Advertisement

ಗೊಂದಲದ ಗೂಡಿನಿಂದ ಹೊರಬಾರದ ರೆಬಲ್‌

12:47 PM Apr 20, 2018 | |

ಮಂಡ್ಯ: ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ಘೋಷಣೆ ಬಳಿಕವೂ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಸಂಬಂಧ ಶಾಸಕ ಅಂಬರೀಶ್‌ ಇನ್ನೂ ಗೊಂದಲದಿಂದ ಹೊರಬಂದಿಲ್ಲ. ತಮ್ಮ ಮೌನವನ್ನೇ ಅಸ್ತ್ರವನ್ನಾಗಿಸಿಕೊಂಡು ಕಾಂಗ್ರೆಸ್‌ ಹೈಕಮಾಂಡ್‌ನ್ನು ಮಣಿಸುವ ತಂತ್ರಕ್ಕೆ ಮುಂದುವರಿಸಿದ್ದಾರೆ.

Advertisement

ಈ ಬಾರಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ತಮ್ಮ ಬೆಂಬಲಿಗರಿಗೆ ಟಿಕೆಟ್‌ ನೀಡಲಿಲ್ಲವೆಂಬ ಕಾರಣ ಮುಂದಿಟ್ಟುಕೊಂಡು ಚುನಾವಣಾ ಅಖಾಡದಿಂದಲೇ ದೂರ ಉಳಿದಿರುವ ಅಂಬರೀಶ್‌, ಪಕ್ಷದ ರಾಷ್ಟ್ರೀಯ ನಾಯಕರ ಮಾತಿಗೂ ಮನ್ನಣೆ ನೀಡದೆ ಈಗಲೂ ತಮ್ಮ ಹಠವನ್ನೇ ಮುಂದುವರಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ನೊಳಗೆ ಏಕಚಕ್ರಾಧಿಪತ್ಯ ಸ್ಥಾಪನೆ ಹಂಬಲ ಹೊಂದಿರುವ ಅಂಬರೀಶ್‌ ಅವರಿಗೆ ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರ್ಪಡೆಗೊಂಡ ಎನ್‌.ಚೆಲುವರಾಯಸ್ವಾಮಿ ಮಗ್ಗಲು ಮುಳ್ಳಾಗಿ ಪರಿಣಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದೆಡೆ ಚುನಾವಣೆಯಲ್ಲಿ ಹೈಕಮಾಂಡ್‌ ಟಿಕೆಟ್‌ ಹಂಚಿಕೆ ವೇಳೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಬೆಂಬಲಿಗರಿಗೂ ಟಿಕೆಟ್‌ ಕೊಡಲಿಲ್ಲ. ಚೆಲುವರಾಯಸ್ವಾಮಿ ಹಾಗೂ ರಮೇಶ್‌ ಬಂಡಿಸಿದ್ದೇಗೌಡರ ಪಕ್ಷ ಸೇರ್ಪಡೆ ಇವೆಲ್ಲವೂ ಶಾಸಕ ಅಂಬರೀಶ್‌ ಅಸಮಾಧಾನಕ್ಕೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ.

ಕಳೆದ 5 ವರ್ಷಗಳ ಕಾಲ ತಮಗೆ ಪರ್ಯಾಯವಾಗಿ ಮತ್ತೂಂದು ನಾಯಕತ್ವ ಹುಟ್ಟಿಕೊಳ್ಳದಂತೆ ಎಚ್ಚರಿಕೆ ವಹಿಸಿದ್ದ ಅಂಬರೀಶ್‌, ಇದೀಗ ಚೆಲುವರಾಯಸ್ವಾಮಿ ಆಗಮನದಿಂದ ಸ್ವಲ್ಪ ವಿಚಲಿತಗೊಂಡವರಂತೆ ಕಂಡುಬರುತ್ತಿದ್ದಾರೆ ಎಂದು ಹೇಳಲಾಗಿದೆ. 

