ನವದೆಹಲಿ: ಪ್ರತಿ ತಿಂಗಳು ವಿದ್ಯುತ್ ಬಿಲ್ಲನ್ನು ನಿಗದಿತ ದಿನಾಂಕದೊಳಗೇ ಪಾವತಿ ಮಾಡಬೇಕು ಎಂಬ ಸಮಸ್ಯೆಗೆ ಇನ್ನು ಮುಕ್ತಿ ಸಿಗಲಿದೆ. 2019ರ ಏಪ್ರಿಲ್ 1ರಿಂದ ದೇಶಾದ್ಯಂತ ಸ್ಮಾರ್ಟ್ ಪ್ರೀಪೇಯ್ಡ ಮೀಟರುಗಳು ಚಾಲ್ತಿಗೆ ಬರಲಿದ್ದು, ಮೊಬೈಲ್ ಪ್ರೀಪೇಯ್ಡ ಸಿಮ್‌ಗೆ ರೀಚಾರ್ಜ್ ಮಾಡಿದಂತೆಯೇ ಮೊದಲೇ ಹಣ ತುಂಬುವ ಸೌಲಭ್ಯ ಜಾರಿಗೆ ಬರಲಿದೆ.
ಇದರಿಂದಾಗಿ ವಿದ್ಯುತ್ ಕಳ್ಳತನ ಕಡಿಮೆಯಾಗಲಿದ್ದು, ಬಡವರಿಗೆ ಒಂದೇ ಬಾರಿಗೆ ಬಿಲ್ ಪಾವತಿ ಹೊರೆಯೂ ಕಡಿಮೆಯಾಗಲಿದೆ ಎಂದು ವಿದ್ಯುತ್ ಖಾತೆ ಸಹಾಯಕ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ.
ಈ ಸ್ಮಾರ್ಟ್ ಮೀಟರುಗಳು ದಿನದ ನಿಗದಿತ ಸಮಯದಲ್ಲಿ ಮೀಟರ್ ರೀಡ್ ಮಾಡಿ ಅದರ ವಿವರವನ್ನು ವಿದ್ಯುತ್ ಪೂರೈಕೆದಾರ ಸಂಸ್ಥೆಗೆ ಕಳುಹಿಸುತ್ತವೆ. ಅಷ್ಟೇ ಅಲ್ಲ, ಎಷ್ಟು ಯೂನಿಟ್ ವಿದ್ಯುತ್ ಬಳಸಲಾಗಿದೆ ಎಂಬ ಮಾಹಿತಿ ರವಾನೆಯಾಗುತ್ತದೆ. ಇದರಿಂದ ನಾವು ಎಷ್ಟು ವಿದ್ಯುತ್ ಬಳಸಿದ್ದೇವೆ ಎಂಬ ಮಾಹಿತಿ ಗ್ರಾಹಕರಿಗೆ ಸಿಗಲಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ವಿದ್ಯುತ್ ವೆಚ್ಚ ಮಾಡಲೂ ನೆರವಾಗಲಿದೆ. ಆದರೆ ಸದ್ಯ ಸ್ಮಾರ್ಟ್ ಮೀಟರುಗಳ ಲಭ್ಯತೆ ಕಡಿಮೆ ಇದ್ದು, ಇವುಗಳ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವ ಸಿಂಗ್ ಹೇಳಿದ್ದಾರೆ.
ಮೀಟರ್ ರೀಡರ್‌ಗೆ ಕೆಲಸವಿರಲ್ಲ!: ದೇಶದಲ್ಲಿ ಕೋಟ್ಯಂತರ ವಿದ್ಯುತ್ ಸಂಪರ್ಕಗಳಿವೆ. ಇವುಗಳನ್ನು ರೀಡ್ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಸಾಕಷ್ಟು ವೆಚ್ಚವೂ ಆಗುತ್ತಿದೆ. ಸ್ಮಾರ್ಟ್ ಮೀಟರುಗಳಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಇಡೀ ಬಿಲ್ಲಿಂಗ್ ಅನ್ನು ಇದು ಸ್ವಯಂಚಾಲಿತ ವ್ಯವಸ್ಥೆಯನ್ನಾಗಿ ಪರಿವರ್ತಿಸುತ್ತಿದೆ. ಹೀಗಾಗಿ, ಮೀಟರ್ ರೀಡರ್‌ಗೆ ಕೆಲಸವಿರುವುದಿಲ್ಲ. ಇನ್ನು, ಇದರಿಂದ ವಿದ್ಯುತ್ ವಿತರಣೆ ಕಂಪನಿಗಳಿಗೂ ಅನುಕೂಲವಾಗಲಿದ್ದು, ಮೊದಲೇ ಪಾವತಿ ಲಭ್ಯವಾಗುತ್ತದೆ. ಇದರಿಂದ ಕಂಪನಿಗಳು ಹೆಚ್ಚು ಬಂಡವಾಳವನ್ನು ಪಡೆಯುತ್ತವೆ ಎಂದು ಸಿಂಗ್ ಹೇಳಿದ್ದಾರೆ.