Advertisement

ಅಂಬರೀಶ್‌ಗೆ ಜನಸಾಗರದ ಅಶ್ರುತರ್ಪಣ

06:00 AM Nov 26, 2018 | |

ಬೆಂಗಳೂರು: ಕಲಿಯುಗ ಕರ್ಣ, ಚಿತ್ರರಂಗದ ಬಿಕ್ಕಟ್ಟುಗಳನ್ನು ಬಿಡಿಸುತ್ತಿದ್ದ ಟ್ರಬಲ್‌ ಶೂಟರ್‌, ನಾಡು- ನುಡಿ ವಿಚಾರ ಬಂದಾಗ ಕನ್ನಡಿಗರ ಪರ ದನಿ ಎತ್ತುತ್ತಿದ್ದ ಕೇಂದ್ರದ ಮಾಜಿ ಸಚಿವ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರಿಗೆ ಬೆಂಗಳೂರು ಹಾಗೂ ಅವರ ಹುಟ್ಟೂರು ಮಂಡ್ಯದಲ್ಲಿ ಅಪಾರ ಅಭಿಮಾನಿಗಳು, ಸ್ನೇಹಿತರು, ಆಪ್ತರು ಅಶ್ರುತರ್ಪಣದೊಂದಿಗೆ ಅಂತಿಮ ನಮನ ಸಲ್ಲಿಸಿದರು.

Advertisement

ಚಲನಚಿತ್ರರಂಗ, ರಾಜಕೀಯ, ಸಾಮಾಜಿಕ, ಸಾಹಿತ್ಯ ಕ್ಷೇತ್ರದ ಗಣ್ಯರು ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ನಾನಾ ಮೂಲೆಗಳಿಂದ ಆಗಮಿಸಿದ್ದ ಆಪ್ತರು, ಒಡನಾಡಿಗಳು ಹಿರಿಯ ನಟನ ನೆನೆದು ಕಂಬನಿ ಮಿಡಿದರು. ಎಲ್ಲ ವರ್ಗ, ವಯೋಮಾನ, ಕ್ಷೇತ್ರವರೊಂದಿಗೆ ಸ್ನೇಹಮಯಿಯಾಗಿ ಬೆರೆತು, ಸಂಕಷ್ಟದಲ್ಲಿದ್ದವರ ನೋವಿಗೆ ಸ್ಪಂದಿಸುತ್ತಾ, ಕೈಲಾದ ನೆರವು ನೀಡುತ್ತಾ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದ ಸಹೃದಯಿ ನಟನ ನೆನೆದು ಕಣ್ಣೀರಿನ ಶ್ರದ್ಧಾಂಜಲಿ ಅರ್ಪಿಸಿದರು.

ಭಾರತೀಯ ಚಿತ್ರರಂಗದ ದಿಗ್ಗಜರಾದ ಸೂಪರ್‌ ಸ್ಟಾರ್‌ ರಜನೀಕಾಂತ್‌, ಮೆಗಾಸ್ಟಾರ್‌ ಚಿರಂಜೀವಿ, ತೆಲುಗು ಹಿರಿಯ ನಟ ಮೋಹನ್‌ಬಾಬು, ತಮಿಳು ನಟ ಶರತ್‌ಕುಮಾರ್‌, ಬಹುಭಾಷಾ ಹಿರಿಯ ನಟಿಯರಾದ ಸುಹಾಸಿನಿ, ಅಂಬಿಕಾ, ರಾಧಿಕಾ, ಹಿರಿಯ ನಟಿ ರೇವತಿ ಸೇರಿದಂತೆ ಚಿತ್ರರಂಗದ ಹಿರಿಯ, ಕಿರಿಯ ನಟ, ನಟಿಯರು, ಕಲಾವಿದರು, ಚಿತ್ರರಂಗದ ಬಳಗದವರು ಆತ್ಮೀಯ ನಟನ ಅಂತಿಮ ದರ್ಶನ ಪಡೆದರು. ಚಿರಂಜೀವಿ, ಮೋಹನ್‌ಬಾಬು ಅವರು ಗಳಗಳನೆ ಅತ್ತ ದೃಶ್ಯ ಮನಕಲಕುವಂತಿತ್ತು.

ಇನ್ನೊಂದೆಡೆ ರಾಜ್ಯ ರಾಜಕಾರಣದಲ್ಲಿ ದಿಗ್ಗಜರೆನಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಠೀರವ ಕ್ರೀಡಾಂಗಣದಲ್ಲಿ ಅಂಬರೀಶ್‌ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಇದು ಅಂಬರೀಶ್‌ ಅವರ ಸ್ನೇಹಮಯ ವ್ಯಕ್ತಿತ್ವಕ್ಕೆ ಸಾಕ್ಷಿ ಎನಿಸಿತ್ತು.

