ಕನ್ನಡದ ಮಟ್ಟಿಗೆ ಅದೊಂದು ವಿಶೇಷ ಚಿತ್ರ. ಕಾರಣ, ಮಾತು ಬರುವವರ, ಕಿವಿ ಕೇಳುವವರಿಂದಲೇ ಸರಿಯಾಗಿ ನಟನೆ ಮಾಡಿಸಿ, ಡಬ್ಬಿಂಗ್ ಮಾಡಿಸುವುದು ಕಷ್ಟ ಇರುವಾಗ, ನಿಜ ಬದುಕಿನಲ್ಲಿ ಮಾತೇ ಬರದ, ಕಿವಿ ಕೇಳದವರಿಂದ ನಟನೆ ಮಾಡಿಸಿ, ಡಬ್ಬಿಂಗ್ ಕೂಡ ಮಾಡಿಸುವುದು ಸುಲಭವಲ್ಲ. ಅಂಥದ್ದೊಂದು ಪ್ರಯತ್ನ ಮತ್ತು ಪ್ರಯೋಗ “ಕಿಚ್ಚು’ ಮೂಲಕ ಆಗಿದೆ. ಭಾರತೀಯ ಚಿತ್ರರಂಗದಲ್ಲಿ ಇದೊಂದು ವಿಶೇಷವೂ ಹೌದು. ನಿಜ ಜೀವನದಲ್ಲಿ ಮಾತಾಡದ, ಕಿವಿ ಕೇಳಿಸದ ಇಬ್ಬರನ್ನೂ ತೆರೆಯ ಮೇಲೆ ಅದೇ ಪಾತ್ರ ಮಾಡಿಸಿರುವುದು ಹೆಚ್ಚುಗಾರಿಕೆ. ಈ ಚಿತ್ರದಲ್ಲಿ ಸ್ಟಾರ್ ನಟ ಸುದೀಪ್ ಇದ್ದಾರೆ. ಗ್ಲಾಮರ್ ನಟಿ ರಾಗಿಣಿಯೂ ಇದ್ದಾರೆ. ಇನ್ನಷ್ಟು ಹೆಸರಾಂತ ಕಲಾವಿದರಿದ್ದಾರೆ. ಇವರೆಲ್ಲ ಇದ್ದರೂ, “ಕಿಚ್ಚು’ ಮಾತ್ರ ಎರಡು ಪ್ರಮುಖ ಪಾತ್ರಗಳ ಸುತ್ತವೇ ಗಿರಕಿ ಹೊಡೆಯುತ್ತದೆ. ರಾಗಿಣಿ ಇಲ್ಲೊಂದು ರೆಬೆಲ್ ಪಾತ್ರ ನಿರ್ವಹಿಸಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಮೊದಲ ಸಲ ಅಂಥದ್ದೊಂದು ಪಾತ್ರ ಮಾಡಿರುವ ರಾಗಿಣಿಗೆ, ಇಮೇಜ್‌ನಿಂದ ಹೊರತಾಗಿರುವ ಪಾತ್ರ ಮಾಡಿರುವುದು ಖುಷಿ ಮತ್ತು ಹೆಮ್ಮೆ.
“ಇದು ನನ್ನ ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆ. ಇಷ್ಟು ವರ್ಷ ಮಾಡಿದ ಚಿತ್ರಗಳಿಗಿಂತ “ಕಿಚ್ಚು’ ನನಗೆ ಸ್ಪೆಷಲ್.
