ಬೆಂಗಳೂರು: ಬಿಜೆಪಿ ಎಸ್.ಸಿ. ಮೋರ್ಚಾದ ರಾಷ್ಟ್ರೀಯ ಘಟಕವನ್ನು ಪುನರ್ ರಚಿಸಲಾಗಿದ್ದು ರಾಜ್ಯದ ಐದು ಪ್ರಮುಖರಿಗೆ ಇದರಲ್ಲಿ ಅವಕಾಶ ಕಲ್ಪಸಿಲಾಗಿದೆ.
ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಲಾಲಾ ಸಿಂಹ ಆರ್ಯ ಅವರ ನೇತೃತ್ವದಲ್ಲಿ ಘಟಕವನ್ನು ಪುನರ್ ರಚಿಸಲಾಗಿದೆ. ಇವರು ಮುಂದಿನ ಮೂರು ವರ್ಷಗಳ ಕಾಲ ದೇಶಾದ್ಯಂತ ಪರಿಶಿಷ್ಟ ಸಮುದಾಯಗಳ ಸಂಘಟನೆಯ ದೃಷ್ಟಿಯಿಂದ ಕೆಲಸ ಮಾಡಲಿದ್ದಾರೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಅರಣ್ಯ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಅರವಿಂದ ಲಿಂಬಾವಳಿ, ಪಶು ಸಂಗೋಪನೆ ಇಲಾಖೆ ಸಚಿವರಾದ ಪ್ರಭು ಚೌಹಾಣ್ ಹಾಗೂ ಮೀನುಗಾರಿಕೆ ಇಲಾಖೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಸಚಿವರಾದ ಅಂಗಾರ ಇವರನ್ನು ನೇಮಿಸಲಾಗಿದೆ.
ಇನ್ನು ರಾಷ್ಟ್ರೀಯ ಕಾರ್ಯಕಾರಿಣಿ ಖಾಯಂ ಆಹ್ವಾನಿತರಾಗಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತರಾಗಿ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ವೀರಯ್ಯ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಕೋಲಾರದ ಶ್ರೀ ವೆಂಕಟೇಶ ಮೌರ್ಯ ಅವರನ್ನು ನೇಮಿಸಲಾಗಿದೆ ಎಂದು ಪರಿಶಿಷ್ಟ ಜಾತಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಲಾಲಾ ಸಿಂಹ ಆರ್ಯ ಅವರು ತಿಳಿಸಿದ್ದಾರೆ.
ಎಸ್.ಸಿ. ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಗೆ ನೇಮಕಗೊಂಡ ರಾಜ್ಯದ ಎಲ್ಲಾ ಪ್ರಮುಖರನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಅಭಿನಂದಿಸಿದ್ದಾರೆ.