ಚಿತ್ರದುರ್ಗ: ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ಬರೋಬ್ಬರಿ 135 ಅಡಿ ಭರ್ತಿಯಾಗಿದೆ. 1933ರಲ್ಲಿ ಮಾತ್ರ ಜಲಾಶಯ 135.25 ಅಡಿ ನೀರು ತುಂಬಿತ್ತು. ನಂತರದ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.
ಇಷ್ಟು ದಿನಗಳ ಕಾಲ ಜನ ಕೋಡಿ ಬೀಳುವುದನ್ನು ಎದುರು ನೋಡುತ್ತಿದ್ದರು. 130 ಅಡಿಗೆ ನೀರು ಬರುತ್ತಿದ್ದಂತೆ ಕೋಡಿಯೂ ಬಿದ್ದಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನ ಜಾತ್ರೆಯಂತೆ ಆಗಮಿಸುತ್ತಿದ್ದಾರೆ. ಈಗ ಮತ್ತೂಂದು ಮೈಲುಗಲ್ಲು ಎಂಬಂತೆ ಜಲಾಶಯ ಮಟ್ಟ 135 ಅಡಿ ತಲುಪಿದೆ. ಇನ್ನೂ ಕೋಡಿ ಹಾಗೂ ತೂಬುಗಳಿಂದ ದೊಡ್ಡ ಪ್ರಮಾಣದಲ್ಲಿ ನೀರು ಹೊರಗೆ ಹೋಗಬೇಕಿದೆ. ಇದರಿಂದ ಸಾಕಷ್ಟು ಜನರಿಗೆ ಸಂಕಷ್ಟ ಬಂದೊದಗಿದೆ. ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮಿತಿ ಮೀರುತ್ತಿದ್ದು, ಇಷ್ಟು ದಿನ ಮಳೆಯಿಂದ ಸಂತಸಪಟ್ಟಿದ್ದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡುತ್ತಿದೆ. ಧೋ ಎಂದು ಸುರಿಯುತ್ತಿರುವ ಮಳೆರಾಯ ಇನ್ನೂ ಯಾವ ಅನಾಹುತ ಸೃಷ್ಟಿಸಲಿದ್ದಾನೋ ಎಂಬುದು ಗೊತ್ತಿಲ್ಲ.
ಮೈದುಂಬಿದ ವೇದಾವತಿ ನದಿ: ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಏಕೈಕ ನದಿ ವೇದಾವತಿ ಇದೇ ಮೊದಲ ಬಾರಿಗೆ ಮೈದುಂಬಿ ಹರಿಯುತ್ತಿದೆ. ಇಷ್ಟು ಪ್ರಮಾಣದಲ್ಲಿ ಹತ್ತಾರು ದಿನ ಈ ನದಿ ಹರಿದಿದ್ದನ್ನು ಈ ಭಾಗದ ಜನತೆ ನೋಡಿಯೇ ಇರಲಿಲ್ಲ. ಈಗ ಎಲ್ಲಾ ಚೆಕ್‌ಡ್ಯಾಂ, ಹಣೆಕಟ್ಟು, ಬ್ಯಾರೇಜ್‌ಗಳು ಭರ್ತಿಯಾಗಿ ಸುಮಾರು ಅರ್ಧ ಕಿಮೀ ಅಗಲವಾಗಿ ನದಿ ಹರಿಯುತ್ತಿದೆ. ಚಳ್ಳಕೆರೆ ತಾಲೂಕಿನ ಬೊಂಬೇರಹಳ್ಳಿ, ಜಾಜೂರು, ಹೊಸಹಳ್ಳಿ, ಕೂಡ್ಲಹಳ್ಳಿ ಮತ್ತಿತರೆಡೆ ಸುಮಾರು 20 ಅಡಿಗಿಂತಲೂ ಎತ್ತರದ ಬ್ಯಾರೇಜ್ ಮೇಲೆ ಗೋಡೆಯೇ ಕಾಣದಂತೆ ನೀರು ರಭಸವಾಗಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ. 90ರಷ್ಟು ಕೆರೆಗಳು ಕೋಡಿ ಬಿದ್ದಿವೆ.
ನದಿ ಪಾತ್ರ, ಹಿನ್ನೀರು ಭಾಗದ ಜನ ಹೈರಾಣ: ವೇದಾವತಿ ನದಿ ಪಾತ್ರ ಹಾಗೂ ವಾಣಿ ವಿಲಾಸ ಸಾಗರ ಹಿನ್ನೀರು ಭಾಗದ ರೈತರು ಪ್ರತಿ ಕ್ಷಣವೂ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ನೀರು ಏರುತ್ತಲೇ ಇರುವುದರಿಂದ ಯಾವಾಗ ಮನೆ ಬಾಗಿಲಿಗೆ ಬರುತ್ತದೋ ಎಂದು ಕಾಯುವಂತಾಗಿದೆ. ಈಗಾಗಲೇ ಈ ಭಾಗದ ಪೂಜಾರಹಟ್ಟಿ ಮುಳುಗಡೆಯಾಗುತ್ತಿದ್ದು, ಜಮೀನು, ತೋಟಗಳಿಗೆ ರೈತರು ಕಾಲಿಡದಂತೆ ನೀರು ನಿಂತಿದೆ.
ಈಗಾಗಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ಮಳೆ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆ ಹಾಗೂ ಊಟೋಪಚಾರಕ್ಕಾಗಿ 5 ಕಾಳಜಿ ಕೇಂದ್ರಗಳನ್ನು ತೆರೆದಿದೆ. ಹಿರಿಯೂರು ಪಟ್ಟಣದ ಬನಶಂಕರಿ ಕಲ್ಯಾಣಮಂಟಪ, ಲಕ್ಷ್ಮಮ್ಮ ಕಲ್ಯಾಣಮಂಟಪ, ಮಸ್ಕಲ್ ಸರ್ಕಾರಿ ಪ್ರೌಢಶಾಲೆಗಳಲ್ಲಿ ತಲಾ 100 ಜನ ಆಶ್ರಯ ಪಡೆದಿದ್ದಾರೆ. ಮೇಟಿಕುರ್ಕೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 200 ಜನ, ರಂಗನಾಥಪುರದ ಸರ್ಕಾರಿ ಆಸ್ಪತ್ರೆಯಲ್ಲಿ 100 ಜನ ಸೇರಿದಂತೆ ಒಟ್ಟು 600 ಜನ ಕಾಳಜಿ
ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.