Advertisement

ಕಣ್ಗಾವಲು, ಖಾಸಗಿತನ ಚ್ಯುತಿಗೆ ಅವಕಾಶವಿಲ್ಲ

06:00 AM Sep 27, 2018 | |

ನವದೆಹಲಿ: ಆಧಾರ್‌ ಕಾರ್ಡ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಐಎ) ಸ್ವಾಗತಿಸಿದ್ದು, ಇದೊಂದು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದೆ. ಇದೇ ವೇಳೆ ಆಧಾರ್‌ ಬಗೆಗಿನ ಆರೋಪ, ಅನುಮಾನಗಳಿಗೆ ಉತ್ತರಿಸಿರುವ ಪ್ರಾಧಿಕಾರ, ಆಧಾರ್‌ನ ಮಾಹಿತಿಗಳು ಯಾವುದೇ ಸರ್ಕಾರದ ಕಣ್ಗಾವಲು ಉದ್ದೇಶಗಳಿಗೆ ಬಳಸಲ್ಪಡುವುದಿಲ್ಲ ಹಾಗೂ ಸಾರ್ವಜನಿಕರ ಖಾಸಗಿತನಕ್ಕೆ ಕುಂದು ಉಂಟು ಮಾಡುವುದಿಲ್ಲ ಎಂದು ಪುನರುಚ್ಚರಿಸಿದೆ. ಆಧಾರ್‌ ಬಗ್ಗೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಸಹ ಇದನ್ನೇ ಒತ್ತಿ ಹೇಳಿದ್ದು, ಮಾಹಿತಿ ಸೋರಿಕೆಯನ್ನು ತಡೆಗಟ್ಟಲು ಸಮರ್ಪಕವಾದ ರಕ್ಷಣಾ ಕ್ರಮಗಳನ್ನು ಆಧಾರ್‌ ವ್ಯವಸ್ಥೆ ಹೊಂದಿದ್ದು, ಸಮಾಜದ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಮುಡುಪಾಗಿದೆ ಎಂದು ಪ್ರಾಧಿಕಾರ ಪ್ರತಿಪಾದಿಸಿದೆ. 

Advertisement

ಸರ್ಕಾರದ ನಡೆ ತಪ್ಪು
ಬುಧವಾರ ಹೊರಬಿದ್ದ 4:1 ಬಹುಮತದ ತೀರ್ಪಿನಲ್ಲಿ ನಾಲ್ವರು ನ್ಯಾಯಮೂರ್ತಿಗಳು ಒಂದೇ ರೀತಿಯ ತೀರ್ಪು ಪ್ರಕಟಿಸಿದರೆ, ಐದನೇ ನ್ಯಾಯಮೂರ್ತಿ ಚಂದ್ರಚೂಡ್‌, ವ್ಯತಿರಿಕ್ತವಾದ ತೀರ್ಪು ನೀಡಿ ಗಮನ ಸೆಳೆದರು. ತೀರ್ಪಿನಲ್ಲಿ ಪ್ರಮುಖವಾಗಿ, ಲೋಕ ಸಭೆಯಲ್ಲಿ ಆಧಾರ್‌ ಮಸೂದೆಯನ್ನು  ಹಣಕಾಸು ಮಸೂದೆಯಾಗಿ ಮಂಡಿಸುವ ಅಗತ್ಯವಿರಲಿಲ್ಲ ಎಂದು ಒತ್ತಿ ಹೇಳಿರುವ ಅವರು, ರಾಜ್ಯಸಭೆಯ ತಿದ್ದುಪಡಿ ಸೂಚನೆಗೆ ಹೊರತಾಗಿಯೂ ಲೋಕಸಭೆ ಯಲ್ಲಿ ಮಸೂದೆಗೆ ಅಂಗೀಕಾರ ಸಿಗುವಂತೆ ನೋಡಿಕೊಂಡ ಕೇಂದ್ರ ಸರ್ಕಾರದ ನಡೆ ಸಂವಿಧಾನದ ಕಣ್ಣಿಗೆ ಮಣ್ಣೆರಚುವಂಥದ್ದಾಗಿದ್ದು ಇದು ರದ್ದುಗೊಳ್ಳುವ ಎಲ್ಲಾ ಅರ್ಹತೆಗಳನ್ನೂ ಪಡೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, 120 ಕೋಟಿ ಭಾರತೀಯ ನಾಗರಿಕರ ಮಾಹಿತಿಗಳನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಪರೀಕ್ಷೆಗೊಳಪಡಿಸಲು ಅನುವು ಮಾಡಿಕೊಡುವ ಮೂಲಕ  ದೇಶದ ನಾಗರಿಕರ ಖಾಸಗಿತನದ ಮೇಲೆ ಕಣ್ಗಾವಲು ನಡೆಸಲು ಅನುವು ಮಾಡಲಾಗಿರುವುದು ಖೇದಕರ ಎಂದು ಅವರು ತೀರ್ಪಿನಲ್ಲಿ ಉಲ್ಲೇಖೀಸಿದ್ದಾರೆ.

