ಹೊಸದಿಲ್ಲಿ: ದೇಶದ ಖ್ಯಾತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಇರುವ ಪ್ರತಿಷ್ಠಿತ ಜಂಟಿ ಪ್ರವೇಶ ಪರೀಕ್ಷೆ (ಮೈನ್ಸ್)- ಜೆಇಇನಲ್ಲಿ ಶೇ.100 ಅಂಕ ಪಡೆದು ಉದಯ್‌ಪುರದ ಬಾಲಕನೊಬ್ಬ ನಿಬ್ಬೆರಗಾಗಿಸಿದ್ದಾನೆ.
ಕಲ್ಪಿತ್ ವೀರವಲ್ ಈ ಸಾಧನೆ ಮಾಡಿದ್ದು, ಆತನ ಹೆಸರು ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದೆ. 360ಕ್ಕೆ 360 ಅಂಕಗಳನ್ನು ಪಡೆದಿರುವ ಕಲ್ಪಿತ್ ಈಗ ಮುಂಬಯಿಯ ಐಐಟಿ ಯಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯುತ್ತಿದ್ದಾನೆ.
“ಉತ್ತಮ ಅಂಕದ ನಿರೀಕ್ಷೆ ಇತ್ತು. ಆದರೆ, ಗರಿಷ್ಠ ಅಂಕ ಪಡೆವ ನಿರೀಕ್ಷೆ ಇರಲಿಲ್ಲ. ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರುವ ಕನಸು ಎಂದೂ ಕಂಡಿರಲಿಲ್ಲ. ದಿನಕ್ಕೆ 15 ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಐಐಟಿ ಸೇರ್ಪಡೆಗೆ ಕೋಚಿಂಗ್ ಮೂಲಕ ನಿತ್ಯ ಸ್ಥಿರವಾದ ಓದಿನಿಂದ ಇದು ಸಾಧ್ಯವಾಗಿದೆ’ ಎಂದಿದ್ದಾನೆ ಕಲ್ಪಿತ್. ಕಲ್ಪಿತ್ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ 109ನೇ ರ್‍ಯಾಂಕ್ ಪಡೆದಿದ್ದಾನೆ.
ಜೆಇಇ ಪರೀಕ್ಷೆ ಸಂಪೂರ್ಣ ಆನ್‌ಲೈನ್: ಮುಂದಿನ ವರ್ಷದಿಂದ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ಸಂಪೂರ್ಣ ಆನ್‌ಲೈನ್ ಮಾದರಿಯಲ್ಲಿ ನಡೆವ ಸಾಧ್ಯತೆ ಇದೆ. ಅಡ್ವಾನ್ಸ್‌ಡ್ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಪಾಸಾಗಬೇಕಿದೆ. ಈ ಮೊದಲು ಅಡ್ವಾನ್ಸ್‌ಡ್ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಬರೆವ ಆಯ್ಕೆ ಇದ್ದು, ಮುಂದಿನ ಬಾರಿಯಿಂದ ಇದೇ ಮಾದರಿ ಜಾರಿಗೆ ಬರಲಿದೆ. ನಿರ್ವಹಣೆ ಮತ್ತು ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಸುಲಭವಾಗುವ ನಿಟ್ಟಿನಲ್ಲಿ ಜೆಇಇ ಪರೀಕ್ಷೆ ನಡೆಸುವ ಜಂಟಿ ಪರೀಕ್ಷಾ ಮಂಡಳಿ (ಜೆಎಬಿ) ಆನ್‌ಲೈನ್ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿದೆ.