Advertisement

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್‌ ಮನನ ತರಗತಿ

12:48 AM Apr 07, 2020 | Sriram |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳಲ್ಲಿ ಪುನರ್‌ ಮನನ ತರಗತಿ ಆಯೋಜಿ ಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ನಿರ್ದೇಶ ನೀಡಿದ್ದಾರೆ.

Advertisement

ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಲಾಕ್‌ಡೌನ್‌ ಮುಗಿದ ಬಳಿಕ ಎಸೆಸೆಲ್ಸಿ ಪರೀಕ್ಷೆಯ ಪರಿಷ್ಕತ ವೇಳಾ ಪಟ್ಟಿ ಪ್ರಕಟಿಸಲಾಗುತ್ತದೆ. ಈಗ ರಜೆ ಅವಧಿ ಇರುವುದರಿಂದ ವಿದ್ಯಾರ್ಥಿಗಳು ತಾವು ಓದಿದ ವಿಷಯಗಳನ್ನು ಮನನ ಮಾಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ಎಸೆಸೆಲ್ಸಿ ಪರೀಕ್ಷಾ ದಿನಾಂಕದ ಪೂರ್ವದಲ್ಲಿ ಕನಿಷ್ಠ ಒಂದು ವಾರದ ಅವಧಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪುನರ್‌ ಮನನ ತರಗತಿಗಳನ್ನು ಆಯೋಜಿಸಬೇಕು ಎಂದು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿರುವ ಆಶ್ರಮ ವಸತಿ ಶಾಲೆಗಳ ಶೈಕ್ಷಣಿಕ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಯ ತೆಗೆದುಕೊಳ್ಳುವಲ್ಲಿ ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸಿ ಕಡತದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದವರು ನಿರ್ದೇಶ ನೀಡಿದ್ದಾರೆ.

ರಜೆ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ರಿಯಾ ಶೀಲವಾಗಿ ಕಳೆಯಲು ಅನುಗುಣವಾಗುವಂತೆ ಶಿಕ್ಷಣ ಇಲಾಖೆ ಯುಟ್ಯೂಬ್‌ ಚಾನೆಲ್‌ ಅನ್ನು ಕೂಡಲೇ ಆರಂಭಿಸಲು ಕ್ರಮಕೈಗೊಳ್ಳುವುದು. ಶಿಕ್ಷಕರು, ಶಿಕ್ಷಣ ಆಸಕ್ತರಿಂದ ಕಲಿಕಾ ಸಾಮಗ್ರಿಗಳನ್ನು ಸೃಷ್ಟಿಸಿ, ನಾವೀನ್ಯತೆ ಆಧಾರದಲ್ಲಿ ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಿರೂಪಿಸಿ ಪ್ರಸಾರ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಸಮಗ್ರ ಶಿಕ್ಷಣದ ಯೋಜನಾ ನಿರ್ದೇಶಕರಿಗೆ ತಿಳಿಸಿದ್ದಾರೆ.

ಹಾಗೆಯೇ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾಗಿರುವ ಹಲವಾರು ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಮಕ್ಕಳ ಪೋಷಕರಿಂದ ವಸೂಲಿ ಮಾಡಲಾಗುತ್ತಿರುವ ಬಗ್ಗೆ ದೂರು ಬರುತ್ತಿವೆ. ಎಲ್ಲ ಜಿಲ್ಲಾ ಉಪನಿರ್ದೇಶಕರು ಕೂಡಲೇ ಶಾಲೆಗಳಿಗೆ ಸೂಚನೆಗಳನ್ನು ನೀಡಿ, ಇದರ ಪರಿಶೀಲನೆ ನಡೆಸಿ, ಶಾಲೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸುರೇಶ್‌ ಕುಮಾರ್‌ ಆದೇಶದಲ್ಲಿ ತಿಳಿಸಿದ್ದಾರೆ.

Advertisement

ಸಿಇಟಿ: ಆನ್‌ಲೈನ್‌ ಮೂಲಕ ಸಿದ್ಧತೆಗೆ ಅನುದಾನ
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಂಜಿನಿಯರಿಂಗ್‌ ಸಹಿತವಾಗಿ ವಿವಿಧ ವೃತ್ತಿಪರ ಕೋರ್ಸ್‌ ಗಳಿಗೆ ಪ್ರವೇಶ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎದುರಿಸಲಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಸಿದ್ಧತೆ ನಡೆಸಲು ಸರಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ.

ಕೋವಿಡ್ 19 ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಲಾಕೌಡೌನ್‌ ಆಗಿರುವುದರಿಂದ ಎಲ್ಲ ರೀತಿಯ ಚಲನವಲನಗಳನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ರಾಜ್ಯದ ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸಿಇಟಿಗೆ ತಯಾರಿ ನಡೆಸಲು ಅನುಕೂಲ ಆಗುವಂತೆ “ಕಾಂಪ್ರಹೆನ್ಸಿವ್‌ ಆನ್‌ಲೈನ್‌ ಪ್ಲಾಟ್‌ಫಾರ್ಮ್’ ಮೂಲಕ ತರಬೇತಿಗೆ ಸರಕಾರ ಮುಂದಾಗಿದೆ. ಆನ್‌ಲೈನ್‌ ತರಬೇತಿಗೆ ಸಂಬಂಧಿಸಿದಂತೆ ಇ- ಕಂಟೆಂಟ್‌ ಮತ್ತು ಪ್ರಯೋಗಾತ್ಮಕ ಪರೀಕ್ಷೆಗಳ ಕಲಿಕಾ ಸಾಮಗ್ರಿ ಸಿದ್ಧಪಡಿಸಲು ಕಿಯೋನಿಕ್ಸ… ಸಂಸ್ಥೆಗೆ ಪ್ರಾಧಿಕಾರದಿಂದ 80 ಲ. ರೂ. ಒದಗಿಸಲಾಗುತ್ತಿದೆ. ಸೂಕ್ತ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ವೆಚ್ಚವನ್ನು ನಿಯಮಾನುಸಾರವಾಗಿ ಅನುಷ್ಠಾನಗೊಳಿಸಲು ಸಂಸ್ಥೆಗೆ ವಹಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಅನುಮತಿ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next