಮಿಸಿ, ಬಳಿಕ ತಾಲೀಮು ಆರಂಭಿಸಿದ. ಹಿರಣ್ಯಾ ಮತ್ತು ಲಕ್ಷ್ಮೀಯೊಂದಿಗೆ 280 ಕೆ.ಜಿ. ತೂಕದ ಮರದ ಅಂಬಾರಿ ಹಾಗೂ ಗಾದಿ, ನಮª ಮತ್ತು ಮರಳಿನ ಮೂಟೆ ಸೇರಿ 750 ಕೆ.ಜಿ. ಭಾರ ಹೊತ್ತು ಅರಮನೆಯಿಂದ ಬನ್ನಿ ಮಂಟಪದವರೆಗೆ ಸಾಗಿದ. ಬಳಿಕ ಅಲ್ಲಿಂದ ವಾಪಾಸ್‌ ಅರಮನೆಗೆ ಯಾವ ಆಯಾಸವಿಲ್ಲದೇ ತಾಲೀಮು ನಡೆಸಿ ಯಶಸ್ವಿಯಾದ.

ಉಳಿದ ಆನೆಗಳಿಗೂ ತಾಲೀಮು: ಅಭಿಮನ್ಯು ನಂತರ ಮಹೇಂದ್ರ, ಭೀಮ, ಧನಂಜಯ, ಗೋಪಿ, ಸುಗ್ರೀವ ಆನೆಗಳಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈ ಹಿಂದೆ ಧನಂಜಯ, ಭೀಮ ಹಾಗೂ ಮಹೇಂದ್ರ ಆನೆಗಳು ಅರಮನೆಯಿಂದ ಬನ್ನಿಮಂಟ ಪದವರೆಗೆ ಯಶಸ್ವಿಯಾಗಿ ಮರದ ಅಂಬಾರಿ ಹೊತ್ತಿವೆ. ಮರದ ಅಂಬಾರಿ ಮತ್ತು ಗಜಪಡೆಯ ಪೂಜಾ ಕಾರ್ಯಕ್ರಮದಲ್ಲಿ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಎಸಿಪಿ ಚಂದ್ರಶೇಖರ್‌, ವೈದ್ಯ ಮುಜೀಬ್‌, ಆರ್‌ಎಫ್ಒ ಸಂತೋಷ್‌ ಸೇರಿದಂತೆ ಇತರರು ಇದ್ದರು.

Advertisement

ಗಜಪಡೆಗೆ ಮರದ ಅಂಬಾರಿ ಹೊರುವ ತಾಲೀಮನ್ನು ಆರಂಭಿಸಲಾಗಿದ್ದು, ಮೊದಲ ದಿನ ಅಭಿಮನ್ಯವಿಗೆ ನಡೆಸಲಾಗುತ್ತಿದೆ. 280 ಕೆ.ಜಿ. ತೂಕದ ಮರದ ಅಂಬಾರಿಯೊಂದಿಗೆ ಮರಳು ಮೂಟೆ, ಗಾದಿ ಮತ್ತು ನಮª ಸೇರಿ 750 ಕೆಜಿಯ ಭಾರ ಹೊರುವ ತಾಲೀಮು ಇದಾಗಿದೆ. ಹಂತ ಹಂತವಾಗಿ ಎಲ್ಲಾ ಆನೆಗಳಿಗೂ ಈ ತಾಲೀಮು ಇರಲಿದೆ. -ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್

Advertisement

Udayavani is now on Telegram. Click here to join our channel and stay updated with the latest news.