ಇಲ್ಲಿ ಸುದೀಪ್ ಇದ್ದರೂ, ಕಥೆಯೇ ಹೀರೋ. ಹೆಸರಾಂತ ಪಾತ್ರಗಳಿದ್ದರೂ ಸ್ಕ್ರಿಪ್ಟ್ ಹೈಲೆಟ್. ನಾನು ಈ ಚಿತ್ರದಲ್ಲಿ ಕೆಲಸ ಮಾಡಿದ್ದೇ ಅದೃಷ್ಟ. ಆರಂಭದಲ್ಲಿ ಕಥೆ, ಪಾತ್ರ ಕೇಳಿದಾಗ, ಒಂದು ಕಡೆ ಖುಷಿಯಾಯ್ತು. ಇನ್ನೊಂದು ಕಡೆ ಚಾಲೆಂಜಿಂಗ್ ಎನಿಸಿತು. ಧ್ರುವಶರ್ಮ ಅವರ ಪ್ರತಿಭೆ ಇಲ್ಲೇನು ಅನ್ನೋದು ಗೊತ್ತಾಗುತ್ತೆ. ಇಲ್ಲಿರುವ ಪ್ರತಿ ಕಲಾವಿದರೂ ಇಮೇಜ್ ಬಿಟ್ಟು ಕೆಲಸ ಮಾಡಿದ್ದಾರೆ. ಅದಕ್ಕೆಲ್ಲಾ ಕಾರಣ ಕಥೆ. ನಾನು ಇಷ್ಟು ದಿನ ಕೆಲವೊಂದನ್ನು ಕಲಿತಿರಲಿಲ್ಲ. ಈ ಚಿತ್ರದಲ್ಲಿ ಅದನ್ನು ಕಲಿತಿದ್ದೇನೆಂಬ ಹೆಮ್ಮೆ ಇದೆ. ರೆಗ್ಯುಲರ್ ಚಿತ್ರಗಳಲ್ಲಿ ಕಾಣುತ್ತಿದ್ದ ರಾಗಿಣಿ ಇಲ್ಲಿ ಕಾಣಸಿಗಲ್ಲ. ಮೊದಲ ಸಲ, ನಾನು ಗ್ಲಾಮರ್ ಬಿಟ್ಟು ಪಾತ್ರ ಮಾಡಿದ್ದೇನೆ. ಮೇಕಪ್ ಇಲ್ಲದೆ, ಡಿ ಗ್ಲಾಮ್ ಪಾತ್ರ ನಿರ್ವಹಿಸಿದ್ದೇನೆ. ಇದುವರೆಗೆ ಆ ರೀತಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿಲ್ಲ. ಯಾರೂ ಅಂಥದ್ದೊಂದು ಪಾತ್ರ ಹಿಡಿದು ಬಂದಿರಲೂ ಇಲ್ಲ. ಕಥೆ ಮತ್ತು ಪಾತ್ರದ ವಿವರಣೆ ಕೇಳುವಾಗ, ಕಲ್ಪನೆ ಮಾಡಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ. ಅಷ್ಟೊಂದು ಗಂಭೀರವಿರುವ ಸಬೆjಕ್ಟ್ ಅದಾಗಿತ್ತು. ಏನಾದರೂ ಸರಿ, ನನ್ನನ್ನು ನಾನು ಮತ್ತೂಮ್ಮೆ ಸಾಬೀತುಪಡಿಸಿಕೊಳ್ಳಲು ಇದು ಒಂದೊಳ್ಳೆಯ ಅವಕಾಶ ಅಂದುಕೊಂಡು ಮಾಡಿದ್ದೇನೆ’ ಎಂಬುದು ರಾಗಿಣಿ ಮಾತು.