ಬೆಳಗಿನಿಂದಲೇ ಸಾರ್ವಜನಿಕ ದರ್ಶನ
ನಗರದಲ್ಲಿ ಶನಿವಾರ ವಿಧಿವಶರಾದ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಜೆ.ಪಿ.ನಗರದ ಅವರ ಹಳೆಯ ಮನೆಯ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಮನೆಗೆ ತರಲಾಯಿತು. ಕೆಲ ಹೊತ್ತು ಪಾರ್ಥಿವ ಶರೀರವನ್ನು ಮನೆಯಲ್ಲಿ ಇರಿಸಿದ ಬಳಿಕ ಬೆಳಗ್ಗೆ 7 ಸುಮಾರಿಗೆ ಕಂಠೀರವ ಕ್ರೀಡಾಂಗಣಕ್ಕೆ ರವಾನಿಸಲಾಯಿತು. ಗಣ್ಯರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಪ್ರವೇಶ ದ್ವಾರ ಹಾಗೂ ಸಾಲಿನ  ವ್ಯವಸ್ಥೆ ಕಲ್ಪಿಸಿ ಬೆಳಗ್ಗೆ 8 ಗಂಟೆಯಿಂದ ಸಂಜೆ 3.45ರ ವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಸೇನಾ ವಿಶೇಷ ಹೆಲಿಕಾಪ್ಟರ್‌ನಲ್ಲಿ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮಂಡ್ಯಕ್ಕೆ ರವಾನಿಸಲಾಯಿತು. 

Advertisement

ಗಣ್ಯಾತಿಗಣ್ಯರಿಂದ ಅಂತಿಮ ದರ್ಶನ
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ಡಿ.ಕೆ.ಶಿವಕುಮಾರ್‌, ಸಾ.ರಾ. ಮಹೇಶ್‌, ಆರ್‌.ವಿ.ದೇಶಪಾಂಡೆ, ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌, ಮಾಜಿ ಸಚಿವರಾದ ಜಿ.ಜನಾರ್ದನ ರೆಡ್ಡಿ, ಎಂ.ಬಿ.ಪಾಟೀಲ್‌, ಎಚ್‌.ಕೆ. ಪಾಟೀಲ್‌ ಇತರರು ಅಂತಿಮ ದರ್ಶನ ಪಡೆದರು.

ಬಹುಭಾಷಾ ನಟರಾದ ಪ್ರಕಾಶ್‌ ರೈ, ಅರ್ಜುನ್‌ ಸರ್ಜಾ, ಹಿರಿಯ ಕಲಾವಿದರಾದ ರಾಜೇಶ್‌, ಲೀಲಾವತಿ, ಜಯಂತಿ, ಸುಧಾರಾಣಿ, ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಯಶ್‌, ಸುದೀಪ್‌, ಧ್ರುವ ಸರ್ಜಾ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ, ಯುವ ನಟ, ನಟಿಯರು, ಕಲಾವಿದರು, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಇತರೆ ಗಣ್ಯರು ಅಂತಿಮ ದರ್ಶನ ಪಡೆದರು.

ಸಿಎಂ ಮೇಲ್ವಿಚಾರಣೆ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಳಗ್ಗೆಯಿಂದಲೇ ಕಂಠೀರವ ಕ್ರೀಡಾಂಗಣದಲ್ಲಿದ್ದುಕೊಂಡು ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿದರು. ಅಂಬರೀಶ್‌ ಅವರ ಮಂಡ್ಯ ಅಭಿಮಾನಿಗಳ ಮನವಿ ಮೇರೆಗೆ ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸೇನಾ ವಿಶೇಷ ಹೆಲಿಕಾಪ್ಟರ್‌ ವ್ಯವಸ್ಥೆಗೆ ಮನವಿ ಮಾಡಿದರು. ಇದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಕ್ಷಣ ಸ್ಪಂದಿಸಿದರು. ಕೂಡಲೇ ಕುಮಾರಸ್ವಾಮಿಯವರು, ಸೇನೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ರವಾನಿಸಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವುದಾಗಿ ಪ್ರಕಟಿಸಿದ ನಂತರ ಮಂಡ್ಯದ ಅಭಿಮಾನಿಗಳು ಸಮಾಧಾನಗೊಂಡರು. ಜತೆಗೆ ಬೆಂಗಳೂರಿನ ಕಡೆಗೆ ಬರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಯಿತು.