2ನೇ ಅತಿ ದೀರ್ಘ‌ ವಿಚಾರಣೆ
ಆಧಾರ್‌ ವಿಚಾರಣೆಯು ಭಾರತೀಯ ಕಾನೂನು ಇತಿಹಾಸದಲ್ಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ದೈನಂದಿನ ಕಲಾಪವಾಗಿ ನಡೆದ 2ನೇ ಅತಿ ದೀರ್ಘಾವಧಿಯ ವಿಚಾರಣೆಯಾಗಿದೆ. ಇದರ ವಿಚಾರಣೆ 4.5 ತಿಂಗಳುಗಳ ಕಾಲ ನಡೆದಿದ್ದು, ಈ ಪಟ್ಟಿಯಲ್ಲಿ 1973ರ ಕೇಶವಾನಂದ ಭಾರತಿ ಪ್ರಕರಣ ಮೊದಲ ಸ್ಥಾನದಲ್ಲಿದೆ. ಆ ಪ್ರಕರಣದ ವಿಚಾರಣೆ ದೈನಂದಿನ ಕಲಾಪದ ಮಾದರಿಯಲ್ಲಿ ಐದು ತಿಂಗಳುಗಳ ಕಾಲ ನಡೆದಿತ್ತು.

ಈವರೆಗೆ ಬರೀ 20 ಲಕ್ಷ  ಪ್ಯಾನ್‌-ಆಧಾರ್‌ ಜೋಡಣೆ
ಸುಪ್ರೀಂ ಕೋರ್ಟ್‌ ಆದೇಶದನ್ವಯ ಪ್ಯಾನ್‌ ಕಾರ್ಡ್‌ ಸಂಖ್ಯೆ ಹಾಗೂ ಆಧಾರ್‌ ಕಾರ್ಡ್‌ ಸಂಖ್ಯೆಯ ಜೋಡಣೆ ಕಡ್ಡಾಯವಾಗಲಿದೆ.  ಈಗಾಗಲೇ ಪ್ಯಾನ್‌-ಆಧಾರ್‌ ಜೋಡಣೆಗೆ ಮುಂದಿನ ಮಾ. 31ರವರೆಗೆ ಕೇಂದ್ರ ಸರ್ಕಾರ ಗಡುವು ವಿಧಿಸಿದೆ. ಆದಾಗ್ಯೂ ಆಧಾರ್‌ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದಿದ್ದರಿಂದ ಅನೇಕರು ಈ ಬಗ್ಗೆ ತಾತ್ಸಾರ ಮಾಡಿದ್ದರೆಂಬ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಬಹಿರಂಗಗೊಳಿಸಿದೆ. ಈವರೆಗೆ ಸುಮಾರು 40.02 ಕೋಟಿಯಷ್ಟು ಪ್ಯಾನ್‌ ಕಾರ್ಡ್‌ ವಿತರಿಸಲಾಗಿದ್ದು, ಇವುಗಳಲ್ಲಿ ಕೇವಲ 21.08 ಕೋಟಿಯಷ್ಟು ಪ್ಯಾನ್‌ ಕಾರ್ಡ್‌ಗಳಿಗೆ ಮಾತ್ರ ಆಧಾರ್‌ ಲಿಂಕ್‌ ಆಗಿದೆ ಎಂದು ಇಲಾಖೆ ಹೇಳಿದೆ. ಈಗ, ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪ್ಯಾನ್‌ ಕಾರ್ಡುದಾರರು ಜಾಗೃತರಾಗಲಿದ್ದಾರೆಂಬ ಆಶಯವಿದೆ.

