ಚಾಮರಾಜನಗರ: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟು 29 ಕೆರೆಗಳನ್ನು ಜಲಾಮೃತ ಯೋಜನೆಯಡಿ ಅಭಿವೃದ್ಧಿಪಡಿಸಲು ಒಟ್ಟು 5.73 ಕೋಟಿ ರೂ. ಗಳ ಕಾಮಗಾರಿಗಾಗಿ ಅನುಮೋದನೆ ದೊರೆತಿದೆ. ಪ್ರಸಕ್ತ 2019-20ನೇ ಸಾಲಿಗೆ ಜಲಾಮೃತ ಯೋಜನೆಯಡಿಯಲ್ಲಿ ಜಿಲ್ಲೆಯ ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ತಾಲೂಕಿನ ಒಟ್ಟು 29 ಕೆರೆಗಳ ಜೀರ್ಣೋದ್ಧಾರ ಕಾಮಗಾರಿಗಾಗಿ ಜಿಪಂ ವತಿಯಿಂದ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಈ ಮೊತ್ತವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಜಲಾಮೃತ ಯೋಜನೆಯಡಿ ಭರಿಸಲು ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿ ಜಿಲ್ಲೆಗೆ ಜಲಾಮೃತ ಯೋಜನೆಯಡಿ ಪ್ರಸಕ್ತ ಸಾಲಿಗೆ 2.23 ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ 2.78 ಕೋಟಿ ರೂ. ಸೇರಿದಂತೆ ಒಟ್ಟು 5.73 ಕೋಟಿ ರೂ. ಗಳನ್ನು ಒಗ್ಗೂಡಿಸುವಿಕೆಯ ಮೂಲಕ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
ಜಲಾಮೃತ ಯೋಜನೆಯಡಿ ಒಟ್ಟು 2.23 ಕೋಟಿ ರೂ.: ಚಾಮರಾಜನಗರ ತಾಲೂಕಿನ 10, ಗುಂಡ್ಲುಪೇಟೆ ತಾಲೂಕಿನ 11, ಯಳಂದೂರು ತಾಲೂಕಿನ 6 ಹಾಗೂ ಕೊಳ್ಳೇಗಾಲ ತಾಲೂಕಿನ 2 ಕೆರೆಗಳನ್ನು ಜೀರ್ಣೋದ್ಧಾರಕ್ಕಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿ ಚಾಮರಾಜನಗರ ತಾಲೂಕಿನ 10 ಕೆರೆಗಳಿಗೆ 89 ಲಕ್ಷ ರೂ., ಗುಂಡ್ಲುಪೇಟೆ ತಾಲೂಕಿನಲ್ಲಿ 11 ಕೆರೆಗಳಿಗೆ ಲಕ್ಷ ರೂ., ಯಳಂದೂರು ತಾಲೂಕಿನ 6 ಕೆರೆಗಳಿಗೆ 79 ಲಕ್ಷ ರೂ. ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿ 2 ಕೆರೆಗಳಿಗೆ 20 ಲಕ್ಷ ರೂ. ನಿಗದಿ ಮಾಡಿಕೊಳ್ಳಲಾಗಿದೆ. ಉಳಿದಂತೆ ಜಲಾಮೃತ ಯೋಜನೆಯಡಿ ಒಟ್ಟು 2.23 ಕೋಟಿ ರೂ. ವೆಚ್ಚ ಮಾಡಲು ಅನುಮೋದನೆ ದೊರೆತಿದೆ.
ಅನುಕೂಲಕರ ಕಾಮಗಾರಿ: ಜಲಾಮೃತ ಯೋಜನೆಯಡಿ ನಿರ್ವಹಿಸಲಾಗುವ ಜೀರ್ಣೋದ್ಧಾರ ಕಾಮಗಾರಿಯಿಂದ ಅಂತರ್ಜಲ ಹೆಚ್ಚಳ, ಮರುಪೂರಣಕ್ಕೆ ಸಹಾಯವಾಗಲಿದೆ. ಕೆರೆಗಳ ಹೂಳು ತೆಗೆಯುವಿಕೆ, ಫೀಡರ್ ಚಾನಲ್, ತೂಬು ನಿರ್ಮಾಣ, ಏರಿ ದುರಸ್ತಿ ಇನ್ನಿತರ ಅನುಕೂಲಕರ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ. ಕೆರೆಗಳ ಈ ಅಭಿವೃದ್ಧಿ ಕಾಮಗಾರಿಯಿಂದ ಕೆರೆಗಳ ಸುತ್ತಮುತ್ತಲ ಕೊಳವೆ ಬಾವಿಗಳ ಮರುಪೂರಣ ಸಾಮರ್ಥ್ಯ ಹೆಚ್ಚು ಮಾಡುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ಜಾನುವಾರು, ಪ್ರಾಣಿ- ಪಕ್ಷಿಗಳಿಗೆ ಕುಡಿವ ನೀರಿನ ಲಭ್ಯತೆ ಉಂಟು ಮಾಡುವುದು ಯೋಜನೆಯ ಸದುದ್ದೇಶಗಳಲ್ಲಿ ಒಂದಾಗಿದೆ.