“ನನ್ನದು ಅರಣ್ಯ ಭಾಗದಲ್ಲಿರುವ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುವ ಹುಡುಗಿ ಪಾತ್ರ. ಆ ಭಾಗದ ಜನರ ಕಲೆ, ಸಂಸ್ಕೃತಿಯ ಜೊತೆಗೆ ಅಲ್ಲಿನವರ ಸ್ಥಿತಿ-ಗತಿ ಕುರಿತು ಹೇಳುವ ಚಿತ್ರಣ ಆ ಪಾತ್ರದಲ್ಲಿದೆ. ಆ ಪಾತ್ರ ನಿರ್ವಹಿಸುವ ಮುನ್ನ, ಸುಮಾರು ಒಂದು ತಿಂಗಳ ಕಾಲ, ಅಲ್ಲಿನ ಜನರ ಜತೆ ಬೆರೆತು, ಅವರ ನಡೆ, ನುಡಿ, ಬಾಡಿಲಾಂಗ್ವೇಜ್ ಮತ್ತು ಅವರು ಮಾಡುವ ಕೆಲಸಗಳನ್ನೆಲ್ಲಾ ಹತ್ತಿರದಿಂದ ನೋಡಿ ಕಲಿತಿದ್ದೇನೆ. ಅವರ ಕಷ್ಟ-ಸುಖ ಹೇಗಿದೆ ಎಂಬುದನ್ನು ಅರಿತಿದ್ದೇನೆ. ಅದೆಲ್ಲವನ್ನೂ ಅನುಭವಕ್ಕೆ ಪಡೆದು, ಪಾತ್ರ ಮಾಡಿದ್ದೇನೆ. ನಿಜವಾಗಿಯೂ ಅಲ್ಲಿನ ಹುಡುಗಿಯರ ಧೈರ್ಯ, ಸಂಪೂರ್ಣ ತಮ್ಮ ಮನೆಯ ಮೇಲೆ ತೆಗೆದುಕೊಳ್ಳುವ ಜವಾಬ್ದಾರಿ ಕಂಡು ಹೆಮ್ಮೆ ಎನಿಸಿತು. ದಿನಕ್ಕೆ 16 ಗಂಟೆ ಕೆಲಸ ಮಾಡುವ ಅರಣ್ಯ ವಾಸಿಗಳ ಕಷ್ಟ ಏನೆಂಬುದನ್ನು ಅರಿತಿದ್ದೇನೆ. ಅಲ್ಲಿನ ಗಂಭೀರ ಸಮಸ್ಯೆಯನ್ನೂ ತಿಳಿದಿದ್ದೇನೆ. ಆ ಎಲ್ಲಾ ಸಮಸ್ಯೆಯನ್ನು ಬಿಚ್ಚಿಡುವುದರ ಜೊತೆಗೆ ಒಂದೊಳ್ಳೆ ಸಂದೇಶದೊಂದಿಗೆ ಚಿತ್ರ ಬರುತ್ತಿದೆ. ಆ ಜನರ ಜತೆ ಬೆರೆತು, ಆ ಪಾತ್ರ ನಿರ್ವಹಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದೊಂದು ರೆಬೆಲ್ ಆಗಿರುವಂತಹ ಪಾತ್ರ. ಚಿತ್ರದ ಕೆಲವೆಡೆ ಕೆಟ್ಟ ಪದಗಳನ್ನೆಲ್ಲಾ ಬಳಸಿದ್ದೇನೆ. ಅದು ಯಾಕೆ, ಅನ್ನುವುದನ್ನು ಚಿತ್ರದಲ್ಲೇ ನೋಡಬೇಕು ಎನ್ನುತ್ತಾರೆ ರಾಗಿಣಿ.
“ಕಮರ್ಷಿಯಲ್ ಚಿತ್ರಗಳಲ್ಲಿ ಹೀಗೆ, ಹೋಗಿ ಹಾಗೆ ಬಂದುಬಿಟ್ಟರೆ ಸಿನಿಮಾ ಆಗಿಬಿಡುತ್ತೆ. ಇಂತಹ ಗಂಭೀರತೆ ಇರುವ ಕಥಾಹಂದರದ ಚಿತ್ರದಲ್ಲಿ ಬಹಳಷ್ಟು ನೆನಪುಗಳು ಕಾಡುತ್ತವೆ. ರಾತ್ರಿ-ಹಗಲೆನ್ನದೆ, ಮಳೆ, ಗಾಳಿ ನಡುವೆ, ಆ ದಟ್ಟ ಕಾಡಿನ ಮಧ್ಯೆ ಚಿತ್ರೀಕರಣ ಮಾಡಿದ್ದು ನಿಜಕ್ಕೂ ಮರೆಯಲಾರದ ಅನುಭವ. ಈ ಚಿತ್ರದ ಮೂಲಕವಾದರೂ, ಧ್ವನಿ ಕಳೆದುಕೊಂಡವರ ಬದುಕು ಹಸನಾದರೂ ಸಾಕು’ ಎನ್ನುತ್ತಾರೆ ರಾಗಿಣಿ.
ವಿಜಯ್ ಭರಮಸಾಗರ