ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಸೋಮವಾರ ಎಲ್ಲೆಡೆ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದ್ದು ದೇಶಾದ್ಯಂತ ಕ್ರೀಡಾಪಟುಗಳು, ರಾಜಕೀಯ ವ್ಯಕ್ತಿಗಳು ಹಾಕಿ ದಿಗ್ಗಜನನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.
ಹಾಕಿ ದಿಗ್ಗಜ ಧ್ಯಾನ್‌ಚಂದ್ ಅವರ ಜನ್ಮದಿನವಾದ ಆ. 29ರಂದು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು ಮತ್ತು ಅವರ ಜನ್ಮದಿನದಂದು ಮೇಜರ್‌ಧ್ಯಾನ್ ಚಂದ್ ಅವರಿಗೆ ಗೌರವಗಳು. ಇತ್ತೀಚಿನ ವರ್ಷಗಳು ಕ್ರೀಡೆಯ ಪಾಲಿಗೆ ಶ್ರೇಷ್ಠವಾಗಿದೆ. ಈ ಪ್ರವೃತ್ತಿ ಮುಂದುವರಿಯಲಿ. ಕ್ರೀಡೆಗಳು ಭಾರತದಾದ್ಯಂತ ಜನಪ್ರಿಯತೆಯನ್ನು ಗಳಿಸಲಿ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಿರಿಯ ಕ್ರೀಡಾ ಸಚಿವ ನಿಸಿತ್ ಪ್ರಮಾಣಿಕ್ ಅವರು ಭಾರತವನ್ನು ಕ್ರೀಡಾ ರಾಷ್ಟ್ರವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡುವುದಾಗಿ ವಾಗ್ಧಾನ ಮಾಡಿದರು. ಭಾರತದಲ್ಲಿ ಕ್ರೀಡೆಯ ಉನ್ನತಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು ಭಾರತವು ಕ್ರೀಡಾರಾಷ್ಟ್ರವಾಗಿ ರೂಪುಗೊಳ್ಳಲು ಎಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು.
ರಕ್ಷಣ ಸಚಿವ ರಾಜನಾಥ್ ಸಿಂಗ್, ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಮಾತ್ರವಲ್ಲದೇ ಕ್ರೀಡಾಪಟುಗಳಾದ ಸಚಿನ್ ತೆಂಡುಲ್ಕರ್, ಒಲಿಂಪಿಕ್ ಚಿನ್ನ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕೂಡ ಟ್ವೀಟ್ ಮೂಲಕ ರಾಷ್ಟ್ರೀಯ ಕ್ರೀಡಾ ದಿನದ ಬಗ್ಗೆ ತಮ್ಮ ಸಂದೇಶ ನೀಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ನ ವನಿತೆಯರ ಫೋರ್ ಲಾನ್ ಬೌಲ್ಸ್ ವಿಭಾಗದಲ್ಲಿ ಐತಿಹಾಸಿಕ ಚಿನ್ನ ಗೆದ್ದ ರೂಪಾರಾಣಿ ತಿರ್ಕೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ಲವ್ಲಿ ಚೌಬೆ ಅವರ ಸಾಧನೆಯನ್ನು ತೆಂಡುಲ್ಕರ್ ಮುಕ್ತಕಂಠದಿಂದ ಹೊಗಳಿದರು.
ರೂಪಾ, ಲವ್ಲಿ, ನಯನಮೋನಿ ಮತ್ತು ಪಿಂಕಿ ಅವರ ಕಥೆಯು ಎಲ್ಲರ ಪಾಲಿಗೆ ಭರವಸೆಯ ಕಥೆಯಾಗಿದೆ. ಅವರು ನಮಗೆ ಕಡಿಮೆ ತಿಳಿದಿರುವ ಕ್ರೀಡೆಯನ್ನು ಮರುಪರಿಚಯಿಸಿದ್ದು ಮಾತ್ರವಲ್ಲದೆ, ತಮಗಾಗಿ ಸರಿಯಾದ ಮನ್ನಣೆಯನ್ನೂ ಗಳಿಸಿದರು. ಈ ನಾಲ್ವರು ಈ ಹಿಂದೆ ಬೇರೆ ಬೇರೆ ಕ್ರೀಡಾಕ್ಷೇತ್ರದಲ್ಲಿದ್ದರು. ಅಲ್ಲಿ ಅವರು ಅಷ್ಟೊಂದು ಪ್ರಸಿದ್ದಿ ಪಡೆದಿರಲಿಲ್ಲ. ರೂಪಾ ರಾಣಿ ತಿರ್ಕೆ ಕಬಡ್ಡಿ, ನಯನಮೋನಿ ಸೈಕಿಯಾ ವೇಟ್‌ಲಿಫ್ಟರ್, ಪಿಂಕಿ ಸಿಂಗ್ ಕ್ರಿಕೆಟ್ ಮತ್ತು ಲವ್ಲಿ ಚೌಬೆ ಸ್ಪ್ರಿಂಟರ್ ಆಗಿದ್ದರು.