ಅನುಮೋದನೆಗಳು ಅಗತ್ಯ: ಕಾಮಗಾರಿ ನಿರ್ವಹಣೆಗೆ ಹಲವು ಷರತ್ತು ಹಾಗೂ ನಿಬಂಧನೆಗಳನ್ನು ಪೂರೈಸುವಂತೆ ಸೂಚಿಸಲಾಗಿದೆ. ಜಲಾಮೃತ ಯೋಜನೆಯ ಕಾಮಗಾರಿಗಳ ಪ್ರಸ್ತಾವನೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದ ಜಲಾಮೃತ ಸಮಿತಿ ಮತ್ತು ಗ್ರಾಮಸಭೆಗಳಲ್ಲಿ ಅನುಮೋದನೆಗಾಗಿ ಮಂಡಿಸಬೇಕು. ನಂತರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಪರಿಶೋಧನೆ ಮತ್ತು ಅನುಮೋದನೆಗೆ ಕಳುಹಿಸಬೇಕಿದೆ.
ಕೆರೆಯ ಜಲಾನಯನ ಪ್ರದೇಶ ಮತ್ತು ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಸಮುದಾಯದ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳಬೇಕು. ಕಳೆದ 5 ವರ್ಷಗಳಲ್ಲಿ ಸದರಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಿರಬಾರದು. ಕೈಗೊಂಡ ಕಾಮಗಾರಿ ಸ್ಥಳದ ಮೂರು ಹಂತದ ಅಂದರೆ ಪೂರ್ವ, ಪ್ರಗತಿ ಹಾಗೂ ಮುಕ್ತಾಯದ ನಂತರದ ಹಂತಗಳ ಛಾಯಾಚಿತ್ರಗಳ ಜತೆಗೆ ಭೌತಿಕ, ಆರ್ಥಿಕ ಮತ್ತು ಕಾಮಗಾರಿಗೆ ಸಂಬಂಧಿಸಿದ ಸಂಪೂರ್ಣ ವರದಿಗಳನ್ನು ಜಲಾಮೃತ ಮೇಲುಸ್ತುವಾರಿ ಘಟಕಕ್ಕೆ ಸಲ್ಲಿಸಬೇಕು. ಪ್ರತೀ ಕಾಮಗಾರಿ ಸ್ಥಳಗಳಗಳಲ್ಲಿ ಕಾಮಗಾರಿ ಸಂಬಂಧ ಸಂಪೂರ್ಣ ವಿವರಗಳನ್ನೊಳಗೊಂಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ.
ಜಲಾಮೃತ ಯೋಜನೆಯಲ್ಲಿ ಜಿಲ್ಲೆಯ 29 ಕೆರೆಗಳನ್ನು ಅಭಿವೃದ್ಧಿ ಪಡಿಸಲು 5.73 ಕೋಟಿ ರೂ.ಗಳ ಕಾಮಗಾರಿಗೆ ಸರ್ಕಾರದ ಅನುಮೋದನೆ ದೊರೆತಿದೆ. ಜಿಲ್ಲೆಯಲ್ಲಿ ಕಬಿನಿಯಿಂದ ನೀರು ತುಂಬಿಸಲಾಗುವ ಕೆರೆಗಳನ್ನು ಹೊರತುಪಡಿಸಿ, ಬೇರೆ ಕೆರೆಗಳನ್ನು ಇದರಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.
-ಬಿ. ಎಚ್. ನಾರಾಯಣರಾವ್, ಜಿಪಂ ಸಿಇಒ
* ಕೆ.ಎಸ್. ಬನಶಂಕರ ಆರಾಧ್ಯ