Advertisement

ಕರಾವಳಿಗೆ ಕುಚ್ಚಲಕ್ಕಿ ಪೂರೈಕೆ ಮನವಿಗೆ ಸಿಕ್ಕಿಲ್ಲ ಮನ್ನಣೆ

12:20 AM Jun 20, 2020 | Sriram |

ಉಡುಪಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅವಿಭಜಿತ ದ.ಕ. ಜಿಲ್ಲೆಗೆ ಕೆಂಪು ಕುಚ್ಚಲಕ್ಕಿ ವಿತರಿಸಬೇಕು ಎನ್ನುವ ಹಲವು ವರ್ಷಗಳ ಬೇಡಿಕೆ ಕೇವಲ ಕಾಗದಕ್ಕೆ ಸೀಮಿತವಾಗಿ ಉಳಿದುಕೊಂಡಿದೆ.

Advertisement

ಹಲವು ವರ್ಷಗಳ ಬೇಡಿಕೆ?
ಅವಳಿ ಜಿಲ್ಲೆಯ ಆಹಾರ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಸರಕಾರಕ್ಕೆ ಅನೇಕ ವರ್ಷಗಳಿಂದ ಕುಚ್ಚಲಕ್ಕಿ ನೀಡುವಂತೆ ಮನವಿ ನೀಡುತ್ತಲೇ ಇದ್ದರು. ಆದರೆ ಇಲ್ಲಿಯವರೆಗೂ ಈ ಬೇಡಿಕೆ ಈಡೇರಿಲ್ಲ.ಶೇ. 80ರಷ್ಟು ಮಂದಿ ಅನ್ನಕ್ಕೆ ಕುಚ್ಚಲಕ್ಕಿ ಹೆಚ್ಚಾಗಿ ಬಳಸುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ ಬೆಳ್ತಿಗೆ ಹಾಗೂ ಬಿಳಿ ಕುಚ್ಚಲಕ್ಕಿ, ಗೋಧಿಯನ್ನು ವಿತರಿಸಲಾಗುತ್ತಿದೆ.

ಕೆಂಪಕ್ಕಿ ಕೊರತೆ
ಸರಕಾರ ಕುಚ್ಚಲಕ್ಕಿ ನೀಡಲು ಸಿದ್ಧವಿದೆ. ಆದರೆ ಅಗತ್ಯವಿರುವಷ್ಟು ಪ್ರಮಾಣದ ಕುಚ್ಚಲಕ್ಕಿ ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಬೆಳೆಸಲಾಗುತ್ತಿ ರುವ ಕುಚ್ಚಲಕ್ಕಿ ಇಲ್ಲಿನವರ ಬಳಕೆಗೆ ಸಾಕಾಗುತ್ತಿದೆ. ಪಡಿತರ ವಿತರಣೆಗೆ ಅಗತ್ಯವಿರುವಷ್ಟು ಪ್ರಮಾಣದ ಇದು ಉತ್ಪತ್ತಿಯಾಗುತ್ತಿಲ್ಲ. 5 ವರ್ಷಗಳ ಹಿಂದೊಮ್ಮೆ ಆಂಧ್ರದಿಂದ ಆಮದು ಮಾಡಿಕೊಂಡು ಕುಚ್ಚಲಕ್ಕಿಯನ್ನು ವಿತರಿಸಲಾಗಿತ್ತು. ಆದರೂ ರುಚಿಯಲ್ಲಿ ಬದಲಾವಣೆಯಾದ ಹಿನ್ನೆಲೆಯಲ್ಲಿ ಈ ಆಮದು ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು.

ಉಪಯೋಗಕ್ಕೆ ಬಾರದ ಅಕ್ಕಿ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅವಿಭಜಿತ ದ.ಕ. ಜಿಲ್ಲೆಗೆ ತಿಂಗಳಿಗೆ ಸಾವಿರಾರು ಕ್ವಿಂಟಾಲ್‌ ಅಕ್ಕಿ ಬಿಡುಗಡೆಯಾಗುತ್ತಿದೆ. ಅದರಲ್ಲಿ ಕರಾವಳಿಯ ಜನರು ಶೇ. 10ರಷ್ಟನ್ನು ಉಪಾಹಾರ, ಇತರ ಖಾದ್ಯ ಮಾಡಲು ಬಳಸುತ್ತಾರೆ. ಜಿಲ್ಲೆಯ ಶೇ.80ರಷ್ಟು ಜನರೂ ಆರೋಗ್ಯದ ದೃಷ್ಟಿಯಿಂದ ಹೆಚ್ಚಾಗಿ ಕುಚ್ಚಲಕ್ಕಿಗೆ ಅವಲಂಬಿತರು. ಬೆಳ್ತಿಗೆ ಅಕ್ಕಿ ಊಟ ಮಾಡಲು ಉಪಯೋಗಿಸದವರು ಮಾರಾಟ ಮಾಡುತ್ತಿದ್ದಾರೆ. ಅದರಿಂದ ಬಂದ ಹಣದಿಂದ ಕುಚ್ಚಲಕ್ಕಿಯನ್ನು ಖರೀದಿಸು ವುದೂ ಇದೆ.

