ಕೋಲ್ಕತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಂಡಾಯ ಸಾರಿದ್ದ ಟಿಎಂಸಿ ಹಿರಿಯ ಮುಖಂಡ ಸುವೇಂದು ಅಧಿಕಾರಿ ಬುಧವಾರ(ಡಿಸೆಂಬರ್ 16, 2020) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.
ಮಾಧ್ಯಮಗಳ ವರದಿ ಪ್ರಕಾರ, ಸುವೇಂದು ಅಧಿಕಾರಿ ಡಿಸೆಂಬರ್ 19ರಂದು ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿದೆ. ರಾಜೀನಾಮೆ ನಿರ್ಧಾರ ಕೈಗೊಂಡ ಸುವೇಂದು ಅವರ ನಿರ್ಧಾರ ಸ್ವಾಗತಿಸುವುದಾಗಿ ಬಿಜೆಪಿ ಹೇಳಿದೆ.
ಸುವೇಂದು ಅವರು ತೃಣಮೂಲ ಕಾಂಗ್ರೆಸ್ ಪಕ್ಷದ ವರಿಷ್ಠೆ ಮಮತಾ ಜತೆ ಅಸಮಾಧಾನ ಹೊಂದಿದ್ದು, ಇದರಿಂದಾಗಿ ಸುವೇಂದು ಪಕ್ಷವನ್ನು ತ್ಯಜಿಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ.ಸುವೇಂದು ಅಧಿಕಾರಿ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸ್ಪೀಕರ್ ಗೆ ರಾಜೀನಾಮೆ ರವಾನಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಶಾ, ನಡ್ಡಾ ಪರಿಚಯ ಎಂದು ಕೋಟಿ ಕೋಟಿ ವಂಚಿಸಿದ್ದ ‘ಯುವರಾಜ್’ ಬಂಧನ
ಕಳೆದ ತಿಂಗಳು, ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸಚಿವ ಸಂಪುಟದಲ್ಲಿದ್ದ ಕ್ಯಾಬಿಟ್ ದರ್ಜೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸುವೇಂದು ಅವರು ಟಿಎಂಸಿಗೆ ರಾಜೀನಾಮೆ ನೀಡಿ ನಂತರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹಾಗು ಹಿರಿಯ ಮುಖಂಡ ಸುಗತಾ ರಾಯ್ ಸುವೇಂದು ಮನವೊಲಿಸಲು ಮುಂದಾಗಿದ್ದರು. ಆದರೆ ಸುವೇಂದು ಜತೆಗಿನ ಮಾತುಕತೆ ವಿಫಲವಾಗಿತ್ತು.