Advertisement

ಕಾಂಗ್ರೆಸ್‌ನಲ್ಲಿ ಚೆಲುವರಾಯಸ್ವಾಮಿ ನಾಯಕತ್ವವನ್ನು ಪ್ರಶ್ನಿಸುವ ಮೂಲಕ ತಮ್ಮ ನಾಯಕತ್ವವನ್ನು ಪ್ರಚಲಿತಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನೊಳಗೆ ಗೊಂದಲದ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡತೊಡಗಿವೆ. 

ಜಿಲ್ಲೆಯಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ ಅಂಬರೀಶ್‌ ರಾಜಕೀಯ ಪ್ರವೇಶ ಬೆಂಬಲಿಗರಿಗೆ ಅನಿವಾರ್ಯ. ಅದಕ್ಕಾಗಿ ಅಂಬರೀಶ್‌ರನ್ನು ಜಿಲ್ಲೆಗೆ ಕರೆತರಲು ಶತಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿಯೇ ಹಲವು ದಿನಗಳಿಂದ ಠಿಕಾಣಿ ಹೂಡಿದ್ದಾರೆ.

ಚುನಾವಣೆಗೆ ಅಂಬರೀಶ್‌ ಸ್ಪರ್ಧಿಸುವುದು ಖಚಿತ. ಅವರೇ ಅಭ್ಯರ್ಥಿ ಎಂದೆಲ್ಲಾ ಬೆಂಬಲಿಗರು ಹೇಳುತ್ತಿದ್ದಾರೆಯಾದರೂ, ಹೈಕಮಾಂಡ್‌ ಟಿಕೆಟ್‌ ನೀಡಿದ ಬಳಿಕವೂ ಅಂಬರೀಶ್‌ ಇದುವರೆಗೂ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ನಾನೇ ಎಂದು ಬಹಿರಂಗವಾಗಿ ಹೇಳುತ್ತಿಲ್ಲ. ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಪ್ರಯತ್ನವನ್ನೂ ನಡೆಸಿಲ್ಲ. ಇದು ಮಂಡ್ಯ ವಿಧಾನಸಭಾ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಬೇಸರ ಉಂಟುಮಾಡಿದೆ.

ಬೆಂಬಲಿಗರಲ್ಲಿ ಆತಂಕ ಮೂಡಿಸಿದ ನಡೆ: ಮುಂದಿನ ದಿನಗಳಲ್ಲಿ ಚೆಲುವರಾಯಸ್ವಾಮಿ ಪರ್ಯಾಯ ನಾಯಕರಾಗಿ ಬೆಳವಣಿಗೆ ಸಾಧಿಸಿದ್ದಲ್ಲಿ ತಮ್ಮ ನಾಯಕತ್ವ ಹಾಗೂ ಪ್ರಾಬಲ್ಯಕ್ಕೆ ಹೊಡೆತ ಬೀಳಬಹುದೆಂಬ ಆತಂಕ ಅಂಬರೀಶ್‌ರನ್ನು ಕಾಡುತ್ತಿರುವಂತೆ ಕಂಡುಬರುತ್ತಿದ್ದಾರೆ.

ಅದೇ ಕಾರಣಕ್ಕೆ ಚೆಲುವರಾಯಸ್ವಾಮಿ ಅವರನ್ನು ಕಟ್ಟಿಹಾಕಲು ಈಗಿನಿಂದಲೇ ತಂತ್ರಗಾರಿಕೆ ರಾಜಕಾರಣ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಇನ್ನೂ ಯಾವುದೇ ನಿರ್ಧಾರಕ್ಕೆ ಬಾರದ ಅಂಬರೀಶ್‌, ತಮ್ಮ ನಿಗೂಢ ನಡೆ ಮುಂದುವರಿಸಿದ್ದಾರೆ. ಇದು ಅವರ ಬೆಂಬಲಿಗರಲ್ಲೂ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next