ಮತ್ತೆ ಸುಪ್ರೀಂಗೆ ಮೊರೆ: ಕಾಂಗ್ರೆಸ್‌ ನಿರ್ಧಾರ
2016ರಲ್ಲಿ ಕೇಂದ್ರ ಸರ್ಕಾರ, ಲೋಕಸಭೆಯಲ್ಲಿ ಆಧಾರ್‌ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಡಿಸಿದ್ದನ್ನು ಸುಪ್ರೀಂ ಕೋರ್ಟ್‌ ಬುಧವಾರದ ತೀರ್ಪಿನಲ್ಲಿ ಎತ್ತಿ  ಹಿಡಿದಿದೆ. ಇದರಿಂದ ಅಸಮಾಧಾನ ಗೊಂಡಿ ರುವ ಕಾಂಗ್ರೆಸ್‌, ಈ ತೀರ್ಪನ್ನು ಪುನರ್‌ ಪರಿಶೀಲಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌, “”2016ರಲ್ಲಿ ಆಧಾರ್‌ ಮಸೂದೆಗೆ ತಿದ್ದುಪಡಿ ತರಬೇಕೆಂದು ರಾಜ್ಯಸಭೆ ಸೂಚಿಸಿದ ಹೊರತಾಗಿಯೂ, ಅದೇ ವರ್ಷದ ಸಂಸತ್‌ ಅಧಿವೇಶನದಲ್ಲಿ, ಆಧಾರ್‌ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಡಿಸಿ, ಈ ಮಸೂದೆಗೆ ತಿದ್ದುಪಡಿಗಳಿಲ್ಲದೆ ಸಂಸತ್ತಿನ ಒಪ್ಪಿಗೆ ಸಿಗುವಂತೆ ನೋಡಿಕೊಳ್ಳಲಾಗಿತ್ತು. ಇದರ ವಿರುದ್ಧ ಕಾಂಗ್ರೆಸ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ನ್ಯಾಯಾಲಯ ಸರ್ಕಾರದ ನಡೆಯನ್ನು ಸಮರ್ಥಿಸಿದ್ದು, ಈ ಬಗ್ಗೆ ಪುನರ್‌ ಪರಿಶೀಲಿಸುವಂತೆ ಕಾಂಗ್ರೆಸ್‌ ಮನವಿ ಸಲ್ಲಿಸಲಿದೆ” ಎಂದರು.

Advertisement

ಕಾಂಗ್ರೆಸ್‌ ವಿರುದ್ಧ ಅಮಿತ್‌ ಶಾ ಲೇವಡಿ
2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಗೆ ಗೆದ್ದಿತ್ತೋ ಇಂದು ಆಧಾರ್‌ ವಿಚಾರದಲ್ಲೂ ಆ ಪಕ್ಷ ಹಾಗೇ ಮತ್ತೂಮ್ಮೆ ಗೆದ್ದಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಲೇವಡಿ ಮಾಡಿದ್ದಾರೆ. ಆಧಾರ್‌ ಬಗ್ಗೆ ಸುಪ್ರೀಂ ಕೋರ್ಟ್‌ನ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಅವರು, “”ಭ್ರಷ್ಟಾಚಾರ ಹಾಗೂ ಮಧ್ಯವರ್ತಿ ಸಂಪ್ರದಾಯದ ಹರಿಕಾರ ಎನಿಸಿರುವ ಕಾಂಗ್ರೆಸ್‌ ಪಕ್ಷ, ಆಧಾರ್‌ ಅನ್ನು ರಾಜಕೀಯವಾಗಿ, ಕಾನೂನಾತ್ಮಕವಾಗಿ ಸೋಲಿಸಲು ತನ್ನೆಲ್ಲಾ ತಂತ್ರಗಾರಿಕೆಗಳನ್ನು ಬಳಸಿತ್ತು. ಖಾಸಗಿತನಕ್ಕೆ ಅಪಚಾರವೆಂಬ ಭೀತಿ ಹುಟ್ಟಿಸಿ ಆಧಾರ್‌ಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ಜನರನ್ನು ದಾರಿ ತಪ್ಪಿಸಲು ಯತ್ನಿಸಿತ್ತು. ಆ ಪಕ್ಷದ ಎಲ್ಲಾ ಪ್ರಯತ್ನಗಳು ಮಣ್ಣುಪಾಲಾಗಿದ್ದು, ಅದು ಭಾರೀ ಮುಖಭಂಗ ಅನುಭವಿಸಿದೆ” ಎಂದಿದ್ದಾರೆ.

“ಆಧಾರ್‌’ ಹಾದಿ
ಜನವರಿ, 2009: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಐಎ) ರಚನೆಗೆ ಯೋಜನಾ ಆಯೋಗದಿಂದ ಅಧಿಸೂಚನೆ. 

ನವೆಂಬರ್‌, 2012: ಆಧಾರ್‌ ಕಾರ್ಡ್‌ ಔಚಿತ್ಯ ಪ್ರಶ್ನಿಸಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಎಸ್‌. ಪುಟ್ಟಸ್ವಾಮಿ ಹಾಗೂ ಇತರರಿಂದ ಪಿಐಎಲ್‌.

ಮಾ. 3, 2016: ಲೋಕಸಭೆಯಲ್ಲಿ ಆಧಾರ್‌ ಮಸೂದೆ ಮಂಡನೆ; ಆನಂತರ ಹಣಕಾಸು ಮಸೂದೆಯಾಗಿ ಅನುಮೋದನೆ.

ಜ. 17, 2018: ಸುಪ್ರೀಂ ಕೋರ್ಟ್‌ನ ಐವರು ಮುಖ್ಯ ನ್ಯಾಯಮೂರ್ತಿಗಳಿಂದ ಆಧಾರ್‌ ಕುರಿತ ಅರ್ಜಿಗಳ ವಿಚಾರಣೆ ಆರಂಭ.