ಮಂಡ್ಯದಲ್ಲೂ ಜನಸಾಗರ 
ಭಾನುವಾರ ಸಂಜೆ 3.45ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಿಂದ ಆ್ಯಂಬುಲೆನ್ಸ್‌ನಲ್ಲಿ ಎಚ್‌ಎಎಲ್‌ ವಿಮಾನನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ರವಾನಿಸಿ ಬಳಿಕ ಸೇನೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮಂಡ್ಯಕ್ಕೆ ರವಾನಿಸಲಾಯಿತು. ಸೇನೆಯ ಮೂರು ವಿಶೇಷ ಹೆಲಿಕಾಪ್ಟರ್‌ನಲ್ಲಿ ಕುಟುಂಬ ಸದಸ್ಯರು ಮಂಡ್ಯಕ್ಕೆ ತೆರಳಿದರು. ಮಂಡ್ಯದಲ್ಲಿ ಹೆಚ್ಚಿನ ಒಡನಾಟ ಹೊಂದಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲೇ ಭಾನುವಾರ ಸಂಜೆ 5.30ರಿಂದ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. 

ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು, ಬೆಂಬಲಿಗರು ಸಾಲಿನಲ್ಲಿ ಬಂದು ಕೊನೆಯ ಬಾರಿ ನೆಚ್ಚಿನ ನಟನನ್ನು ಕಣ್ತುಂಬಿ ಕೊಂಡರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಮಂಡ್ಯದಲ್ಲೂ ಸ್ಥಳದಲ್ಲಿದ್ದು ಸಾರ್ವಜನಿಕ ದರ್ಶನ ವ್ಯವಸ್ಥೆಯನ್ನು ಪರಿಶೀಲಿಸಿದರು.

ಅಚ್ಚುಕಟ್ಟಿನ ವ್ಯವಸ್ಥೆ
ಅಂಬರೀಶ್‌ ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ನಿರಂತರವಾಗಿ ಹಿರಿಯ ಪೊಲೀಸ್‌ ಅಧಿಕಾರಿಗ‌ಳೊಂದಿಗೆ ಸಭೆ ನಡೆಸಿ ಸಾರ್ವಜನಿಕ ದರ್ಶನ ಹಾಗೂ ಅಂತ್ಯಕ್ರಿಯೆಗೆ ಅಗತ್ಯವಿರುವ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದರು. ಪೂರ್ವ ಯೋಜನೆಯಂತೆಯೇ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಇನ್ನೊಂದೆಡೆ ಕಂಠೀರವ ಸ್ಟುಡಿಯೋಗೂ ಭೇಟಿ ನೀಡಿದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಅಂತ್ಯಕ್ರಿಯೆಗೆ ಅಗತ್ಯವಿರುವ ಸಿದ್ಧತೆಯ ಮೇಲ್ವಿಚಾರಣೆ ನಡೆಸಿದರು. ಹಿಂದೆ ವರನಟ ಡಾ.ರಾಜ್‌ಕುಮಾರ್‌ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಉಂಟಾದ ಅವಘಡಗಳ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಭಾರಿ ಮುನ್ನೆಚ್ಚರಿಕೆ ವಹಿಸಿದ್ದು ಕಂತುಬಂತು.

ಇಂದು ಅಂತ್ಯಕ್ರಿಯೆ
ಸೋಮವಾರ ಬೆಳಗ್ಗೆ 9 ಗಂಟೆಗೆ ಮಂಡ್ಯದಿಂದ ಸೇನೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ರವಾನಿಸಲಾಗುತ್ತದೆ. ಕ್ರೀಡಾಂಗಣದಿಂದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಹೊರಡಲಿದೆ. ಮಧ್ಯಾಹ್ನ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಅಭಿಮಾನಿ ಆತ್ಮಹತ್ಯೆ
ಅಂಬರೀಶ್‌ ನಿಧನದ ಸುದ್ಧಿ ತಿಳಿದು ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಭಾನುವಾರ ಜರುಗಿದೆ. ಹೊಟ್ಟೇಗೌಡನದೊಡ್ಡಿ ಗ್ರಾಮದ ಚಿಕ್ಕಮೊಗಯ್ಯ ಅವರ ಪುತ್ರ ತಮ್ಮಯ್ಯ (52) ಮೃತಪಟ್ಟ ವ್ಯಕ್ತಿ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್‌ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಳಿ ಬದಿಯಲ್ಲಿ ಅಂಬರೀಶ್‌ ಅವರ ಭಾವಚಿತ್ರವಿರುವುದು ಕಂಡುಬಂದಿದೆ. ಅಂಬಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮನನೊಂದಿದ್ದ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next