ರಾಜ್ಯ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕದ ಬೆನ್ನಲ್ಲೇ ಕೋರ್ ಕಮಿಟಿ ಪರಿಷ್ಕರಣೆ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಒಮ್ಮಿಂದೊಮ್ಮೆಲೇ ಹಿರಿಯರನ್ನು ನೇಪಥ್ಯಕ್ಕೆ ಸರಿಸಿದರೆ ಪ್ರತಿಕೂಲ ಪರಿಣಾಮ ಉಂಟಾಗಬಹು ದೆಂಬ ಕಾರಣಕ್ಕೆ ಈ ವಿಚಾರಕ್ಕೆ ಚಾಲನೆ ಕೊಟ್ಟಿರಲಿಲ್ಲ. ಈಗ ರಾಜ್ಯ ಘಟಕದ ನೀತಿ-ನಿರೂಪಣೆ ವಿಭಾಗಕ್ಕೆ ಹೊಸ ನೀರು ಬರುವುದು ಅನಿವಾರ್ಯ ಎಂದು ವರಿಷ್ಠರು ನಿರ್ಧರಿಸಿದ್ದು ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕೋರ್ ಕಮಿಟಿ ಪರಿಷ್ಕರಣೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
ಸದ್ಯ ಇರುವ ಕೋರ್ ಕಮಿಟಿಯಲ್ಲಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್ ಮೊದಲಾದವರು ಇದ್ದಾರೆ. ಈಶ್ವರಪ್ಪ ಅವರನ್ನು ಉಚ್ಚಾಟನೆ ಮಾಡಿರುವುದರಿಂದ ಅವರ ಸದಸ್ಯತ್ವ ತನ್ನಿಂತಾನೇ ರದ್ದಾಗಿದೆ.
ಸಂಘಟನಾತ್ಮಕ ದೃಷ್ಟಿಯಿಂದ ಕೋರ್ ಕಮಿಟಿ ಸಭೆಗೆ ಬಿಜೆಪಿಯಲ್ಲಿ ವಿಶೇಷ ಗೌರವವಿದೆ. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆಯ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರಾಥಮಿಕವಾಗಿ ಇದೇ ವೇದಿಕೆಯಲ್ಲಿ ಚರ್ಚೆ ನಡೆಸಿ ವರಿಷ್ಠರಿಗೆ ಶಿಫಾರಸು ಕಳುಹಿಸಲಾಗುತ್ತದೆ. ಜತೆಗೆ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು, ಹೋರಾಟದ ಸ್ವರೂಪ ಮೊದಲಾದ ವುಗಳನ್ನು ಇಲ್ಲೇ ನಿರ್ಧರಿಸಬೇಕಾಗುತ್ತದೆ. ಹೀಗಾಗಿ ಕೋರ್ ಕಮಿಟಿ ಸದಸ್ಯರಾಗುವುದಕ್ಕೂ ಈಗ ಬಿಜೆಪಿಯಲ್ಲಿ ತೆರೆಮರೆಯ ಲಾಬಿ ಪ್ರಾರಂಭವಾಗಿದೆ.