ಮಾ. 13, 2018: ವಿವಿಧ ಯೋಜನೆಗಳಿಗೆ ಆಧಾರ್‌ ಜೋಡಣೆ ಗಡುವನ್ನು ಮಾ. 31ರವರೆಗೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌.

ಸೆ. 26, 2018: ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ, ಆಧಾರ್‌ ನಿಯಮಾವಳಿಗಳಲ್ಲಿ ಕೆಲವನ್ನು ರದ್ದುಗೊಳಿಸಿದ ಸುಪ್ರೀಂ ನ್ಯಾಯಪೀಠ.

ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇನೆ. ಇದು ಈ ದೇಶದ ನಾಗರಿಕರಿಗೆ ಸಂದ ಜಯ. ಹಾಗಾಗಿ, ಈ ತೀರ್ಪು ನನಗೆ ಖುಷಿ ತಂದಿದೆ. 
ಮಮತಾ ಬ್ಯಾನರ್ಜಿ, ಪ. ಬಂಗಾಳ  ಸಿಎಂ

ತೀರ್ಪಿನ ವೇಳೆ ನ್ಯಾ. ಚಂದ್ರಚೂಡ್‌ ಹೇಳಿರುವ ಮಾತುಗಳು ಎಲ್ಲಾ ಸರ್ಕಾರಗಳಿಗೂ ಅದರಲ್ಲೂ ವಿಶೇಷವಾಗಿ ಅಧಿಕಾರಿ ಧೋರಣೆ ಹೊಂದಿರುವ ಎನ್‌ಡಿಎ ಸರ್ಕಾರಕ್ಕೆ ಪಾಠವಿದ್ದಂತಿದೆ. 
ಪಿ. ಚಿದಂಬರಂ, ಕೇಂದ್ರದ ಮಾಜಿ ಹಣಕಾಸು ಸಚಿವ

ಬ್ಯಾಂಕ್‌ ಖಾತೆ ತೆರೆಯಲು ಆಧಾರ್‌ ಕಡ್ಡಾಯವೇನಿಲ್ಲ. ಆದರೆ, ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿ ಬೇಕು. ಇನ್ನು, ಪ್ಯಾನ್‌ಗೆ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯ. ಈ ಮೂರೂ ನಿಯಮಗಳು ಒಟ್ಟಾರೆಯಾಗಿ ಏನು ಹೇಳುತ್ತವೆ? ಏನಾಗುತ್ತಿದೆ ಇಲ್ಲಿ? 
ಮಿಥುನ್‌

ಇನ್ನು, ಟ್ವಿಟರ್‌ನಲ್ಲಿ ಆಧಾರ್‌ ಲಿಂಕ್‌ ಇಲ್ಲದೇ ಜೋಕುಗಳನ್ನು, ಮೀಮ್‌ಗಳನ್ನು ಹರಿಬಿಡಬಹುದು. 
ನಿಲಾಂಕ ಘೋಷ್‌

ಸರ್ಕಾರದೊಂದಿಗೆ ಸಂವಹನ ನಡೆಸುವಾಗ ಆಧಾರ್‌ ಬಳಸಿ. ಇತರರೊಂದಿಗೆ ಸಂವಹನ ನಡೆಸುವಾಗ ಅನಾಧಾರ್‌ ಬಳಸಿ.
ರಮೇಶ್‌ ಶ್ರೀವಾಸ್ತಾವ್‌

ಖಾಸಗಿ ಕಂಪನಿಗಳು ಸಾರ್ವಜನಿಕರ ಆಧಾರ್‌ ಮಾಹಿತಿ ಪಡೆಯು ವುದನ್ನು ನಿಷೇಧಿಸಲಾಗಿದೆ. ಗೂಗಲ್‌, ಫೇಸ್‌ಬುಕ್‌ಗಳೇನಂತಾವೆ? 
ಡಾ. ಗಿಲ್‌

ಬ್ಯಾಂಕ್‌ ಖಾತೆಯನ್ನು ಎಳನೀರು   ಎಂದುಕೊಳ್ಳಿ. ಎಳನೀರನ್ನು ಸ್ಟ್ರಾ ಮೂಲಕ ಹೀರುತ್ತಿರುವ ಯುವತಿ ಪ್ಯಾನ್‌ ಕಾರ್ಡ್‌ ಆದರೆ, ಆಕೆಯ ಬಾಯಿಗೆ ಸ್ಟ್ರಾ ಹಾಕಿ ಆಕೆ ಹೀರಿದ‌ ಎಳನೀರು ಕುಡಿಯುವವ ಆಧಾರ್‌!
ನೀಕಿ 

Advertisement

Udayavani is now on Telegram. Click here to join our channel and stay updated with the latest news.

Next