ಬೆಂಗಳೂರು: ರಾಜ್ಯ ಹೈಕೋರ್ಟ್‌ನ ಐವರು ಹಿರಿಯ ವಕೀಲರನ್ನು ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಹಿರಿಯ ನ್ಯಾಯವಾದಿಗಳಾದ ದೀಕ್ಷಿತ್ ಕೃಷ್ಣ ಶ್ರೀಪಾದ್,ರಾಮಕೃಷ್ಣ ದೇವದಾಸ್, ಶಂಕರ್ ಗಣಪತಿ ಪಂಡಿತ್, ಸಿದ್ದಪ್ಪ ಸುನಿಲ್ ದತ್ ಯಾದವ್, ಭೋತನಹೊಸೂರ್ ಮಲ್ಲಿಕಾರ್ಜುನ ಶ್ಯಾಮ್ ಪ್ರಸಾದ್ ಅವರನ್ನು ಹೈಕೊರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಾಜ್ಯ ಹೈಕೋರ್ಟ್‌ಗೆ 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರು ಮಾಡಲಾಗಿದೆ. ಆದರೆ, ಪ್ರಸ್ತುತ ಕೇವಲ 25 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ 37 ನ್ಯಾಯಮೂರ್ತಿಗಳ ಕೊರತೆ ಇತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಕೇಂದ್ರ ಕಾನೂನು ಮಂತ್ರಿಗಳಿಗೂ ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಮನವಿ ಮಾಡಿತ್ತು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ರಾಜ್ಯ ಹೈಕೋರ್ಟ್‌ಗೆ 2015ರಿಂದ ನೇಮಕಗೊಂಡ ನ್ಯಾಯಮೂರ್ತಿಗಳ ಸಂಖ್ಯೆ ಕೇವಲ 12. ಅದರಲ್ಲಿ ವಕೀಲ ಸಮುದಾಯದಿಂದ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದದ್ದು ಐವರು ಮಾತ್ರ. ಅಧೀನ ನ್ಯಾಯಾಲಯದಿಂದ ಬಡ್ತಿ ಪಡೆದವರು 7 ಮಂದಿ.
ವಿಶೇಷವೆಂದರೆ 2015ರಿಂದ ಇಲ್ಲಿವರೆಗೆ ಹೈಕೋರ್ಟ್‌ನ 14 ನ್ಯಾಯಮೂರ್ತಿಗಳು ನಿವೃತ್ತಿ ಹೊಂದಿದ್ದಾರೆ. ಮತ್ತೂಬ್ಬರು ರಾಜೀನಾಮೆ ನೀಡಿದ್ದು, ಇನ್ನಿಬ್ಬರು ಹೊರ ರಾಜ್ಯಕ್ಕೆ ವರ್ಗಾವಣೆಯಾಗಿದ್ದಾರೆ. ಇನ್ನು ಮುಖ್ಯ ನ್ಯಾಯಮೂರ್ತಿಯೊಬ್ಬರು ಹೊರ ರಾಜ್ಯಕ್ಕೆ ವರ್ಗಗೊಂಡರೆ, ಮತ್ತೂಬ್ಬರು ಇತ್ತೀಚೆಗೆ ನಿವೃತ್ತರಾದರು.
ಉಳಿದಂತೆ ಹಾಲಿ 25 ನ್ಯಾಯಮೂರ್ತಿಗಳಲ್ಲಿ ಐವರು ಧಾರವಾಡ ಪೀಠ ಮತ್ತು ಮೂವರು ಕಲಬುರಗಿ ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಬೆಂಗಳೂರು ಪ್ರಧಾನ ಪೀಠದಲ್ಲಿ ಕೇವಲ 17 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ವೇಳೆ ಶಿಫಾರಸುಗೊಂಡ ವಕೀಲರು ನ್ಯಾಯಮೂರ್ತಿಗಳ ಹುದ್ದೆಗೆ ನೇಮಕಗೊಂಡಲ್ಲಿ ಹೆಚ್ಚುವರಿ ನ್ಯಾಯಮೂರ್ತಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಎರಡು ವರ್ಷದ ನ್ಯಾಯಪೀಠದ ಕರ್ತವ್ಯ ನಿರ್ವಹಣೆಯ ಆಧಾರದಲ್ಲಿ ಅವರ ನ್ಯಾಯಮೂರ್ತಿ ಹುದ್ದೆಯನ್ನು ಖಾಯಂಗೊಳಿಸಲಾಗುತ್ತದೆ.