ಜೇವರ್ಗಿ: ಎಲ್ಲ ರಂಗಗಳಲ್ಲಿ ಎಲ್ಲೆಡೆ ಆಂತರಿಕ ಸಂಘರ್ಷಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಮಾನವ ಧರ್ಮದ ಮೌಲ್ಯಗಳ ಸಂರಕ್ಷಣೆ ಮತ್ತು ಪರಿಪಾಲನೆಯಿಂದ ಶಾಂತಿ ಸಾಮರಸ್ಯ ನೆಲೆಗೊಳ್ಳಲು ಸಾಧ್ಯವಾಗುವುದು. ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಧರ್ಮವನ್ನು ಬಲಿ ಕೊಡಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಮಂದೇವಾಲ ಗ್ರಾಮದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಗೋಪುರ ಕಳಸಾರೋಹಣ ನಿಮಿತ್ತ ಆಯೋಜಿಸಲಾಗಿ ಅಡ್ಡ ಪಲ್ಲಕ್ಕಿ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಸತ್ಯ. ಆದರೆ ಮನುಷ್ಯನ ಬದುಕು ಒತ್ತಡದಿಂದಾಗಿ ಸುಖ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ತಾನು ಎಲ್ಲರಿಗಾಗಿ ಎನ್ನುವ ಮನೋಭಾವ ದೂರವಾಗಿ ಎಲ್ಲರೂ ತನಗಾಗಿ ಅನ್ನುವ ಸ್ವಾರ್ಥ ಬೆಳೆಯುತ್ತಿರುವ ಕಾರಣ ಅಶಾಂತಿ, ಅತೃಪ್ತಿ ಮತ್ತು ಪರಸ್ಪರ ಸಂಘರ್ಷ ಹೆಚ್ಚುತ್ತಿದೆ. ವಿಜ್ಞಾನ ಮತ್ತು ನಾಗರಿಕತೆ ಸಬಲ ಸಂಘರ್ಷದಲ್ಲಿ ಧರ್ಮ ನಾಶವಾಗದಿರಲಿ ಎಂಬ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ವಾಣಿ ಮರೆಯುವಂತಿಲ್ಲ. ಅಂತೆಯೇ ಶೀಲವಿಲ್ಲದ ಶಿಕ್ಷಣ ಭೀತಿಯಿಲ್ಲದ ಶಾಸನ ಇವು ಪ್ರಜಾತಂತ್ರಕ್ಕೆ ಮಾರಕಗಳು ಎಂಬ ಮಹಾತ್ಮಾ ಗಾಂಧಿಧೀಜಿ ಉಕ್ತಿ ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕು. ಸ್ವಧರ್ಮ ಪರಿಪಾಲನೆ ಪರಧರ್ಮ ಸಹಿಷ್ಣುತೆಯಿಂದ ಸಾಮರಸ್ಯ ಬೆಳೆಯಲು ಸಾಧ್ಯವಾಗುತ್ತದೆ. ಐದು ಸಾವಿರ ವರ್ಷಗಳ ಇತಿಹಾಸ ಪರಂಪರೆ ಹೊಂದಿದ ವೀರಶೈವ ಧರ್ಮ ವಿಶ್ವಧರ್ಮವಾಗಿದ್ದು, ವಿಶಾಲ ವ್ಯಾಪ್ತಿ ಹೊಂದಿದೆ.
ವೀರಶೈವ ಪಂಚಪೀಠಗಳು ಅಧರ್ಮದ ವಿರುದ್ಧ ನಿರಂತರ ದಂಡಯಾತ್ರೆ ನಡೆಸುತ್ತಲೇ ಬಂದಿವೆ. ಧರ್ಮ, ದೇವರು, ಜಾತಿ, ಪ್ರಾಂತೀಯ ಮನೋಭಾವನೆಯಿಂದ ಹೊರಬಂದು ಉತ್ಕೃಷ್ಟ ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಮಾಗಣಗೇರಿ ಹಿರೇಮಠದ ಡಾ| ವಿಶ್ವಾರಾಧ್ಯ ಶಿವಾಚಾರ್ಯರು ಸಮಾರಂಭ ಉದ್ಘಾಟಿಸಿದರು. ಕಡಕೋಳ
ಶ್ರೀ, ಮಳ್ಳಿ ಶ್ರೀ, ನೀಲೂರು ಶ್ರೀ, ಬಸವನಬಾಗೇವಾಡಿ ಶ್ರೀ, ಕುಕನೂರು ಶ್ರೀ ಇದ್ದರು. ನಂತರ ನಾಲ್ವತ್ವಾಡದ ಶ್ರೀ ವೀರೇಶ್ವರ ಪುರಾಣ ಪ್ರವಚನವನ್ನು ಐನಾಪುರದ ಮಲ್ಲಿಕಾರ್ಜುನ ಶಾಸ್ತ್ರಿಗಳು ನಡೆಸಿಕೊಟ್ಟರು.