Advertisement

ವಿಳಂಬ ತೋರಿದರೆ ಜನರ ಎದುರು ಛೀಮಾರಿ

08:55 PM Oct 18, 2019 | Lakshmi GovindaRaju |

ಪಿರಿಯಾಪಟ್ಟಣ: ಅಧಿಕಾರಿಗಳು ಜನರ ಕೆಲಸಗಳನ್ನು ಮಾಡಲು ವಿಳಂಬ ಧೋರಣೆ ತೋರಿದರೆ ಸಾರ್ವಜನಿಕರ ಎದುರು ಛೀಮಾರಿ ಹಾಕುತ್ತೇನೆ ಎಂದು ಶಾಸಕ ಕೆ. ಮಹದೇವ್‌ ಎಚ್ಚರಿಕೆ ನೀಡಿದರು.ತಾಲೂಕಿನ ಮಾಕೋಡು, ಕೆರೆಮೇಗಳಕೊಪ್ಪಲು, ಹಂಡಿತವಳ್ಳಿಯಲ್ಲಿ 2 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

Advertisement

ತಾವು ಶಾಸಕರಾಗಿ ಆಯ್ಕೆಯಾದ ನಂತರ ತಾಲೂಕಿನ ಸಾಕಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಿದ್ದು, ಅನೇಕ ಇಲಾಖೆಗಳಲ್ಲಿ ಅಧಿಕಾರಿಗಳು ಜನರ ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದಲ್ಲದೇ ಅನಗತ್ಯ ವಿಳಂಬ ಮಾಡುತ್ತಾ ಅವರನ್ನು ಅಲೆದಾಡಿಸುತ್ತಿದ್ದಾರೆ. ಇದು ಮುಂದುವರಿದರೆ ಅಂತಹ ಅಧಿಕಾರಿಗಳಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಛೀಮಾರಿ ಹಾಕಿ ಅಮಾನತು ಗೊಳಿಸುತ್ತೇನೆ ಎಂದು ಎಚ್ಚರಿಸಿದರು.

ಡಿಪೋ ವ್ಯವಸ್ಥಾಪಕರಿಗೆ ತರಾಟೆ: ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು, ಜನಸಾಮಾನ್ಯರು ದಿನನಿತ್ಯ ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ಬರುತ್ತಿದ್ದು ಅಂತವರಿಗೆ ಬಸ್‌ ಸಮಸ್ಯೆಯಾಗಬಾರದು ಎಂದು ಅನೇಕ ಬಾರಿ ಹೇಳಿದರೂ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್‌ ದರ್ಶನ್‌ ಕ್ರಮವಹಿಸದಿರುವುದಕ್ಕೆ ಶಾಸಕರು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಅನುಕೂಲಕ್ಕಾಗಿ ಕೆಲಸ ಮಾಡದಿದ್ದರೆ, ತಾಲೂಕಿನಿಂದ ತೊಲಗಿ. ಇದೇ ರೀತಿ ದೂರುಗಳು ಬಂದರೆ ನಿನ್ನನ್ನು ಅಮಾನತುಗೊಳಿಸಿ ಮನೆಗೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ತಾವು ಕಳೆದೆರಡು ಬಾರಿ ಚುನಾವಣೆಯಲ್ಲಿ ಪರಾಭವಗೊಳ್ಳದಿದ್ದರೆ ತಾಲೂಕಿನ ಹಲವು ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತಿತ್ತು. ಶಾಸಕನಾಗಿ ಆಯ್ಕೆಯಾದ ನಂತರ ಪ್ರತಿದಿನ ಸಾರ್ವಜನಿಕರು, ರೈತರ ಪರವಾಗಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಿಷ್ಠೆಯಿಂದ ಸ್ಪಂದಿಸುತ್ತಿದ್ದೇನೆ. ನಾನು ಪ್ರಥಮ ಬಾರಿಗೆ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ವಿದ್ಯುತ್‌, ಕುಡಿಯುವ ನೀರು, ಉತ್ತಮ ರಸ್ತೆ ಕಲ್ಪಿಸುವ ಸಂಬಂಧ ಅಧಿಕಾರಿಗಳಿಗೆ ಸೂಚಿಸಿ ಶೀಘ್ರ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ, ತಾಪಂ ಉಪಾಧ್ಯಕ್ಷೆ ಜಯಮ್ಮ, ಗ್ರಾಪಂ ಅಧ್ಯಕ್ಷೆ ಮುತ್ತಮ್ಮ, ಮಾಜಿ ಅಧ್ಯಕ್ಷೆ ದಾûಾಯಿಣಿ, ತಾಪಂ ಮಾಜಿ ಅಧ್ಯಕ್ಷ ಜವರಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ಅಧ್ಯಕ್ಷ ಜವರೇಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next