ಉಚಿತ ಅಕ್ಕಿ ವಿತರಣೆ
ಬಡ ಕುಟುಂಬಗಳು ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನಿರ್ದಿಷ್ಟ ಬಿಪಿಎಲ್‌ ಕಾರ್ಡ್‌ದಾರಿಗೆ 3 ರೂ. ದರದಲ್ಲಿ ರಾಜ್ಯ ಸರಕಾರಕ್ಕೆ ನೀಡುತ್ತದೆ. ರಾಜ್ಯ ಸರಕಾರ ಈ 3 ರೂ.ಗಳನ್ನು ತಾನೇ ಭರಿಸಿ ಉಚಿತವಾಗಿ ವಿತರಿಸುತ್ತಿದೆ. ಬಾಕಿ ಉಳಿದ ಕಾರ್ಡ್‌ದಾರರಿಗೆ ರಾಜ್ಯ ಸರಕಾರ ಓಪನ್‌ ಬಿಡ್‌ ಮೂಲಕ ಅಕ್ಕಿ ಖರೀದಿಸಿ ವಿತರಿಸುತ್ತದೆ. ಒಂದು ಕೆ.ಜಿ. ಅಕ್ಕಿಗೆ ಸುಮಾರು 30 ರೂ. ವರೆಗೆ ವೆಚ್ಚ ತಗಲುತ್ತದೆ. ಉಡುಪಿ ಜಿಲ್ಲೆಯಲ್ಲಿ ಪಡಿತರ ಅಕ್ರಮ ವ್ಯವಹಾರದ ಎರಡು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ?

Advertisement

2.99 ಲಕ್ಷ ಕಾರ್ಡ್‌ದಾರರು
ಉಡುಪಿ ಜಿಲ್ಲೆಯ 2,99,779 ಕಾರ್ಡ್‌ದಾರಿಗೆ ಗರಿಬ್‌ ಕಲ್ಯಾಣ್‌ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜೂನ್‌ ತಿಂಗಳಿಗೆ 84,000 ಕ್ವಿಂಟಾಲ್‌ ಅಕ್ಕಿ, ಗೋಧಿ 3,289 ಕ್ವಿಂಟಾಲ್‌., ತೊಗರಿ 3,821.7 ಕ್ವಿಂಟಾಲ್‌ ಬೇಳೆ ಬಿಡುಗಡೆಯಾಗಿದ್ದು, ಕಳೆದ 6 ದಿನಗಳಲ್ಲಿ 13,525 ಕಾರ್ಡ್‌ದಾರರು ತಮ್ಮ ಪಾಲಿನ ರೇಷನ್‌ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 1,64,145 ಬಿಪಿಲ್‌ ಕಾರ್ಡ್‌,28,625 ಅಂತ್ಯೋದಯ ಕಾರ್ಡ್‌, 1,10,000 ಎಪಿಎಲ್‌ ಕಾರ್ಡ್‌ಗಳಿದ್ದು, ಈ ಬಾರಿ ಎಪಿಎಲ್‌ ಕಾರ್ಡ್‌ನಲ್ಲಿ ಪಡಿತರ ಪಡೆಯಲು ನೋಂದಾಯಿಸಿದ
ಕಾರ್ಡ್‌ದಾರರಿಗೆ ಅಕ್ಕಿ ಬಿಡುಗಡೆಯಾಗಿದೆ.

ಜೂ. 25ರ ಒಳಗೆ ಪಡಿತರ ಪಡೆಯಿರಿ
ಜಿಲ್ಲೆಯ ಪಡಿತರ ಚೀಟಿ ದಾರರು ಜೂ. 25ರ ಒಳಗೆ ಪಡಿತರ ಪಡೆದುಕೊಳ್ಳಬೇಕು. ಈ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮಗ್ರಿ ಪಡೆದುಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮನವಿ ಸಲ್ಲಿಸಲಾಗಿದೆ
ಕರಾವಳಿಗೆ ಬೆಳ್ತಿಗೆ ಬದಲಾಗಿ ಕೆಂಪಕ್ಕಿ ನೀಡುವಂತೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಹಿಂದೊಮ್ಮೆ ಆಂಧ್ರಪ್ರದೇಶದಿಂದ ಕೆಂಪಕ್ಕಿ ಆಮದು ಮಾಡಿಕೊಂಡು ವಿತ್ತರಿಸಲಾಗಿತ್ತು. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜೂನ್‌ ತಿಂಗಳ ಪಡಿತರ ವಿತರಣೆಯಾಗುತ್ತಿದೆ.
-ಗಜೇಂದ್ರ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಡಿಡಿ (ಪ್ರಭಾರ), ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next